ADVERTISEMENT

ನಾನಿನ್ನೂ ಬದುಕಿದ್ದೇನೆ: ಕನಕ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

`ಇದು ಮಾಧ್ಯಮಗಳು ಹಬ್ಬಿಸಿದ ಸುಳ್ಳು ವರದಿ. ನಾನಿನ್ನೂ ಜೀವಂತವಾಗಿದ್ದೇನೆ' ಎಂದು ನಟಿಮಣಿ ಕನಕ ಮಹಾಲಕ್ಷ್ಮಿ ಉಸುರಿದ್ದಾರೆ.
ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ಈ ನಟಿಮಣಿ ಕೇರಳದ ಅಳಪ್ಪುಳ ನಗರದಲ್ಲಿರುವ ಪಲ್ಲೈಟಿವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಸುನೀಗಿದ್ದಾರೆ ಎಂದು ವರದಿಯಾಗಿತ್ತು. ಇವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಮಾಹಿತಿ ಹರಿದಾಡುತ್ತಿತ್ತು.

ಈ ವಿಷಯ ತಿಳಿಯುತ್ತಿದ್ದಂತೆ ಸಂಜೆ ವೇಳೆಗೆ ಮಾಧ್ಯಮದವರನ್ನು ಕರೆಸಿ, `ನಾನು ಸತ್ತಿಲ್ಲ. ನನಗೆ ಕ್ಯಾನ್ಸರ್ ಕೂಡ ಇಲ್ಲ. ಅದರ ಭಯವೂ ಇಲ್ಲ. ನಾನು ಆರೋಗ್ಯವಾಗಿದ್ದೇನೆ.

ಕೆಲವರು ಇದು ಪ್ರಚಾರಕ್ಕಾಗಿ ನಡೆಸುತ್ತಿರುವ ಸ್ಟಂಟ್ ಎಂದು ಬಣ್ಣಿಸಿದ್ದಾರೆ. ನನಗನಿಸುವ ಮಟ್ಟಿಗೆ ಯಾರೂ ಬದುಕಿರುವಾಗಲೇ ಸತ್ತಿದ್ದೇವೆ ಎಂದು ಹೇಳಿಕೊಳ್ಳಲು ಬಯಸುವುದಿಲ್ಲ. ಸಿನಿಮಾ ಮಂದಿಯೂ ಅಷ್ಟೇ' ಎಂದು ನೇರವಾಗಿ ಉತ್ತರಿಸಿದ್ದಾರೆ. ಕನಕ ಮಹಾಲಕ್ಷ್ಮೀ ತಮಿಳಿನ ಖ್ಯಾತ ನಟಿ ದೇವಕಿ ಅವರ ಮಗಳು. ಮಲಯಾಳಂನ ಹೆಸರಾಂತ ನಟರಾದ ಮಮ್ಮುಟ್ಟಿ, ಮೋಹನಲಾಲ್ ಜೊತೆ ಇವರು ನಟಿಸಿದ್ದಾರೆ. `ನರಸಿಂಹ', `ವಿಯೆಟ್ನಾಂ ಕಾಲೋನಿ', `ಗೋಲಾಂತರ ವಾರ್ತಾ', `ಪಿಂಗಾಮಿ', `ಗಾಡ್ ಫಾದರ್', `ಪೆರಿಯ ಕುಟುಂಬಮ್', `ಜಲ್ಲಿಕಟ್ಟು ಕಳೈ' ಮೊದಲಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದ ಇವರು ಕೆಲಕಾಲ ಸಿನಿಮಾದಿಂದ ದೂರವಿರಲು ವೈಯಕ್ತಿಕ ಕಾರಣಗಳಿದ್ದವು ಎಂದೂ ಹೇಳಿಕೊಂಡಿದ್ದಾರೆ.

`ವೈಯಕ್ತಿಕ ಕಾರಣದಿಂದ ಚಿತ್ರರಂಗದಿಂದ ಕೆಲಕಾಲ ಚಿತ್ರರಂಗದಿಂದ ದೂರವಾಗಿದ್ದೆ. ಸದ್ಯದಲ್ಲೇ ತೆರೆಮೇಲೆ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದೇನೆ. ಮತ್ತೆ ನಟಿಸಲು ಸಾಕಷ್ಟು ಅವಕಾಶಗಳೂ ನನ್ನನ್ನು ಹುಡುಕಿಕೊಂಡು ಬಂದಿವೆ. ಆದರೆ ಉತ್ತಮವಾದ ಹಾಗೂ ಹೊಂದುವ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ' ಎಂದು ಹೇಳುವ ಮೂಲಕ ತಮ್ಮ ಸಾವಿನ ಕುರಿತು ಎದ್ದಿದ್ದ ಊಹಾಪೋಹವನ್ನು ಅಲ್ಲಗಳೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.