ADVERTISEMENT

ಪರಮಾತ್ಮನ ಗುಣಗಾನ!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಭರ್ತಿ ತುಂಬಿದ್ದ ಸಭಾಂಗಣ. ಲೆಕ್ಕವಿಲ್ಲದಷ್ಟು ನಿರೀಕ್ಷೆ ತುಂಬಿದ ಕಣ್ಣುಗಳು. ಕಾಲುಗಳಿಗೆ ಎಡರಾಗುತ್ತಿದ್ದ ಅಸಂಖ್ಯ ಟ್ರೈಪಾಡ್‌ಗಳು. ತರಹೇವಾರಿ ಗಂಧಗಳ ಗಮಲು ಬೆರೆತ ವಿಚಿತ್ರ ಪರಿಮಳ.

ವೇದಿಕೆ ಮೇಲೆ ಎಣಿಕೆ ತಪ್ಪುವಷ್ಟು ಕುರ್ಚಿಗಳು. ಅವುಗಳನ್ನು ಅಲಂಕರಿಸಿದವರಲ್ಲಿ ಜನಪ್ರಿಯರು, ಖ್ಯಾತನಾಮರು, ಸುಂದರಿಯರು ಸೇರಿದ್ದರು. `ಪರಮಾತ್ಮ~ ಆಡಿಯೋ ಬಿಡುಗಡೆ ಸಮಾರಂಭ ನಡೆದ ವಾತಾವರಣದ ಚಿತ್ರಗಳಿವು. ಜಮಾಯಿಸಿದ್ದ ಜನರನ್ನು ನೋಡಿದರೆ ಸಣ್ಣ ಪ್ರಮಾಣದ ಮದುವೆಗೆ ಇರಬಹುದಾದಂಥದ್ದೇ ಕಳೆ.

ನಿರ್ದೇಶಕ ಯೋಗರಾಜ್ ಭಟ್ ಮೈಕಿಗೆ ಕಂಠ ಒಪ್ಪಿಸುವ ಮೊದಲೇ ಚಿತ್ರದ ಕುರಿತ ವಿವರಗಳ ಹತ್ತು ಪುಟಗಳ ಫೈಲು ಅನೇಕರ ಕೈಲಿದ್ದವು.

ಎರಡು ದಿನಗಳ ಮೊದಲು ಮಾರುಕಟ್ಟೆಗೆ ಆಡಿಯೋ ತೇಲಿಬಿಟ್ಟು, ಅದು ಕಂಡಾಪಟ್ಟೆ ಹಿಟ್ ಆದ ಸುದ್ದಿಯನ್ನು ಕಿವಿಮೇಲೆ ಹಾಕಿಕೊಂಡಿದ್ದ ಯೋಗರಾಜ ಭಟ್ಟರು ದೀರ್ಘ ಕಾಲ ಮಾತನಾಡಿದರು. ಅದರಲ್ಲಿ ಪುನೀತ್ ಸರಳತೆಯ ಬಣ್ಣನೆಗೇ ಸಿಂಹಪಾಲು ಮೀಸಲಾಯಿತು.

`ಸ್ಟಾರ್ ನಟ ಇಷ್ಟು ಸರಳವಾಗಿರುವುದು ಹೇಗೆ ಸಾಧ್ಯ~ ಎಂದು ಅವರು ಕೇಳಿದಾಗ, ಮಲಗಿದಾಗಲೆಲ್ಲಾ ತಂದೆಯ ಸರಳತೆಯೇ ಕಾಡುತ್ತದೆ ಎಂಬ ಪ್ರತಿಕ್ರಿಯೆಯನ್ನು ಪುನೀತ್ ಕೊಟ್ಟರಂತೆ.

ಪುನೀತ್ ಸರಳತೆಯಲ್ಲಿ ತಂದೆಯನ್ನೂ ಮೀರಿಸುವುದರಲ್ಲಿ ಅನುಮಾನವಿಲ್ಲ ಎಂಬ ಭಟ್ಟರ ಮಾತಿಗೆ ಅಹುದಹುದೆಂಬಂತೆ ಚಿತ್ರತಂಡದ ಅನೇಕರು ತಲೆಯಾಡಿಸಿದರು.

ಎಂದೋ ಹೇಳಿದ ಕಥೆಯ ಎಳೆಯನ್ನು ಬೇಗ ಸ್ಕ್ರಿಪ್ಟ್‌ಗೆ ಇಳಿಸುವಂತೆ ಒತ್ತಡ ತಂದ ಗೆಳೆಯ, ನಿರ್ದೇಶಕ ಸೂರಿಗೆ ಭಟ್ಟರು ಧನ್ಯವಾದ ಹೇಳಿದರು. ಚಿತ್ರಕಥೆ ರೂಪಿಸುವಲ್ಲಿ ಭಟ್ಟರಿಗೆ ಸೂರಿ ಕೂಡ ನೆರವಾಗಿದ್ದಾರೆ.

ನಿರ್ದೇಶಕರ ಹೊಗಳಿಕೆಗೆ ಪದೇಪದೇ ಸಂಕೋಚದ ಭಾವ ವ್ಯಕ್ತಪಡಿಸುತ್ತಿದ್ದ ಪುನೀತ್ ಹೆಚ್ಚು ಮಾತನಾಡಲಿಲ್ಲ. ಯೋಗರಾಜ್ ಭಟ್ ಜೊತೆಗೊಂದು ಸಿನಿಮಾ ಮಾಡಬೇಕು ಎಂಬ ಅವರ ವರ್ಷಗಳ ಚಡಪಡಿಕೆಯನ್ನು ವ್ಯಕ್ತಪಡಿಸಿದವರು ರಾಘವೇಂದ್ರ ರಾಜ್‌ಕುಮಾರ್.

`ಪುನೀತ್‌ಗೆ ಅಪ್ಪಾಜಿಯದ್ದೇ ಸರಳತೆ ಇದೆ ಎಂದು ಯೋಗರಾಜ್ ಭಟ್ ಗುರುತಿಸಿದ್ದು ಹೆಮ್ಮೆಯ ವಿಷಯ~ ಎಂದು ಖುಷಿಪಟ್ಟ ರಾಘವೇಂದ್ರ ರಾಜ್‌ಕುಮಾರ್ `ಪರಮಾತ್ಮ~ ತಂಡವನ್ನು ಬಿಡಿಬಿಡಿಯಾಗಿ ಹೊಗಳಿದರು.

ಆಡಿಯೋ ಬಿಡುಗಡೆ ಸಮಾರಂಭ ಚಿತ್ರದ ಮೊದಲ ಗೋಷ್ಠಿಯೂ ಆಗಿದ್ದರಿಂದ ಎಲ್ಲರಿಗೂ ಹಂಚಿಕೊಳ್ಳಲು ದಂಡಿಯಾದ ಅನುಭವಗಳಿದ್ದವು. ರಂಗಾಯಣ ರಘು ಭಾವುಕರಾಗಿ ನಿಮಿಷಗಟ್ಟಲೆ ಮಾತನಾಡಿದ್ದೇ ಇದಕ್ಕೆ ಸಾಕ್ಷಿ.

ಸುಮಾರು ಇಪ್ಪತ್ತು ಜೇನುಹುಳುಗಳು ಕಚ್ಚಿ ಕಣ್ಣುಗಳು ಊದಿಕೊಂಡಾಗಲೂ ತಂಪು ಕನ್ನಡಕ ಹಾಕಿಕೊಂಡೇ ಪುನೀತ್ ಶಾಟ್ ಒಂದನ್ನು ನಿಭಾಯಿಸಿದ್ದನ್ನು ಸ್ಮರಿಸುತ್ತಾ ರಘು ನಾಯಕನನ್ನು ಕೊಂಡಾಡಿದರು.
 
ಕಾರ್ಯಕ್ರಮದ ನಿಜವಾದ ನಾಯಕ ಎಂದೇ ಬಣ್ಣಿತರಾದ ಸಂಗೀತ ನಿರ್ದೇಶಕ ಹರಿಕೃಷ್ಣ ರಾತ್ರಿ ಹೊತ್ತಲ್ಲಿ ಭಟ್ಟರ ಜೊತೆಗಿನ ಸಮಾಲೋಚನೆಯಲ್ಲಿ ಹುಟ್ಟಿದ ಹಾಡುಗಳ ಕುರಿತು ಕೆಲವೇ ಮಾತುಗಳನ್ನಾಡಿದರು.
 
ಚೆನ್ನೈನ ಎ.ಆರ್.ರೆಹಮಾನ್ ಸ್ಟುಡಿಯೋದಲ್ಲಿನ ಎಂಜಿನಿಯರ್ ಈ ಹಾಡುಗಳನ್ನು ಕೇಳಿ ಥ್ರಿಲ್ ಆಗಿ, ಆಮೇಲೆ ರೆಹಮಾನ್‌ಗೂ ಕೇಳಿಸಿದರಂತೆ. ರೆಹಮಾನ್ ಕೂಡ ಈ ಹಾಡುಗಳನ್ನು ಮೆಚ್ಚಿಕೊಂಡರೆಂಬುದು ವಿಶೇಷ.

ನಾಯಕಿ ದೀಪಾ ಸನ್ನಿಧಿ, ರಮ್ಯಾ ಬಾರ್ನಾ, ದತ್ತಣ್ಣ, ಅವಿನಾಶ್ ಮೊದಲಾದವರು ವೇದಿಕೆಯ ಕುರ್ಚಿಗಳನ್ನು ಅಲಂಕರಿಸಿದ್ದರು. ಐಂದ್ರಿತಾ ರೇ, ಅನಂತನಾಗ್ ಈ ಸಂಭ್ರಮಕ್ಕೆ ಗೈರು ಹಾಜರಾಗಿದ್ದರು.

ಇದೇ ಮೊದಲ ಬಾರಿಗೆ ಅನಂತನಾಗ್ ಜೊತೆ ಪುನೀತ್ ಅಭಿನಯಿಸಿದ್ದಾರೆ. ಅಪ್ಪ-ಮಗನಾಗಿ ಇಬ್ಬರ ಅಭಿನಯ ಹೇಗಿರಬಹುದೆಂಬ ಕುತೂಹಲ ಖುದ್ದು ಪುನೀತ್ ಅವರಿಗೇ ಇದೆಯಂತೆ.

ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆಯ ಶಾಂತ ಸ್ವಭಾವ ಹಾಗೂ ಪುನೀತ್‌ಗೆ ಅವರು ತೊಡಿಸಿರುವ ವಸ್ತ್ರವೈವಿಧ್ಯಕ್ಕೆ ಹೊಗಳಿಕೆ ಸಂದಿತು.

`ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೋರಂಟಿ/ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೆ ಗ್ಯಾರಂಟಿ/ಒಬ್ಳನ್ನೆ ಲವ್ ಮಾಡಿ ಚೆನ್ನಾಗಿರಿ.../ ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ~, `ಮಾರ್ಡ್ರನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ~, `ದನಕಾಯುತಿದ್ದ ಹರಿಕೃಷ್ಣ ಪರಮಾತ್ಮ ಕುರುಕ್ಷೇತ್ರದಲ್ಲಿ ಡ್ರೈವರ್ ಆಗಿ ಇರ‌್ಲಿಲ್ವೆ...~

ಇವು ಭಟ್ಟರು `ಪರಮಾತ್ಮ~ನಿಗೆ ಬರೆದಿರುವ ಸಾಹಿತ್ಯದ ಕೆಲವು ಕಿಕ್‌ಭರಿತ ಸಾಲುಗಳು. ಈ ಸಾಲುಗಳ ಗುಂಗು, ಚರ್ಚೆ ಸಭಾಂಗಣದಲ್ಲಿ ಅದಾಗಲೇ ದೊಡ್ಡ ಮಟ್ಟದಲ್ಲೇ ಕಾಣುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.