ADVERTISEMENT

ತಂದೆಯ ಎದುರು ಕಣ್ಣೀರು!

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2011, 19:30 IST
Last Updated 29 ಸೆಪ್ಟೆಂಬರ್ 2011, 19:30 IST
ತಂದೆಯ ಎದುರು  ಕಣ್ಣೀರು!
ತಂದೆಯ ಎದುರು ಕಣ್ಣೀರು!   

ವೇದಿಕೆ ಮೇಲೆ ಬೆರಳೆಣಿಕೆ ತಪ್ಪುವಷ್ಟು ಜನ. ಅವರಲ್ಲಿ ಕೆಲವರು ಜನಪ್ರಿಯರು. ಗಣೇಶ್, ಅಜಯ್ ರಾವ್, ದುನಿಯಾ ವಿಜಯ್, ರಾಕ್‌ಲೈನ್ ವೆಂಕಟೇಶ್, ಮುನಿರತ್ನ, ಸಾ.ರಾ.ಗೋವಿಂದು, ಎಂ.ಎನ್.ಕುಮಾರ್... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. `ಬಾಡಿಗಾರ್ಡ್~ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಸಮಾರಂಭವನ್ನು ಜಗ್ಗೇಶ್ ದೊಡ್ಡ ಮಟ್ಟದಲ್ಲೇ ಕಳೆಗಟ್ಟಿಸಿದ್ದರು.

ಕಾಲುಮೇಲೆ ಕಾಲು ಹಾಕಿ ಕೂತು ನಾಚಿಕೆ ನಟಿಸುತ್ತಿದ್ದ ಡೈಸಿ ಷಾ ಹಾಗೂ ಅವರ ಪಕ್ಕದಲ್ಲಿ ನಗು ತುಳುಕಿಸುತ್ತಿದ್ದ ಸ್ಫೂರ್ತಿ. ಚಿತ್ರೀಕರಣ ಮುಗಿಸಿ ಥೈಲಿಯನ್ನು ತುಸು ಹಗುರು ಮಾಡಿಕೊಂಡ ಜಗ್ಗೇಶ್ ಪತ್ನಿ ಪರಿಮಳಾ.

ಅತಿಥಿ ಅಭ್ಯಾಗತರ ಭಾರೀ ದಂಡು. ರಂಗುರಂಗಾಗಿದ್ದ ವಾತಾವರಣದಲ್ಲೂ ತುಸು ಮೌನ ಆವರಿಸಿದ್ದು ಜಗ್ಗೇಶ್ ಭಾವುಕರಾಗಿ ಮಾತನಾಡತೊಡಗಿದಾಗ. ಗಾಲಿಕುರ್ಚಿಯ ಮೇಲೆ ಕೂತಿದ್ದ ತಂದೆಯನ್ನು ನೋಡುತ್ತಲೇ ಜಗ್ಗೇಶ್ ಡಿಸ್ಕವರಿ ಚಾನೆಲ್‌ನ ಕಾರ್ಯಕ್ರಮವೊಂದನ್ನು ಮೆಲುಕುಹಾಕಿದರು.
 
ಅದನ್ನು ಹೇಳುತ್ತಲೇ ಅವರು ಗದ್ಗದಿತರಾದರು. ಮಾತು ಸಾಕೆನ್ನಿಸಿತು ಎಂಬಂತೆ ಸಂಗೀತ ನಿರ್ದೇಶಕ ವಿನಯ್‌ಚಂದ್ರ ಅವರಿಗೆ, `ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ~ ಎಂಬ ಕಿವಿಮಾತು ಹಾಕಿದರು.

ಜಗ್ಗೇಶ್ ಮಾವ ಕೂಡ ವೇದಿಕೆ ಮೇಲಿದ್ದರು. ಹಾಗಾಗಿ ಸಮಾರಂಭಕ್ಕೆ ಕೌಟುಂಬಿಕ ಸಮಾರಂಭದ ಚೌಕಟ್ಟೂ ಇತ್ತು.

`ನಾಯಕಿಯರ ಜೊತೆ ಇವರು ಡಾನ್ಸ್ ಮಾಡುವುದನ್ನು ನೋಡೋಕಾಗಲ್ಲ~ ಎಂದು ಪರಿಮಳಾ ಜಗ್ಗೇಶ್ ಕಾಲೆಳೆದಾಗ ನಗದವರು ಕಡಿಮೆ. ಛಾಯಾಗ್ರಾಹಕ ಅಶೋಕ್ ರಾಮನ್, ಸಂಗೀತ ಸಂಯೋಜಕ ವಿನಯ್‌ಚಂದ್ರ, ನಾಯಕಿಯರಾದ ಡೈಸಿ ಷಾ, ಸ್ಫೂರ್ತಿ ಎಲ್ಲರೂ ಧನ್ಯವಾದಕ್ಕೇ ಹೆಚ್ಚು ಮಾತನ್ನು ಖರ್ಚು ಮಾಡಿದರು.

ಜಗ್ಗೇಶ್-ಪರಿಮಳಾ ಇಬ್ಬರನ್ನೂ ರಾಕ್‌ಲೈನ್ `ಯುವ ಪ್ರೇಮಿಗಳು~ ಎಂದು ಸಂಬೋಧಿಸಿದರು. ಸಂಕೋಚದ ಮುದ್ದೆಯಂತಿರುವ ನಿರ್ದೇಶಕ ಆನಂದ್ ಅವರಲ್ಲೂ ಆಡಲು ಹೆಚ್ಚು ಮಾತುಗಳಿರಲಿಲ್ಲ.

ಅಕ್ಷಯ್ ಕಂಪೆನಿಯು ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಚಿತ್ರದ ಕೆಲವು ಹಾಡುಗಳನ್ನು ಪ್ರದರ್ಶಿಸುವಾಗಲೂ ಜಗ್ಗೇಶ್ ಆಪ್ತೇಷ್ಟರಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಲೇ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.