ADVERTISEMENT

ನೋಡಿ ಸ್ವಾಮಿ ‘ಗಾಲಿ’ ಇರೋದೆ ಹೀಗೆ...

ಪ್ರಜಾವಾಣಿ ಚಿತ್ರ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

‘ಎಲ್ಲರೂ ಈ ಸಿನಿಮಾ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೋ ಅದು ತಪ್ಪು. ಹಾಗೆಂದು ನಾನು ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿಲ್ಲ’.
ನಿಜ. ಅವರ ಮಾತನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅತಿ ಅಶ್ಲೀಲವೆನಿಸುವ ಸಂಭಾಷಣೆಗಳುಳ್ಳ ಟ್ರೇಲರ್‌ ಅನ್ನು ಯೂಟ್ಯೂಬ್‌ನಲ್ಲಿ ಹರಿಬಿಟ್ಟು ‘ಜನಪ್ರಿಯತೆ’ ಗಳಿಸಿದ ಸಿನಿಮಾ ‘ಗಾಲಿ’.

ಆದರೆ ಸಿನಿಮಾ ತೆರೆಕಾಣುವ ಸಂದರ್ಭದಲ್ಲಿ ‘ನೀವು ಅಂದುಕೊಂಡಂತೆ ಇದು ಆ ರೀತಿ ಸಿನಿಮಾ ಅಲ್ಲ’ ಎಂದು ನಿರ್ದೇಶಕ ಲಕ್ಕಿ ಹೇಳುತ್ತಿದ್ದಾರೆ. ನಿಮ್ಮ ಮಾತು ನಂಬುವುದು ಹೇಗೆ ಸ್ವಾಮಿ ಎಂದರೆ– ‘ಚಿತ್ರ ನೋಡಿ, ನಿಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಿರಿ’ ಎಂಬ ಉತ್ತರ ಅವರದು. ‘ಗಾಲಿ’ ಎಂಬ ಚಿತ್ರದ ಟ್ರೇಲರ್ ಕೆಲವು ತಿಂಗಳಿಂದ ತೀವ್ರ ಚರ್ಚೆ ಹುಟ್ಟು ಹಾಕಿತ್ತು.

ದ್ವಂದ್ವಾರ್ಥದ ಸಂಭಾಷಣೆಗಳೇ ತುಂಬಿದ್ದ ಟ್ರೇಲರ್ ಸಹಜವಾಗಿಯೇ ಹಿಟ್ ಆಗಿತ್ತು. ಯೂಟ್ಯೂಬ್‌ನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಚಿತ್ರ ಇಂದು (ಶುಕ್ರವಾರ) ತೆರೆಕಾಣುತ್ತಿದೆ. ‘ಅಷ್ಟೊಂದು ಅಶ್ಲೀಲತೆಯಿದೆಯಲ್ಲ ಟ್ರೇಲರ್‌ನಲ್ಲಿ’ ಎಂಬ ಪ್ರಶ್ನೆಗೆ, ಸೆನ್ಸಾರ್ ಮಂಡಳಿ ಕೊಟ್ಟ ಯು/ಎ ಪ್ರಮಾಣಪತ್ರ ತೋರಿಸಿ ಹೆಮ್ಮೆಯಿಂದ ಬೀಗಿದರು ನಿರ್ದೇಶಕ ಲಕ್ಕಿ.

ಸಿನಿಮಾದಲ್ಲಿ ದ್ವಂದ್ವಾರ್ಥದ ಮಾತುಗಳಿವೆ, ಆದರೆ ಇಡೀ ಸಿನಿಮಾದಲ್ಲಿ ಅದೇ ತುಂಬಿಲ್ಲ. ಕಥೆ ಬೇರೆಯೇ ಇದೆ. ಅದನ್ನು ಚಿತ್ರಮಂದಿರದಲ್ಲಿಯೇ ನೋಡಿ ಎಂದರು ಅವರು. ಟ್ರೇಲರ್ ನೋಡಿದವರು ನಿಮ್ಮ ಚಿತ್ರವನ್ನು ಸೆನ್ಸಾರ್ ಮಂಡಳಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದರಂತೆ. ಆದರೆ ಸೆನ್ಸಾರ್ ಮಂಡಳಿ ನಮ್ಮ ಕಲ್ಪನೆಗಳನ್ನು ಬದಲಾಯಿಸಿದ ಚಿತ್ರವಿದು ಎಂದು ಬೆನ್ನುತಟ್ಟಿತಂತೆ. ಅಲ್ಲಲ್ಲಿ ಅಂಥ ಸಂಭಾಷಣೆ ಬರುತ್ತವೆ. ಹೀಗಾಗಿ ಟ್ರೇಲರ್ ನೋಡಿ ಚಿತ್ರಮಂದಿರಕ್ಕೆ ಬಂದವರಿಗೂ ನಿರಾಸೆಯಾಗುವುದಿಲ್ಲ ಎಂಬ ವಿವರಣೆ ಅವರದು.

ಈ ಬಗೆಯ ಟ್ರೇಲರ್ ಸೃಷ್ಟಿಗೂ ಅವರ ಬಳಿ ಕಾರಣವಿದೆ. ನಾಲ್ಕಾರು ಕಥೆಗಳನ್ನು ಕೈಯಲ್ಲಿಟ್ಟುಕೊಂಡು ನಿರ್ಮಾಪಕರ ಮನೆಬಾಗಿಲಿಗೆ ಹೋಗುತ್ತಿದ್ದ ಲಕ್ಕಿ ಅವರಿಗೆ ಎದುರಾದದ್ದು ನಿರಾಸೆ. ಹೀಗಾಗಿ ಗಾಂಧಿನಗರದ ಗಮನವನ್ನು ತಮ್ಮತ್ತ ಸೆಳೆಯುವ ಸಲುವಾಗಿ ಇಂಥ ಸಾಹಸಕ್ಕೆ ಕೈಹಾಕಿದರು. ಟ್ರೇಲರ್ ನೋಡಿ ‘ಗಾಲಿ’ ಸಿನಿಮಾಕ್ಕೆ ಹಣಹೂಡುತ್ತೇನೆ ಎಂದು ಅನೇಕರು ಮುಂದೆ ಬಂದರು. ಆದರೆ ಈ ಬಾರಿ ಅವರನ್ನು ತಿರಸ್ಕರಿಸುವ ಸರದಿ ಲಕ್ಕಿ ಅವರದು. ಗೆಳೆಯರ ಜೊತೆ ಸೇರಿಕೊಂಡು ಅವರೇ ಬಂಡವಾಳ ಹೂಡಿ ಚಿತ್ರ ಸಿದ್ಧಪಡಿಸಿದ್ದಾರೆ.

‘ಗಾಲಿ’ ಎನ್ನುವುದು ಕಾಲಚಕ್ರದ ಸಂಕೇತ. ಮನುಷ್ಯನ ಜೀವನದ ಬದಲಾವಣೆ, ತಿರುವುಗಳನ್ನು ಚಿತ್ರದ ಶೀರ್ಷಿಕೆ ಸೂಚಿಸುತ್ತದೆಯಂತೆ. ಛಾಯಾಗ್ರಾಹಕ ಸಂತೋಷ್ ಹೊರತು ಉಳಿದ ಎಲ್ಲರಿಗೂ ಇದು ಮೊದಲ ಚಿತ್ರ. ಬ್ಲ್ಯಾಕ್ ಮ್ಯಾಜಿಕ್ ಎಂಬ ಹೊಸ ಬಗೆಯ ಕ್ಯಾಮೆರಾ ಬಳಸಿ ಸಂತೋಷ್ ಚಿತ್ರೀಕರಣ ನಡೆಸಿದ್ದಾರಂತೆ.

ಇದು ಯುವಜನತೆಗೆ ಸೀಮಿತವಾದ ಸಿನಿಮಾ ಅಲ್ಲ. ಎಲ್ಲಾ ವರ್ಗದವರೂ ನೋಡಬಹುದಾದ ಚಿತ್ರ ಎನ್ನುವುದು ನಟ ಜೀವನ್ ಸ್ಪಷ್ಟನೆ. ಅವರ ಪಾತ್ರದಲ್ಲಿ ಹಲವು ಆಯಾಮಗಳಿವೆಯಂತೆ. ನಾಯಕಿ ರೂಪಾ ನಟರಾಜ್ ಚಿತ್ರದಲ್ಲಿ ಅನಾಥೆಯಾಗಿ, ನಾಯಕ ಕನಸುಗಳಿಗೆ ಪ್ರೋತ್ಸಾಹ ನೀಡುವ ಗೆಳೆತಿಯಾಗಿ ಕಾಣಿಸಿಕೊಂಡಿದ್ದಾರೆ. ಐದು ಹಾಡುಗಳಿಗೆ ಮಟ್ಟು ಹಾಕಿದ್ದಾರೆ ಡೇನಿಯಲ್ ವಿಕ್ಟರ್. ಈ ಎಲ್ಲಾ ಹಾಡುಗಳಿಗೂ ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ.
ಚಿತ್ರಗಳು: ಕೆ.ಎನ್. ನಾಗೇಶ್ ಕುಮಾರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.