ADVERTISEMENT

ತಾಯಿಯತ್ತ ರಾಮನಾಥ್ ಚಿತ್ತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

`ಬುದ್ಧಿವಂತ~ ಚಿತ್ರದ ನಂತರ ತಣ್ಣಗಾದಂತಿದ್ದ ರಾಮನಾಥ್ ಋಗ್ವೇದಿ ತಲೆ ಮೇಲೀಗ ಮತ್ತೆ ನಿರ್ದೇಶಕನ ಟೋಪಿ. ಎತ್ತಿಕೊಂಡಿರುವ ವಸ್ತು ಮಾತ್ರ ಮಾಮೂಲಿ ಕಮರ್ಷಿಯಲ್ ಚಿತ್ರದ ಧಾಟಿಯದ್ದಲ್ಲ.

ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಕೆಲಸ ಮಾಡಿದ ಅವರು ಸ್ತ್ರೀ ಪ್ರಧಾನ ಚಿತ್ರ ನಿರ್ದೇಶಿಸುವ ಮೂಲಕ ದೀರ್ಘ ಕಾಲದ  ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು `ಅಧಿಕಾರ~.

`ಜನ ಯಾವ ಕಾಲದಲ್ಲಿ ಎಂಥ ಸಿನಿಮಾ ಮೆಚ್ಚಿಕೊಳ್ಳುತ್ತಾರೆ ಅಂತ ಹೇಳುವುದು ಕಷ್ಟ. ಯಾವಾಗಲೂ ಕೌಟುಂಬಿಕ ಸಿನಿಮಾಗಳಿಗೆ ಪ್ರೇಕ್ಷಕರು ಇದ್ದೇ ಇರುತ್ತಾರೆ. ಪ್ರತೀ ಮನೆಯಲ್ಲಿ ಹೆಣ್ಣು ಇರುವವರೆಗೂ ಇಂಥ ಕತೆಯಗಳು ಹಳತಾಗುವುದಿಲ್ಲ~ ಎಂಬುದು ಋಗ್ವೇದಿ ಅಭಿಪ್ರಾಯ.
 
ತಾಯಿಯೊಬ್ಬಳು ಶಾಂತಮಾರ್ಗದಲ್ಲಿ ಮನೆಯವರ ಮನಃಪರಿವರ್ತನೆ ಮಾಡುವ ಕತೆಗೆ `ಅಧಿಕಾರ~ ಎಂದು ಹೆಸರಿಡುವುದಕ್ಕೆ ಕಾರಣ ಕಮರ್ಷಿಯಲ್ ದೃಷ್ಟಿಕೋನ ಎನ್ನುವ ಅವರಿಗೆ ಸಿನಿಮಾ ಗೆದ್ದೇ ಗೆಲ್ಲುತ್ತದೆಂಬ ವಿಶ್ವಾಸವಿದೆ.

`ತಾಯಿಯನ್ನು ಎಲ್ಲದಕ್ಕೂ ಆಶ್ರಯಿಸುವ ಕುಟುಂಬದವರು ಆಕೆಯ ಅಭಿಪ್ರಾಯಗಳನ್ನು ಮಾತ್ರ ಧಿಕ್ಕರಿಸುತ್ತಾರೆ. ಇಂಥ ಒಂದು ಕತೆಯನ್ನು ಆಧರಿಸಿ ಸಿನಿಮಾ ರೂಪಿಸುತ್ತಿದ್ದೇನೆ. ಹೆಣ್ಣು ತನ್ನ ಸ್ಥಾನಮಾನ ಉಳಿಸಿಕೊಂಡು ಉಸಾಬರಿಗಳನ್ನು ನಿವಾರಿಸುವುದೇ ಕತೆಯ ಸಾರಾಂಶ.
 
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ದಿನಗಳಿಂದಲೂ ಸ್ತ್ರೀಪ್ರಧಾನ ಸಿನಿಮಾ ಮಾಡಬೇಕೆಂಬ ಹಂಬಲ ಇತ್ತು. ಹಿರಿಯ ನಿರ್ಮಾಪಕ ಕೆ.ಸಿ.ಎನ್.ವೇಣುಗೋಪಾಲ್ ಅವರಿಗೆ ಕತೆ ಹೇಳಿದಾಗ ಅವರು ಮಾಡೋಣ ಎಂದರು. ತಂದೆ-ತಾಯಿ ಪಾತ್ರಕ್ಕೆ ಅಶೋಕ್ ಮತ್ತು ವಿನಯಾ ಪ್ರಸಾದ್ ಅವರನ್ನು ಕೇಳಿದೆ.
 
ಸಿನಿಮಾದಲ್ಲಿ ಅವರದೇ ಪ್ರಮುಖ ಪಾತ್ರ. ಸಂಪೂರ್ಣವಾಗಿ ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತದೆ. ಜಹಗೀರದಾರರ ಮನೆತನವನ್ನು ಪ್ರಮುಖವಾಗಿಟ್ಟುಕೊಂಡು ಕತೆ ಹೆಣೆಯಲಾಗಿದೆ.
 
ಸಂಭಾಷಣೆ ಬೆಂಗಳೂರು ಶೈಲಿಯಲ್ಲಿದ್ದು, ಆಚರಣೆಗಳು ಉತ್ತರ ಕರ್ನಾಟಕದವು. ಮಕ್ಕಳು ತಂದೆ-ತಾಯಿಯೊಂದಿಗೆ ಕುಳಿತು ನೋಡಬೇಕಾದ ಸಿನಿಮಾ ಇದು~ ಎಂದು ಋಗ್ವೇದಿ ವಿವರವಾಗಿ ಮಾತನಾಡಿದರು.

ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ವಿನಯಾ ಪ್ರಸಾದ್ ಅವರಿಗೂ ಸಿನಿಮಾ ಕತೆ ಹಳೆಯ ಟ್ರೆಂಡ್ ಎನಿಸಿಲ್ಲ. `ಕರುಳಿನ ಕೂಗು ಸಿನಿಮಾ ನಂತರ ಅಂಥದ್ದೇ ಅವಕಾಶ ಸಿಕ್ಕಿದೆ. ಗೃಹಿಣಿಯ ಸ್ಥಾನಮಾನವನ್ನು ಸಿನಿಮಾದಲ್ಲಿ ಮನಮುಟ್ಟುವಂತೆ ತೋರಿಸಲಾಗುತ್ತಿದೆ. ಎಲ್ಲರನ್ನೂ ಪ್ರೀತಿಯಿಂದ ಗೆಲ್ಲುವ ಪಾತ್ರ ನನ್ನದು.

ಕೂಗಾಡಿ, ಹೋರಾಡಿ ನಾನು ಅಧಿಕಾರ ಸ್ಥಾಪಿಸುವುದಿಲ್ಲ. ಎಲ್ಲರಿಗೂ ನಿಮ್ಮ ತಪ್ಪು ಇಲ್ಲಿದೆ ಎಂದು ತೋರಿಸಿ ತಿದ್ದಿಕೊಳ್ಳಲು ಅವಕಾಶ ನೀಡುವೆ~ ಎಂದು ವಿನಯಾ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ಮೂರು ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶಿಸಿರುವ ದೇವಿ ಅವರು ಹತ್ತು ವರ್ಷಗಳ ನಂತರ `ಅಧಿಕಾರ~ ಚಿತ್ರಕ್ಕೆ ಕೆಲಸ ಮಾಡಲು ಆಗಮಿಸಿದ್ದಾರೆ. ಅವರು ಕನ್ನಡದಲ್ಲಿ ಕೆಲಸ ಮಾಡಿದ ಕೊನೆಯ ಸಿನಿಮಾ `ಶಬ್ದವೇದಿ~. `ನಾನು ಮೂಲತಃ ಶಾಸ್ತ್ರೀಯ ನರ್ತಕಿ. ಈ ಸಿನಿಮಾಗೆ ಇಂದಿನ ದಿನಮಾನಕ್ಕೆ ತಕ್ಕಂತೆ ನೃತ್ಯ ಸಂಯೋಜಿಸಿದ್ದೇನೆ~ ಎಂದು ಹೇಳಿಕೊಂಡರು.

ಛಾಯಾಗ್ರಾಹಕ ಮನೋಹರ್ ಅವರಿಗೆ ಸಿನಿಮಾದ ನಿರೂಪಣೆ ಹೊಸ ಟ್ರೆಂಡ್‌ಗೆ ತಕ್ಕಂತೆ ಇದೆ ಎನಿಸಿದೆ. ಸಂಭಾಷಣೆ ಬರೆದಿರುವ ಅನಂತ್ ಹಾಜರಿದ್ದರು. ಉಳಿದಂತೆ ಸುಧಾ ಚಂದ್ರನ್, ಸುರೇಶ್‌ರೈ, ಸಂಗೀತಾ, ಶಾಂತಲಾ ತಾರಾಗಣದಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.