ADVERTISEMENT

ನೀರಡಿ ಹದಿಹರೆಯದ ಹಾಡು!

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಅಲ್ಲಿ ಎಲ್ಲರ ಬಾಯಲ್ಲೂ ನೀರಿನದ್ದೇ ಮಾತು. ಲಿಮ್ಕಾ ದಾಖಲೆಯ ಯೋಚನೆ ಒಬ್ಬರದಾದರೆ, ಇನ್ನೊಬ್ಬರದು ನೀರಡಿಯಲ್ಲಿ ನೃತ್ಯ ಸಂಯೋಜನೆ ಮಾಡುವ ಚಿಂತೆ. ನೀರೊಳಗೆ ದೃಶ್ಯ ಸೆರೆ ಹಿಡಿಯುವ ತಂತ್ರಗಳ ಲೆಕ್ಕಾಚಾರ ಕ್ಯಾಮೆರಾಮನ್‌ರದ್ದು.

ಹೀಗೆ ಚಿತ್ರತಂಡದ ಸದಸ್ಯರೆಲ್ಲ ಒಂದೊಂದು ಯೋಚನೆಯಲ್ಲಿ ತೊಡಗಿದ್ದರೆ ಇದ್ಯಾವುದರ ಚಿಂತೆಯೂ ನಮಗಿಲ್ಲ ಎಂಬಂತೆ ಕುಳಿತಿದ್ದವರು ನಟ ಕಿಶನ್ ಮತ್ತು ನಟಿ ತನ್ವಿ.
ಮಗನ ಮೇಲಿನ ಪ್ರೀತಿಯಿಂದ ಚಿತ್ರ ನಿರ್ದೇಶಿಸುತ್ತಿರುವ ಶ್ರೀಕಾಂತ್ `ಟೀನೇಜ್~ ಚಿತ್ರಕ್ಕಾಗಿ ವಿನೂತನ ಪ್ರಯೋಗಗಳಿಗೆ ಕೈಹಾಕಿದ್ದಾರೆ.

40 ಸಾವಿರ ಮಕ್ಕಳನ್ನು ವಿವಿಧೆಡೆ ಸೇರಿಸಿ ಏಕಕಾಲದಲ್ಲಿ ನೃತ್ಯ ಚಿತ್ರೀಕರಿಸಿಕೊಳ್ಳುವ ಸಾಹಸ ಗಿನ್ನಿಸ್ ದಾಖಲೆಗೆ ಸೇರಿಕೊಂಡರೆ, ಹಾಡೊಂದನ್ನು ಸಂಪೂರ್ಣವಾಗಿ ನೀರಿನ ಅಡಿಯಲ್ಲಿ ಚಿತ್ರೀಕರಿಸುವುದನ್ನು ಲಿಮ್ಕಾ ಪುಟಕ್ಕೆ ಸೇರಿಸಲು ಕಾತರರಾಗಿದ್ದಾರೆ.

 
`ನೀರಿನಲ್ಲಿ ಹಾಡಿನ ಸನ್ನಿವೇಶಗಳಿರುವ ಹಲವು ಚಿತ್ರಗಳು ಬಂದಿವೆ. ಆದರೆ ನೀರಿನ ಅಡಿಯಲ್ಲಿ ಒಂದು ಹಾಡನ್ನು ಸಂಪೂರ್ಣವಾಗಿ ಚಿತ್ರೀಕರಿಸಿರುವ ಉದಾಹರಣೆಗಳಿಲ್ಲ. ಹೀಗಾಗಿ ಇದು ಲಿಮ್ಕಾ ಪುಟಕ್ಕೆ ಸೇರಲಿದೆ~ ಎಂದರು ಶ್ರೀಕಾಂತ್.

ಹದಿಹರೆಯದವರ ಮನಸಿಗೆ ಸಂಬಂಧಿಸಿದ ಚಿತ್ರವಿದು. ನಾಯಕ ತಾನು ಕಂಡ ಹುಡುಗಿಯೊಂದಿಗೆ ಹಾಡುವ ಪ್ರೇಮ ಸಲ್ಲಾಪದ ಕನಸಿನ ಸನ್ನಿವೇಶವಿದು. ಈ ಹಾಡನ್ನು ನೀರಿನೊಳಗೇ ಸಂಪೂರ್ಣ ಚಿತ್ರೀಕರಿಸಿಕೊಳ್ಳುವ ಬಯಕೆ ಮೂಡಿತು. ಇದಕ್ಕಾಗಿ ಮೂರು ತಿಂಗಳಿನಿಂದ ಸಿದ್ಧತೆ ನಡೆಸಿದ್ದೇವೆ ಎಂಬುದು ಅವರು ನೀಡಿದ ವಿವರಣೆ.

ಅಂದಹಾಗೆ ನೀರಡಿಯ ಈ ಹಾಡನ್ನು ಈಜುಕೊಳವೊಂದರಲ್ಲಿ ಚಿತ್ರೀಕರಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಫೈವ್‌ಡಿ ಕ್ಯಾಮೆರಾ, ಸ್ಪೀಕರ್ ತರಿಸಿಕೊಳ್ಳಲಾಗಿದೆ. ಈಜುಕೊಳದ ಒಳಗೆ ಫ್ಯಾಂಟಸಿ ಲೋಕವನ್ನೂ ಸೃಷ್ಟಿಸಲಾಗಿದೆ. ಈ ಹಾಡಿಗೆ ಸಾಹಿತ್ಯ ರಚಿಸಿರುವವರು ಶಿವನಂಜೇಗೌಡ.

ನೆಲದ ಮೇಲೆ ಹಾಡಿಗೆ ಹೆಜ್ಜೆ ಹಾಕುವಂತೆ ನೀರಿನ ಒಳಗೂ ಹೆಜ್ಜೆ ಹಾಕುವ ರೀತಿಯಲ್ಲಿ ನೃತ್ಯ ಸಂಯೋಜನೆ ಮಾಡಿರುವವರು ಮುರಳಿ. ನೀರೊಳಗೆ ನಮ್ಮ ಇಚ್ಛೆಯಂತೆ ಕೈಕಾಲು ಆಡಿಸುವುದೂ ಕಷ್ಟ. ತುಟಿ ಚಲನೆಯೂ ಆಗುವುದಿಲ್ಲ. ಇಂತಹ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು ನೃತ್ಯ ಸಂಯೋಜಿಸಿರುವುದಾಗಿ ಅವರು ಹೇಳಿಕೊಂಡರು.

ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಎಂಬ ಖುಷಿ ನಟ ಕಿಶನ್‌ರದ್ದು. ಸ್ಲಂಡಾಗ್ ಮಿಲೇನಿಯರ್ ಚಿತ್ರದ `ರಿಂಗ ರಿಂಗ~ ಹಾಡಿಗೆ ಹೆಜ್ಜೆ ಹಾಕಿದ್ದ ಹುಡುಗಿ ತನ್ವಿ ಈ ಚಿತ್ರದ ನಾಯಕಿಯರಲ್ಲೊಬ್ಬರು. ನಾಲ್ಕು ನಿಮಿಷದ ಈ ಹಾಡಿಗೆ ಖರ್ಚಾಗುತ್ತಿರುವ ಅಂದಾಜು ವೆಚ್ಚ 20 ಲಕ್ಷ. ತಮ್ಮ ಚಿತ್ರವನ್ನು ಮ್ಯೂಸಿಕಲ್ ಸಿನಿಮಾ ಎಂದು ಕರೆದಿದ್ದಾರೆ ಶ್ರೀಕಾಂತ್. ಎಲ್ಲಾ 10 ಹಾಡುಗಳನ್ನೂ ವೈವಿಧ್ಯಮಯವಾಗಿ ಚಿತ್ರಿಸುವ ಬಯಕೆ ಅವರದು.

ಛಾಯಾಗ್ರಾಹಕ ಮಹೇಶ್, ಸಾಹಸ ನಿರ್ದೇಶಕ ಮಾಸ್ ಮಾದು, ಈಜುಪಟು ಸತೀಶ್‌ಕುಮಾರ್ ಮುಂತಾದವರ ಬಾಯಲ್ಲೂ ನೀರಿನದೇ ಮಾತು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT