ADVERTISEMENT

ತೀರ್ಥಹಳ್ಳಿಯಲ್ಲಿ ಕವಿ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಪುನೀತ್ ಗೌಡ ಮತ್ತು ಶೋಭಿತಾ
ಪುನೀತ್ ಗೌಡ ಮತ್ತು ಶೋಭಿತಾ   

ಮಲೆನಾಡಿನ ತೀರ್ಥಹಳ್ಳಿಗೂ ಕವಿಗಳಿಗೂ ಇರುವ ನಂಟು ಕನ್ನಡದ ಓದುಗರಿಗೆ ಗೊತ್ತಿರುವಂಥದ್ದೇ. ಇಷ್ಟು ವರ್ಷ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದ ಎಂ.ಎಸ್. ತ್ಯಾಗರಾಜ್ ಅವರು ಈಗ ತೀರ್ಥಹಳ್ಳಿ ಪರಿಸರದಲ್ಲಿ ಒಂದು ಸಿನಿಮಾ ಚಿತ್ರೀಕರಣ ನಡೆಸಿದ್ದಾರೆ. ಅದಕ್ಕೆ ಅವರು ‘ಕವಿ’ ಎಂದು ಹೆಸರಿಟ್ಟಿದ್ದಾರೆ. ಇದು ಮನುಷ್ಯನೊಬ್ಬ ಕವಿಯಾಗುವ ಪ್ರಕ್ರಿಯೆಯ ಕಥೆ ಇರುವ ಸಿನಿಮಾ ಎಂದು ಅವರು ಹೇಳಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು, ಹಾಡುಗಳ ಸಿ.ಡಿ. ಬಿಡುಗಡೆ ಮಾಡಲು ಅವರು ತಮ್ಮ ತಂಡದ ಜೊತೆ ಒಂದು ಪುಟ್ಟ ಕಾರ್ಯಕ್ರಮ ಆಯೋಜಿಸಿದ್ದರು. ಅದರ ಜೊತೆಯಲ್ಲೇ ಪತ್ರಿಕಾಗೋಷ್ಠಿಯನ್ನೂ ಇಟ್ಟುಕೊಂಡಿದ್ದರು.

‘ಸಂಗೀತ ನಿರ್ದೇಶಕನ ಕೆಲಸ ಆರಾಮದ್ದು. ಅದಕ್ಕೆ ಹೋಲಿಸಿದರೆ ನಿರ್ದೇಶನದ ಕೆಲಸ ಕಷ್ಟದ್ದು’ ಎಂದು ಹೇಳುತ್ತಲೇ ಮಾತು ಆರಂಭಿಸಿದರು ತ್ಯಾಗರಾಜ್.

ADVERTISEMENT

‘ನಾನು ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಇದು. ಸಿನಿಮಾ ಹೆಸರು ಕವಿ ಎಂದು ಇಟ್ಟಿರುವ ಮಾತ್ರಕ್ಕೆ ಇದನ್ನು ಕಮರ್ಷಿಯಲ್ ಅಲ್ಲದ ಸಿನಿಮಾ ಎಂದು ಭಾವಿಸಬಾರದು. ಇದರಲ್ಲಿ ಕಮರ್ಷಿಯಲ್ ಆಯಾಮ ಕೂಡ ಇದೆ’ ಎನ್ನುವುದನ್ನು ಸ್ಪಷ್ಟಪಡಿಸಿದರು.

‘ಪ್ರತಿ ಮನುಷ್ಯನಲ್ಲೂ ಒಬ್ಬ ಕವಿ ಇರುತ್ತಾನೆ. ಸಿನಿಮಾದ ನಾಯಕ ಯಾರ ಹಂಗೂ ತನಗೆ ಬೇಡ ಎನ್ನುವಂತೆ ಇರುತ್ತಾನೆ. ಆದರೆ ಆತ ತನ್ನವರೆನ್ನುವ ಎಲ್ಲರನ್ನೂ ಕಳೆದುಕೊಳ್ಳುತ್ತಾನೆ. ಎಲ್ಲರೂ ತನಗೆ ಬೇಕು ಎನ್ನುವ ಹೊತ್ತಿಗೆ ಆತ ಎಲ್ಲರನ್ನೂ ಕಳೆದುಕೊಂಡಾಗಿರುತ್ತದೆ. ನೋವು ಅವನನ್ನು ಹೇಗೆ ಕವಿಯಾಗಿ ರೂಪಿಸುತ್ತದೆ ಎಂಬುದು ಸಿನಿಮಾದಲ್ಲಿ ಇದೆ‌’ ಎಂದರು ತ್ಯಾಗರಾಜ್. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳು ಇವೆಯಂತೆ.

ಪುನೀತ್ ಗೌಡ ಅವರು ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿ, ನಾಯಕನ ಪಾತ್ರವನ್ನೂ ನಿಭಾಯಿಸಿದ್ದಾರೆ. ‘ಮೊದಲ ಬಾರಿಗೆ ಸಿನಿಮಾ ನಿರ್ಮಾಣದ ಕೆಲಸ‌ಕ್ಕೆ ಕೈಹಾಕಿದ್ದೇನೆ. ಸಿನಿಮಾ ಮಾಡಬೇಕು, ನಟನೆ‌ ಮಾಡಬೇಕು ಎಂಬ ಬಯಕೆ ಚಿಕ್ಕಂದಿನಿಂದಲೂ ನನ್ನಲ್ಲಿ ಇತ್ತು. ಒಬ್ಬ ಬೇಜವಾಬ್ದಾರಿ ಮನುಷ್ಯ ತನ್ನ ನೋವನ್ನು ಹೇಗೆ ಅನುಭವಿಸುತ್ತಾನೆ, ಆತ ಹೇಗೆ ಕವಿಯಾಗುತ್ತಾನೆ ಎಂಬುದು ಚಿತ್ರದ ಕಥೆ’ ಎಂದರು ಪುನೀತ್.

ಈಚೆಗೆ ತೆರೆಕಂಡ ‘ಅಟೆಂಪ್ಟ್‌ ಟು ಮರ್ಡರ್‌’ ಚಿತ್ರದಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ಈ ಚಿತ್ರದ ನಾಯಕಿ. ‘ಹಂಸ‌ ಎನ್ನುವ ಹಳ್ಳಿ ಹುಡುಗಿಯ ಪಾತ್ರ ನನ್ನದು. ನನ್ನ ಕುಟುಂಬಕ್ಕೆ ಒಬ್ಬ ಕವಿ ಬರಬೇಕು ಎಂಬ ಆಸೆ ನನ್ನಲ್ಲಿ ಇರುತ್ತದೆ. ಒಬ್ಬ ಪೊರ್ಕಿ ವ್ಯಕ್ತಿಯಲ್ಲಿ ಕವಿ ಇದ್ದಾನೆ ಎಂದು ಭಾವಿಸಿ ನಾನು ಲವ್ ಮಾಡುತ್ತೇನೆ’ ಎಂದರು ಶೋಭಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.