ADVERTISEMENT

ಪಾಕಿಸ್ತಾನದ ಜತೆ ಯುದ್ಧಕ್ಕೆ ಆಗ್ರಹಿಸುವವರನ್ನು ಗಡಿಗೆ ಕಳುಹಿಸಬೇಕು: ಸಲ್ಮಾನ್ ಖಾನ್

ಏಜೆನ್ಸೀಸ್
Published 14 ಜೂನ್ 2017, 11:31 IST
Last Updated 14 ಜೂನ್ 2017, 11:31 IST
ಸಲ್ಮಾನ್‌ ಖಾನ್ (ಸಾಂದರ್ಭಿಕ ಚಿತ್ರ)
ಸಲ್ಮಾನ್‌ ಖಾನ್ (ಸಾಂದರ್ಭಿಕ ಚಿತ್ರ)   

ನವದೆಹಲಿ: ಭಾರತ–ಪಾಕಿಸ್ತಾನದ ನಡುವಣ ಉದ್ವಿಗ್ನತೆ ಶಮನಗೊಳಿಸಲು ಶಾಂತಿ ಮಾತುಕತೆಯೇ ಪರಿಹಾರ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಹೊಸ ಸಿನಿಮಾ ‘ಟ್ಯೂಬ್‌ಲೈಟ್’ ಪ್ರಚಾರಾರ್ಥ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುದ್ಧಕ್ಕೆ ಆಗ್ರಹಿಸುವವರನ್ನು ಗಡಿಗೆ ಕಳುಹಿಸಬೇಕು. ಆಗ ಅವರ ಕೈಗಳು ನಡುಗಲಾರಂಭಿಸುತ್ತವೆ. ಒಂದೇ ದಿನದಲ್ಲಿ ಯುದ್ಧ ಕೊನೆಗೊಳ್ಳುತ್ತದೆ. ಯುದ್ಧವಾಗಬೇಕು ಎಂದವರು ಮೇಜಿನ ಸುತ್ತ ಮಾತುಕತೆಗೆ ಕುಳಿತುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.

ಯುದ್ಧದಿಂದ ಯಾರಿಗೂ ಪ್ರಯೋಜನವಿಲ್ಲ. ಯುದ್ಧ ನಡೆದರೆ ಎರಡೂ ದೇಶಗಳ ಜನರು ಗಡಿಯಲ್ಲಿ ಮೃತಪಡುತ್ತಾರೆ ಎಂದು ಸಲ್ಮಾನ್ ಹೇಳಿದ್ದಾರೆ. ಸಲ್ಮಾನ್ ಅವರ ಸಹೋದರ ಸೊಹೈಲ್ ಖಾನ್ ಸಹ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ADVERTISEMENT

‘ಯುದ್ಧಕ್ಕೆ ಸಂಬಂಧಿಸಿದ್ದಲ್ಲ’: ಟ್ಯೂಬ್‌ಲೈಟ್ ಸಿನಿಮಾ ಯಾವುದೇ ನಿರ್ದಿಷ್ಟ ಯುದ್ಧಕ್ಕೆ ಸಂಬಂಧಿಸಿದ್ದಲ್ಲ. ಯುದ್ಧವನ್ನು ಅದರಲ್ಲಿ ಬಳಸಿಕೊಳ್ಳಲಾಗಿದೆಯಷ್ಟೆ. ಯುದ್ಧದಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಸಲ್ಮಾನ್ ಹೇಳಿದ್ದಾರೆ.

ಶಿವಸೇನಾ ಆಕ್ಷೇಪ: ಸಲ್ಮಾನ್ ಖಾನ್ ಹೇಳಿಕೆಗೆ ಶಿವಸೇನಾ ಆಕ್ಷೇಪ ಸೂಚಿಸಿದೆ. ‘ಸಲ್ಮಾನ್ ಅವರು ಹೇಳಿಕೆ ನೀಡಿದ ರೀತಿ ಆಕ್ಷೇಪಾರ್ಹವಾದುದು. ಶಾಂತಿಯನ್ನು ಬಯಸದವರು ಯಾರು, ಅವರು ಯಾಕೆ ಪ್ರತಿ ಬಾರಿ ತಮ್ಮ ಎಲ್ಲೆಯನ್ನು ಮೀರುತ್ತಿದ್ದಾರೆ’ ಎಂದು ಶಿವಸೇನಾ ಸಂಸದ ಅರವಿಂದ್ ಸಾವಂತ್ ಪ್ರಶ್ನಿಸಿದ್ದಾರೆ. ಈ ಮಧ್ಯೆ, ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಅವರು ಮಗನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ‘ಮಹಾನ್ ವ್ಯಕ್ತಿಗಳು ಇತಿಹಾಸದಲ್ಲಿ ಹೇಳಿದ್ದೂ ಇದನ್ನೇ... ಯುದ್ಧ ಒಳ್ಳೆಯದಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.