ADVERTISEMENT

ನಿರ್ದೇಶನ, ನಟನೆ, ಇತ್ಯಾದಿ...

ಪಂಚರಂಗಿ

ಅಮಿತ್ ಎಂ.ಎಸ್.
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

‘ನಾನು ಹೀರೋ ಆಗುತ್ತೇನೆ ಎಂದು ತಿಳಿದಾಗ ಎಷ್ಟೋ ಜನ ನಕ್ಕಿರಬಹುದು. ಸ್ವತಃ ನಾನೇ ಕನ್ನಡಿ ಮುಂದೆ ನನ್ನ ಮುಖ ನೋಡಿಕೊಂಡು ನಕ್ಕಿದ್ದೇನೆ. ಇದು ನನಗೆ ಬೇಕಾ ಎಂದು ನನಗೇ ಅನಿಸಿತ್ತು. ನನ್ನದೇ ದಿಕ್ಕಿನಲ್ಲಿ ಹೋಗುತ್ತಿದ್ದವನನ್ನು ಇಲ್ಲಿ ತಂದು ಕಟ್ಟಿದ್ದಾರೆ’ ಎಂದು ನಕ್ಕರು ನಿರ್ದೇಶಕ ಪವನ್‌ ಒಡೆಯರ್‌.

ಅವರ ಪದನಾಮಕ್ಕೆ ‘ನಾಯಕನಟ’ ಹೊಸದಾಗಿ ಸೇರ್ಪಡೆಗೊಂಡಿದೆ. ನಟನೆ ಪವನ್‌ಗೆ ರಕ್ತಗತವಾಗಿ ಬಂದದ್ದು. ರಂಗಭೂಮಿ ಕುಟುಂಬದ ಹಿನ್ನೆಲೆ ಸಹಜವಾಗಿಯೇ ಅವರಲ್ಲಿ ಅಭಿನಯದ ಕಲೆಯನ್ನು ಅಂತರ್ಗತಗೊಳಿಸಿತ್ತು. ಆದರೆ ಪವನ್ ಗುರಿ ಇದ್ದದ್ದು ನಿರ್ದೇಶನದತ್ತ.

ತಮ್ಮೆದುರು ನಿಂತ ನಿರ್ಮಾಪಕರಿಗೆ ಚಿತ್ರಕಥೆ ಹೇಳಿ, ವೀರೇಂದ್ರ ನಿಮ್ಮ ಚಿತ್ರ ನಿರ್ದೇಶಿಸುತ್ತಾನೆ, ಪವನ್‌ ನಟಿಸುತ್ತಾನೆ ಎಂದು ಕುಳಿತಲ್ಲೇ ತೀರ್ಪು ನೀಡಿದವರು ಯೋಗರಾಜ್ ಭಟ್ಟರು. ಗುರುಗಳು ಹೇಳಿದ ಮಾತಿಗೆ ಮೀರುವುದುಂಟೇ? ಪವನ್‌ ಬಣ್ಣಹಚ್ಚಲು ಸಿದ್ಧರಾದರು.

‘ಪ್ರೀತಿ ಗೀತಿ ಇತ್ಯಾದಿ...’ ಮೂಲಕ ನಿರ್ದೇಶಕ ಪವನ್‌ ಒಡೆಯರ್‌, ನಟ ಪವನ್‌ ಒಡೆಯರ್‌ ಆಗಿ ಹೊಸ ಇನ್ನಿಂಗ್ಸ್‌ ಶುರುಮಾಡುತ್ತಿದ್ದಾರೆ. ಹಾಗಾದರೆ ನಿರ್ದೇಶನದಿಂದ ಇನ್ನು ದೂರವೇ? ಎಂದು ಕೇಳಿದರೆ ಪವನ್‌ ನೀಡುವ ಉತ್ತರ, ‘ಇಲ್ಲ’. ‘ನಾನು ಎಂದೆಂದಿಗೂ ನಿರ್ದೇಶಕನಾಗಿರಲು ಬಯಸುವವನು. ನಟನೆ ಈ ಚಿತ್ರಕ್ಕೆ ಮಾತ್ರ. ಮುಗಿಯುತ್ತಿದ್ದಂತೆ ನನ್ನ ಎಂದಿನ ಆಯುಧಗಳನ್ನು ಹೆಕ್ಕಿಕೊಂಡು ಮತ್ತೆ ರಂಗಕ್ಕೆ ಧುಮುಕುತ್ತೇನೆ’ ಎನ್ನುತ್ತಾರೆ ಅವರು.

ಬಿ.ಕಾಂ. ಓದಿ ಎಂಎನ್ಸಿ ಕಂಪೆನಿಯಲ್ಲಿ 40 ಸಾವಿರ ರೂಪಾಯಿ ಸಂಬಳದ ಉದ್ಯೋಗವನ್ನು ಬಿಟ್ಟು ಸಿನಿಮಾ ಎಂದು ಸುತ್ತಾಡುತ್ತಿದ್ದಾಗ, ‘ಚಿತ್ರಾನ್ನ ಆಗುತ್ತೀಯಾ. ಸಿನಿಮಾ ಬೇಡ ನಿನಗೆ’ ಎಂಬ ಯೋಗರಾಜ್‌ ಭಟ್ಟರ ಎಚ್ಚರಿಕೆ ಮಾತಿಗೆ, ‘ನನಗೆ ಚಿತ್ರಾನ್ನವೇ ಇಷ್ಟ’ ಎಂದು ದಿಟ್ಟವಾಗಿ ಪ್ರತಿಕ್ರಿಯಿಸಿದ ಪವನ್‌ ಬತ್ತಳಿಕೆಯಲ್ಲಿ ರಾಶಿ ಕನಸುಗಳಿವೆ. ‘ಗೋವಿಂದಾಯ ನಮಃ’ದಲ್ಲಿ ಮಾಡಿದ ತಪ್ಪುಗಳನ್ನು ‘ಗೂಗ್ಲಿ’ಯಲ್ಲಿ ತಿದ್ದಿಕೊಂಡೆ ಎನ್ನುವ ಅವರು, ಈಗ ಬಹುಬೇಡಿಕೆಯ ನಿರ್ದೇಶಕ.

ADVERTISEMENT

‘ಗೋವಿಂದಾಯ ನಮಃ’ವನ್ನು ತೆಲುಗಿನಲ್ಲಿ ನಿರ್ದೇಶಿಸಿ ಬಂದ ಪವನ್‌, ಚಿತ್ರಕ್ಕೆ ಅಲ್ಲಿ ತೆಲಂಗಾಣ ವಿವಾದದ ನಡುವೆಯೂ ಸಿಗುತ್ತಿರುವ ಯಶಸ್ಸು ಅಚ್ಚರಿ ಮೂಡಿಸಿದೆ. ಅದೇ ಚಿತ್ರವನ್ನು ತಮಿಳಿಗೆ ನಿರ್ದೇಶಿಸಲೂ ಬೇಡಿಕೆ ಬಂದಿತ್ತು. ಆದರೆ ಬಣ್ಣಹಚ್ಚುತ್ತಿರುವ ಕಾರಣಕ್ಕೆ ಒಲ್ಲೆ ಎಂದಿದ್ದಾರೆ. ‘ಗೂಗ್ಲಿ’ಯ ಮುಂದುವರೆದ ಆವೃತ್ತಿ ಮಾಡುವುದು ಖಚಿತ ಎನ್ನುವ ಅವರ ಮುಂದೆ ಎರಡು ಆಯ್ಕೆಗಳಿವೆ. ಯಾವ ಬಗೆಯಲ್ಲಿ ‘ಗೂಗ್ಲಿ’ಯನ್ನು ಮುಂದುವರೆಸುವುದು ಎಂಬ ಗೊಂದಲ ಅವರನ್ನು ಕಾಡುತ್ತಿದೆಯಂತೆ.

‘ಗೂಗ್ಲಿ 2’ ಮೊದಲನೇ ಚಿತ್ರದ ಮುಂದುವರೆದ ಕಥನವಾಗಿರುವುದರಿಂದ ಅದೇ ಚಿತ್ರತಂಡ ಇಲ್ಲಿಯೂ ಮುಂದುವರೆಯಲಿದೆ. ತೆಲುಗಿನಿಂದ ಅವಕಾಶಗಳ ಸಾಲು ಅರಸಿ ಬರುತ್ತಿದ್ದರೆ, ತಮ್ಮ ಗುರುಗಳಂತೆ ಬಾಲಿವುಡ್‌ ದಾರಿ ಹಿಡಿಯುವ ಯೋಚನೆಯೂ ಅವರಲ್ಲಿದೆ. ಅದಕ್ಕಾಗಿ ಕೆಲವು ವರ್ಷಗಳ ಹಿಂದೆಯೇ ಕತೆ ಹೆಣೆದು ಸಿದ್ಧಪಡಿಸಿದ್ದಾರೆ. ‘ಗೋವಿಂದಾಯ ನಮಃ’ದ ಎರಡನೇ ಭಾಗದ ಕತೆಯನ್ನೂ ಸಿದ್ಧಪಡಿಸಿದ್ದಾರೆ. ಮೊದಲ ಚಿತ್ರಕ್ಕಿಂತಲೂ ಇದರಲ್ಲಿ ಮನರಂಜನೆ ಹೆಚ್ಚಿದೆಯಂತೆ. ತಮಗಾಗಿಯೇ ಅವರು ಕತೆ ಸೃಷ್ಟಿಸಿದ್ದಾರಂತೆ. ನಾಯಕನಾಗಿ ಮುಂದಿನ ಚಿತ್ರ ನನ್ನದೇ ನಿರ್ದೇಶನದಲ್ಲಿರುತ್ತದೆ ಎನ್ನುತ್ತಾರೆ ಅವರು.

ಪವನ್‌ ನಾಯಕನಟರಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಅವರ ಬಳಿ ಕತೆ ಹಿಡಿದುಕೊಂಡು ಬರುವವರೂ ಹುಟ್ಟಿಕೊಂಡಿದ್ದಾರೆ.
ಅಂದಹಾಗೆ, ಭಟ್ಟರು ಹುಟ್ಟುಹಾಕಿರುವ ಗುರು ಶಿಷ್ಯ ಪರಂಪರೆಯನ್ನು ಪವನ್‌ ಮುಂದುವರೆಸುತ್ತಿದ್ದಾರೆ. ಪವನ್‌ ಜೊತೆ ಕೆಲಸ ಮಾಡಿದ, ಕೇಶವ, ಮನು ಮತ್ತು ಕುಮಾರ ಎಂಬ ಮೂವರು ನಿರ್ದೇಶನಕ್ಕೆ ಕಾಲಿರಿಸುತ್ತಿದ್ದಾರೆ. ಸ್ವಂತ ಬ್ಯಾನರ್‌ ಹುಟ್ಟುಹಾಕಿ ಅದರ ಮೂಲಕ ಹೊಸ ನಿರ್ದೇಶಕರಿಗೆ ಅವಕಾಶ ನೀಡುವುದು ಪವನ್‌ ಗುರಿ.
-ಅಮಿತ್‌ ಎಂ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.