ADVERTISEMENT

ದೌಲತ್ನಲ್ಲಿ ಬಜೆಟ್ ಪಾಠ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST
ದೌಲತ್ನಲ್ಲಿ ಬಜೆಟ್ ಪಾಠ
ದೌಲತ್ನಲ್ಲಿ ಬಜೆಟ್ ಪಾಠ   

ಸಣ್ಣ ಬಜೆಟ್‌ನಲ್ಲಿ ದೊಡ್ಡ ಚಿತ್ರ ಮಾಡುವ ಕಲೆ ಗೊತ್ತಿಲ್ಲದವರು `ದೌಲತ್~ ಚಿತ್ರದ ನಿರ್ಮಾಪಕ ಮನೋಹರ್ ಬಳಿ ಮನೆಪಾಠಕ್ಕೆ ಹೋಗಬಹುದು. ಏಕೆಂದರೆ ಇವರು ಸಣ್ಣ ಬಜೆಟ್‌ನಲ್ಲಿ ದೊಡ್ಡ ಚಿತ್ರ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರಂತೆ.

ಮೈಸೂರಿನಲ್ಲಿ `ದೌಲತ್~ ಚಿತ್ರದ ಮುಹೂರ್ತದ ಸಂದರ್ಭದಲ್ಲಿ `ನಮ್ಮದು ಸಣ್ಣ ಬಜೆಟ್‌ನ ದೊಡ್ಡ ಚಿತ್ರ~ ಎಂದು ಮನೋಹರ್ ಹೇಳಿಕೊಂಡರು. `ಹೀಗೂ ಉಂಟೆ?~ ಎಂದು ಪತ್ರಕರ್ತರು ದೊಡ್ಡದಾಗಿ ಬಾಯಿ ತೆರೆದರು. ಮನೋಹರ್ ಸ್ವಲ್ಪವೂ ಹಿಂಜರಿಕೆ ಇಲ್ಲದೆ ಸಣ್ಣ ಬಜೆಟ್‌ನಲ್ಲಿ ದೊಡ್ಡ ಚಿತ್ರ ಮಾಡುವ ರಹಸ್ಯವನ್ನು ಬಿಚ್ಚಿಡುತ್ತಾ ಹೋದರು.

ಚಿತ್ರಕ್ಕೆ ಎಷ್ಟುಬೇಕು ಅಷ್ಟನ್ನೇ ಖರ್ಚು ಮಾಡಬೇಕು. ಅನಗತ್ಯವಾಗಿ ನಯಾಪೈಸೆಯನ್ನೂ ಬಿಚ್ಚಬಾರದು. ಕಲಾವಿದರು, ತಂತ್ರಜ್ಞರು ಎಲ್ಲರೂ ಚಿತ್ರೀಕರಣ ನಡೆಯುವ ಊರಿನವರೇ ಆಗಿದ್ದರೆ ಒಳ್ಳೆಯದು. ಅದರಿಂದಾಗಿ ಅವರ ಲಾಡ್ಜ್ ಬಾಡಿಗೆ, ಊಟ, ತಿಂಡಿ ಖರ್ಚು ಉಳಿಯುತ್ತದೆ.

ನಿಮ್ಮದೇ ಯೂನಿಟ್ ಇದ್ದರೆ ಇನ್ನೂ ಅನುಕೂಲ. ಇಷ್ಟೇ ಅಲ್ಲದೇ ನಿರ್ಮಾಪಕರ ಮಗನೇ ಹೀರೋ ಆದರೆ ಚಿತ್ರದ ಅರ್ಧ ಬಜೆಟ್ ಉಳಿತಾಯವಾದಂತೆ. ಒಂದು ಅಥವಾ ಎರಡು ಸ್ಥಳದಲ್ಲಿ ರೀಲು ಸುತ್ತಿದರೆ ಅಲ್ಲಿಗೆ ಮುಗಿಯಿತು.

ಇಂತಹ ಹತ್ತಾರು ಉಚಿತ ಸಲಹೆಗಳನ್ನು ಮನೋಹರ್ ನೀಡಲು ಕಾರಣವಿದೆ. ಇಲ್ಲಿಯವರಿಗೆ 212 ಚಿತ್ರಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವ ಅವರದು. ಅನಗತ್ಯವಾಗಿ ಖರ್ಚಾಗುವುದನ್ನು ತಪ್ಪಿಸಿ, ಅಗತ್ಯವಾದ ಖರ್ಚು ಮಾಡಿದರೆ ಸಣ್ಣ ಬಜೆಟ್‌ನಲ್ಲಿ ದೊಡ್ಡ ಚಿತ್ರ ಮಾಡಬಹುದು ಎನ್ನುವುದು ಅವರ ಅನುಭವ ಸಾರ.

ಮನೋಹರ್ ತಮ್ಮ ಪುತ್ರ ಬಂಗಾರಪ್ಪನಿಗಾಗಿಯೇ `ದೌಲತ್~ ನಿರ್ಮಿಸುತ್ತಿದ್ದಾರೆ. ಮಗನಿಗೆ ಬಾಲ್ಯದಿಂದಲೂ ಸಿನಿಮಾ ಹುಚ್ಚು. ಆತನ ಆಸೆಗೆ ನೀರೆರೆಯುವ ಕೆಲಸವನ್ನು ತಂದೆಯಾಗಿ ಮಾಡುತ್ತಿದ್ದಾರೆ. ತಮ್ಮ ಬಳಿ ಅನುಭವ ಸೇರಿದಂತೆ ಎಲ್ಲವೂ ಇರುವಾಗ ಸುಮ್ಮನೆ ಏಕೆ ಕೂರಬೇಕು ಎಂದು ನಿರ್ಧರಿಸಿ `ದೌಲತ್~ಗೆ ಕೈ ಹಾಕಿದ್ದಾರೆ.

ಮನೋಹರ್ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಕಟ್ಟಾ ಅಭಿಮಾನಿ. ಅವರ `ಆಕಾಶ್~ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅನ್ನದಾತ ಎಂದು ಪೂಜಿಸುತ್ತಾರೆ. ಅವರ ಮೇಲಿನ ಅಭಿಮಾನದಿಂದಾಗಿ ಮಗನಿಗೆ `ಬಂಗಾರಪ್ಪ~ ಎಂದೇ ಹೆಸರಿಟ್ಟಿದ್ದಾರೆ. ಆದರೆ ಆತನನ್ನು `ಬಂಗಾರು~ ಎಂದು ಕರೆಯುತ್ತಾರೆ. ಇದಕ್ಕೂ ಕಾರಣವಿದೆ. ತಮ್ಮ ಮಗನನ್ನು ಬಂಗಾರಪ್ಪ ಎಂದು ಕರೆದರೆ ತನ್ನ ಅನ್ನದಾತನಿಗೆ ಅಗೌರವ ತೋರಿದಂತೆ ಎನ್ನುವ ಭಾವನೆ.

`ದೌಲತ್~ ಚಿತ್ರಕ್ಕೆ ಗಂಗಾಧರ್ ಆ್ಯಕ್ಷನ್, ಕಟ್ ಹೇಳುತ್ತಿದ್ದಾರೆ. ಶಿವಮಣಿ, ಓಂ ಪ್ರಕಾಶ್ ರಾವ್, ಕೆ.ವಿ.ಜಯರಾಂ, ಯೋಗರಾಜ್ ಭಟ್ ಸೇರಿದಂತೆ ಹಲವರ ಬಳಿ ಕೆಲಸ ಮಾಡಿದ ಅನುಭವ ಇದೆಯಂತೆ. ಎಲ್ಲರಲ್ಲೂ ಇರುವ ಕ್ಷಣಿಕದ ಸಂಪತ್ತೇ ಈ `ದೌಲತ್~ ಎನ್ನುವುದು ಕಥೆಯ ದ್ರವ್ಯ.

ಚಿತ್ರದ ನಾಯಕ ಬಂಗಾರು, ನಾಯಕಿ ತನುಷಾ ಇಬ್ಬರೂ ಮೈಸೂರಿನವರೇ. ತುನುಷಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ `ಕುಣಿಯೋಣು ಬಾರಾ~ ಸರಣಿಯಲ್ಲಿ ಭಾಗವಹಿಸಿದ್ದಾರೆ. ಈಗ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 96 ಅಂಕಗಳಿಸಿದ್ದು, ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾಳೆ.
 
ನಟನೆ ಹವ್ಯಾಸಕ್ಕೇ ಸೀಮಿತವಂತೆ. ಕೃಷ್ಣ ಸಾರಥಿ ಛಾಯಾಗ್ರಹಣ, ರವಿಶಂಕರ್ ಸಂಗೀತ ಇರುವ `ದೌಲತ್~ ತಾರಾಗಣದಲ್ಲಿ ಶಂಕರ್ ಅಶ್ವತ್ಥ್, ಬ್ಯಾಂಕ್ ಜನಾರ್ದನ, ಸಿ.ಆರ್. ಸಿಂಹ, ಸುಂದರರಾಜ್, ಮೈಸೂರು ಶ್ರೀಶ ಮುಂತಾದವರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.