ಒಂದು ಸರಳ ಕತೆಗೆ ರಕ್ತಮಾಂಸ ತುಂಬುವುದು ಹೇಗೆ ಎನ್ನುವುದಕ್ಕೆ ತೆಲುಗು ಸಿನಿಮಾ `ಈಗ~ ಒಂದೊಳ್ಳೆ ನಿದರ್ಶನ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಭರ್ಜರಿಯಾಗಿ ತೆರೆ ಕಂಡಿರುವ `ಈಗ~ ಅಮೆರಿಕದಲ್ಲಿ ಬಾಲಿವುಡ್‌ನ `ಬೋಲ್ ಬಚ್ಚನ್~ ಚಿತ್ರವನ್ನೂ ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣುತ್ತಿದೆ.
ಇಂಗ್ಲೆಂಡ್, ಅರಬ್ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನ ಪ್ರೇಕ್ಷಕರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುದೀಪ್ ಅಭಿನಯಿಸಿರುವುದರಿಂದ ಚಿತ್ರದ ಕುರಿತು ಕನ್ನಡಿಗರ ಕುತೂಹಲವೂ ಹೆಚ್ಚಿದೆ.
ಚಿತ್ರದ ಯಶಸ್ಸಿನ ರೂವಾರಿ ನಿರ್ದೇಶಕ ಎಸ್.ಎಸ್.ರಾಜಮೌಳಿ.
ತಮ್ಮ ತಂದೆ ಚಿಕ್ಕಂದಿನಲ್ಲಿ ಹೇಳಿದ ಕತೆಗೆ ರೆಕ್ಕೆ ಪುಕ್ಕ ಕಟ್ಟಿ `ಈಗ~ ಎಂಬ ಮಾಯಾಕೀಟವನ್ನು ತೇಲಿಬಿಟ್ಟವರು ಅವರು. ಇದುವರೆಗೆ ಎಂಟು ಯಶಸ್ವಿ ಚಿತ್ರಗಳನ್ನು ನೀಡಿದ ತಾರಾ ವರ್ಚಸ್ಸಿನ ನಿರ್ದೇಶಕನೊಂದಿಗೆ `ಸಿನಿಮಾ ರಂಜನೆ~ ನಡೆಸಿದ ಮಾತುಕತೆ ಇಲ್ಲಿದೆ. ಈ ಸಂದರ್ಶನ ರಾಜಮೌಳಿ ಅವರ ಸಿನಿಮಾ ಬದ್ಧತೆ, ಕನವರಿಕೆ ಹಾಗೂ ಮಹತ್ವಾಕಾಂಕ್ಷೆಗಳನ್ನು ಕಾಣಿಸುವಂತಿದೆ.
`ಕರ್ನಾಟಕದ ಬಂದೂಕು, ಆಂಧ್ರದ ಬುಲೆಟ್ಟು~ ಎನ್ನುವುದು `ಈಗ~ದಲ್ಲಿ ಬರುವ ಒಂದು ಡೈಲಾಗ್. ಈ ಮಾತನ್ನು ನಿಮಗೂ ಅನ್ವಯಿಸಬಹುದು ಅಲ್ಲವೆ?
(ನಗು). ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪ್ ನನ್ನ ಹುಟ್ಟೂರು. ಆಂಧ್ರಪ್ರದೇಶದವರಾದ ನನ್ನ ಹಿರೀಕರು ಅಲ್ಲಿ ಎಷ್ಟೋ ವರ್ಷಗಳ ಕಾಲ ನೆಲೆಸಿದ್ದರು. ನಾನು ಹುಟ್ಟಿ ಬೆಳೆದದ್ದು ಅಲ್ಲಿಯೇ.
ಆಗ ಸ್ವರ್ಗ ನಮ್ಮಟ್ಟಿಗೇ ಇತ್ತು ಎಂಬ ಭಾವನೆ. ಮನೆ ತುಂಬಾ ಆಕಳು, ಕುರಿಗಳು. ಬಸವ ಹಾಗೂ ಶಿವ ಎನ್ನುವ ಎತ್ತಿನ ಜೋಡಿ... ವಾರಕ್ಕೆರಡು ಬಾರಿ ಎತ್ತಿನಗಾಡಿಯೇರಿ ಮಂತ್ರಾಲಯಕ್ಕೆ ತೆರಳುತ್ತಿದ್ದ ನೆನಪು ಹಸಿರು ಹಸಿರಾಗಿದೆ. ದೋಣಿಯಲ್ಲಿ ತುಂಗಭದ್ರೆಯನ್ನು ದಾಟುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ.
ಕನ್ನಡ ಸಿನಿಮಾಗಳ ನಂಟು?
ನಮ್ಮೂರಿನಲ್ಲಿ ಆಗ ಚಿತ್ರಮಂದಿರ ಇರಲಿಲ್ಲ. ಹಾಗಾಗಿ ಕನ್ನಡ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ನಾನು ನೋಡಿದ ಮೊದಲ ಕನ್ನಡ ಸಿನಿಮಾ `ಓಂ~. ಉಪೇಂದ್ರ ನಿರ್ದೇಶನದ ಆ ಚಿತ್ರ ನಿರೂಪಣೆಯಿಂದಲೇ ಹೆಚ್ಚು ಗಮನ ಸೆಳೆದಿತ್ತು.
ಹಲವು ಯಶಸ್ವಿ ಚಿತ್ರಗಳು ನಿಮ್ಮ ಬುಟ್ಟಿಯಲ್ಲಿವೆ. ಸದಾ ಗೆಲ್ಲುವ ನಿಮ್ಮ ಗುಟ್ಟೇನು?
ಅದು ಈಗಲೂ ಗುಟ್ಟಾಗಿಯೇ ಉಳಿದಿದೆ! ಕೇಳಿದೊಡನೆಯೇ ಕತೆ ನಮ್ಮಳಗೆ ರೋಮಾಂಚನ ಹುಟ್ಟಿಸಬೇಕು. ಅದೇ ರೋಮಾಂಚನವನ್ನು ಅಷ್ಟೇ ತೀವ್ರತೆಯೊಂದಿಗೆ ಪ್ರೇಕ್ಷಕರಿಗೆ ದಾಟಿಸಬೇಕು.
ಬೆಳಿಗ್ಗೆ ಎದ್ದಾಗ ರಾತ್ರಿ ಮಲಗಿದಾಗ ಕತೆ ನಮ್ಮನ್ನು ಕಾಡಬೇಕು. ಮಾನಸಿಕವಾಗಿ ದೈಹಿಕವಾಗಿ ಶ್ರಮ ಹಾಕಿ ಚಿತ್ರದಲ್ಲಿ ತೊಡಗಿಕೊಳ್ಳಬೇಕು. ಚಿತ್ರ ಬಿಟ್ಟು ಉಳಿದದ್ದೇನೂ ಗೊತ್ತಿಲ್ಲ ಎಂಬಷ್ಟು ತಲ್ಲೆನತೆ ಇದ್ದಾಗ ಗೆಲುವು ಸಾಧ್ಯವಾಗುತ್ತದೆ.
`ಈಗ~ ತಮಿಳಿನ `ಎಂದಿರನ್~ಗೆ ಕೊಟ್ಟ ಉತ್ತರವೇ?
ಅದು ಹಾಗಲ್ಲ. ಯಾವುದೇ ಚಿತ್ರವನ್ನು ಮತ್ತೊಂದು ಚಿತ್ರಕ್ಕೆ ಕೊಟ್ಟ ಉತ್ತರ ಎಂದು ಭಾವಿಸಬಾರದು. ಅದರಲ್ಲಿಯೂ ಸಿನಿಮಾ ತಯಾರಕರು ಹಾಗೆ ಭಾವಿಸಬಾರದು. ಬೇರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರ ಮಾಡಲು ಹೊರಟಾಗಲೇ ನಮ್ಮ ಪತನ ಆರಂಭವಾಗುತ್ತದೆ.
ನಿಮ್ಮ ಮಟ್ಟಿಗೆ `ಈಗ~ ಹೇಗೆ ವಿಭಿನ್ನ?
ಕತೆಯಲ್ಲಿ ಹೊಸತೇನೂ ಇರಲಿಲ್ಲ. ಆದರೆ ಚಿತ್ರವನ್ನು ನಿರೂಪಿಸುವುದರಲ್ಲಿ ಹೊಸ ಶೋಧವನ್ನೇ ನಡೆಸಿದೆವು. ಯಾರೂ ಕೇಳಿರಬಹುದಾದ ಕತೆಯನ್ನೇ ಬೇರೆ ರೀತಿಯಲ್ಲಿ ಹೇಗೆ ಹೇಳಬಹುದು ಎನ್ನುವುದನ್ನು ಕಂಡುಕೊಂಡೆವು.
ಪ್ರತಿನಾಯಕನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಅವರೇ ನಿಮ್ಮ ಆಯ್ಕೆಯಾಗಲು ಕಾರಣ?
ಆಯ್ಕೆ ಪ್ರಕ್ರಿಯೆ ನಡೆಯುವಾಗ ಅನೇಕ ಖಳನಟರು ಕಣ್ಣ ಮುಂದೆ ಹಾದು ಹೋದರು. ಆದರೆ ಸುದೀಪ್ ಅವರ ಸ್ಟೈಲ್, ಅವರು ಭಾವನೆಗಳನ್ನು ಹೊರಸೂಸುತ್ತಿದ್ದ ರೀತಿ ಹಾಗೂ ಆ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದ ರೀತಿ ಇಷ್ಟವಾಯಿತು. ಕೋಪ ಬಂದರೂ ತೋರಿಸಿಕೊಳ್ಳದೆ, ಸಿಟ್ಟಿಗೆದ್ದರೂ ಚೀರದೆ ನಟಿಸುವ ಒಬ್ಬ ನಟ ಬೇಕಿತ್ತು. ಅದನ್ನು ಸುದೀಪ್‌ರಲ್ಲಿ ಕಂಡೆ.
ನಿಮ್ಮ ಅನೇಕ ಸಿನಿಮಾಗಳಲ್ಲಿ ನಾಯಕನಿಗಿಂತ ಹೆಚ್ಚಾಗಿ ಖಳನಾಯಕನೇ ಹೆಚ್ಚು ವಿಜೃಂಭಿಸುತ್ತಾನೆ. ಇದಕ್ಕೆ ಸ್ಫೂರ್ತಿ?
ಚಿಕ್ಕಂದಿನಲ್ಲಿ ಓದುತ್ತಿದ್ದ ಅಮರ ಚಿತ್ರ ಕಥೆಗಳೇ ಕಾರಣ ಎನ್ನಬಹುದು. ಅದರಲ್ಲಿ ಇಡೀ ಭಾರತದ ಕತೆ ಇದೆ. ವಿಜ್ಞಾನ, ಜನಪದ, ಅಧ್ಯಾತ್ಮ ಎಲ್ಲವೂ ಅಲ್ಲಿದೆ. ಉದಾಹರಣೆಗೆ ರಾಮನಿಗೆ ಮಹತ್ವ ದೊರೆತಿರುವುದು ರಾವಣನಿಂದ. ರಾವಣನನ್ನು ವಿಜೃಂಭಿಸಿದರೆ ರಾಮನ ಶ್ರೇಯಸ್ಸು ಸಹಜವಾಗಿ ವೃದ್ಧಿಸಬಲ್ಲದು. ಇದನ್ನು ಕಂಡುಕೊಂಡದ್ದು ಚಿಕ್ಕಂದಿನಲ್ಲಿ ಓದುತ್ತಿದ್ದ ಕತೆಗಳಿಂದ.
`ಕೃಷ್ಣದೇವರಾಯ~ ಚಿತ್ರ ನಿರ್ಮಿಸಬೇಕು ಎಂಬ ಹಂಬಲ ನಿಮ್ಮಲ್ಲೇಕೆ ಮೊಳೆಯಿತು?
ಆ ಕತೆಯ ಸುತ್ತಲೂ ಅನೇಕ ಭಾವನಾತ್ಮಕ ಅಂಶಗಳಿವೆ. ಕತೆಗೆ ಹೀರೊಯಿಕ್ ಆದ ಗುಣವಿದೆ. ಕೃಷ್ಣದೇವರಾಯನಂತೆ ನಾನು ಕೂಡ ಎರಡೂ ರಾಜ್ಯಗಳಿಗೆ ಸೇರಿದವನು ಎಂಬ ಭಾವನಾತ್ಮಕ ಸೆಳೆತ ಚಿತ್ರ ನಿರ್ಮಿಸಲು ಕಾರಣವಿರಬಹುದು!
ಕೃಷ್ಣದೇವರಾಯನಾಗಿ ಡಾ.ರಾಜ್ ಈಗಾಗಲೇ ಕಾಣಿಸಿಕೊಂಡಿದ್ದಾರೆ...
ಹೌದು.
ಅಲ್ಲದೆ ತೆಲುಗಿನಲ್ಲಿ ಎನ್‌ಟಿಆರ್ ಕೂಡ ಈ ಪಾತ್ರ ಮಾಡಿದ್ದಾರೆ. ತಾಂತ್ರಿಕವಾಗಿ ಸಮೃದ್ಧ ರೀತಿಯಲ್ಲಿ ಹಾಗೂ ಯುವ ಜನರಿಗೆ ಹತ್ತಿರವಾಗಿ ಈ ಚಿತ್ರ ಮೂಡಿಬರಬೇಕು ಎಂಬುದು ನನ್ನ ಕನಸು. ಕನ್ನಡ ಹಾಗೂ ತೆಲುಗಿನಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಸಲಾಗುವುದು.
ಸಮಕಾಲೀನ ಸಂದರ್ಭವನ್ನು ಚಿತ್ರಿಸುವಷ್ಟೇ ಪರಿಣಾಮಕಾರಿಯಾಗಿ ಪುರಾಣದ ಕತೆಗಳನ್ನೂ ನಿರೂಪಿಸಬಲ್ಲಿರಿ ಎಂಬುದು ನಿಮ್ಮ `ಯಮದೊಂಗ~, `ಮಗಧೀರ~ ಚಿತ್ರಗಳಿಂದ ಸಾಬೀತಾಗಿದೆ. ಚಿತ್ರದಿಂದ ಚಿತ್ರಕ್ಕೆ ಆ ತರಹದ್ದೊಂದು ಬದಲಾವಣೆ ಹೇಗೆ ಸಾಧ್ಯವಾಗುತ್ತದೆ?
ನಾನು ಕತೆಯನ್ನು ಮಾತ್ರ ಗಮನಿಸುತ್ತೇನೆ. ಅದು ಫ್ಯಾಂಟಸಿಯೋ, ವಾಸ್ತವಕ್ಕೆ ಹತ್ತಿರವೋ ಎಂಬ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ನೋಡುಗರನ್ನು ತಟ್ಟುವಂತಿದ್ದರೆ ಸಾಕು, ಎಂಥ ಕತೆಯನ್ನಾದರೂ ನಿರೂಪಿಸಬಲ್ಲೆ.
ನಿಮ್ಮ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಹತ್ತಿರದ ಸಂಬಂಧಿ, ಪತ್ನಿ ವಸ್ತ್ರವಿನ್ಯಾಸಕಿ, ಮಗ ತಂತ್ರಜ್ಞ... ನಿಮ್ಮ ಬದುಕನ್ನು `ಕೌಟುಂಬಿಕ ಸಿನಿಮಾ~ ಅನ್ನಬಹುದೇ?
(ನಗು). ಕುಟುಂಬದ ಸದಸ್ಯರೆಲ್ಲರೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದು ನನ್ನ ಅದೃಷ್ಟ.
ಮುಂದಿನ ಚಿತ್ರ `ಪ್ರಭಾತ್~ ಹೇಗೆ ರೂಪುಗೊಳ್ಳಲಿದೆ?
ಸದ್ಯಕ್ಕೆ ಆ ಬಗ್ಗೆ ಯೋಚಿಸಿಲ್ಲ. ನನ್ನ ಹಿಂದಿನ ಚಿತ್ರ `ಛತ್ರಪತಿ~ಯಲ್ಲಿ ನಟಿಸಿದ್ದ ಪ್ರಭಾಸ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. `ಈಗ~ದ ಹವಾ ಇಳಿದ ಮೇಲೆ `ಪ್ರಭಾತ್~ ಕೈಗೆತ್ತಿಕೊಳ್ಳುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.