ADVERTISEMENT

ಪ್ಯಾರ್‌ಗೆ ಆಗ್ಬುಟೈತೆ...

ಅಮಿತ್ ಎಂ.ಎಸ್.
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST
ಪ್ಯಾರ್‌ಗೆ ಆಗ್ಬುಟೈತೆ...
ಪ್ಯಾರ್‌ಗೆ ಆಗ್ಬುಟೈತೆ...   

`ಪ್ಯಾರ್‌ಗೆ ಆಗ್ಬುಟೈತೆ, ನಮ್ದುಕೆ ಪ್ಯಾರ್‌ಗೆ ಆಗ್ಬುಟೈತೆ....~ ಹೀಗೊಂದು ಕನ್ನಡ- ಉರ್ದು  ಮಿಶ್ರಿತ ಹಾಡು ಜನರ ಮೊಬೈಲ್‌ಗಳಲ್ಲಿ ಹರಿದಾಡತೊಡಗಿದೆ. ಫೇಸ್‌ಬುಕ್, ಟ್ವಿಟರ್‌ಗಳಲ್ಲಿ `ಶೇರ್~ ಆಗುತ್ತಿದೆ. `ವೈ ದಿಸ್ ಕೊಲವೆರಿ ಡಿ~ ಎಂಬ ತಂಗ್ಲಿಷ್ ಹಾಡಿನ ಗುಂಗು ಸಣ್ಣಗೆ ಕರಗುತ್ತಿದ್ದಂತೆ ಕನ್ನಡ ಚಿತ್ರದ ಈ ಸ್ವಾರಸ್ಯಕರ ಹಾಡು ಜಾಲತಾಣಗಳಲ್ಲಿ ಬಹುಜನಪ್ರಿಯತೆ ಗಳಿಸಿದೆ.

ಗೋವಿಂದಾಯ ನಮಃ ಚಿತ್ರದ ಈ ಹಾಡು ಯೂಟ್ಯೂಬ್‌ಗೆ ಅಪ್‌ಲೋಡ್ ಆದ ಆರೇ ದಿನಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಸಾವಿರಾರು ಡೌನ್‌ಲೋಡ್‌ಗಳಾಗಿವೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆಯೇ. ಬ್ಲ್ಯಾಕ್ ಆಂಡ್ ವೈಟ್ ಕಾಲದಿಂದ ಶುರುವಾಗಿ ಇಂದಿನ ರಾಕ್ ಮ್ಯೂಸಿಕ್‌ವರೆಗಿನ ವಿವಿಧ ಕಾಲಘಟ್ಟದ ಸಂಗೀತ ಒಳಗೊಂಡಿರುವ ಈ ಹಾಡಿನ ಸ್ವರೂಪ ಹೊಸದೇನಲ್ಲ.

ಇಂಥಹ ಪ್ರಯೋಗಗಳು ಈ ಹಿಂದೆಯೂ ನಡೆದದ್ದೇ. ಆದರೆ ಈ ಹಾಡು ಕೆಲವೇ ದಿನಗಳಲ್ಲಿ ಇಷ್ಟು ಜನಪ್ರಿಯತೆ ಗಳಿಸಲು ಕಾರಣಗಳನ್ನು ಸಿನಿಮಾ ಅಭಿಮಾನಿಗಳೇ ನೀಡಿದ್ದಾರೆ. ಅಲ್ಲದೆ ವೈ ದಿಸ್ ಕೊಲವೆರಿ ಸಾಂಗ್? ಎಂಬ ಪ್ರಶ್ನೆಯನ್ನೂ ಮುಂದಿಟ್ಟು ಕನ್ನಡದ ಹಾಡು ಸಹ ಯಾವ ಭಾಷೆಗೂ ಕಮ್ಮಿ ಇಲ್ಲ ಎಂಬ ಸಂದೇಶಗಳನ್ನೂ ಹರಿಬಿಟ್ಟಿದ್ದಾರೆ.

ಯೂಟ್ಯೂಬ್, ಫೇಸ್‌ಬುಕ್ ಮುಂತಾದೆಡೆ ಹಾಡಿನ ಸಂಗೀತ ಸಾಹಿತ್ಯ, ಕೋಮಲ್ ಅಭಿನಯ ಹಾಗೂ ಕೊರಿಯೋಗ್ರಫಿಗಳ ಬಗ್ಗೆ ಮೆಚ್ಚುಗೆಯ ಕಾಮೆಂಟುಗಳು ಹರಿದಾಡುತ್ತಿವೆ. ಸಂಗೀತದ ಮೂಲಕ ಗಮನಸೆಳೆಯುವ ಈ ಹಾಡಿಗೆ ಸ್ವರಸಂಯೋಜನೆ ಮಾಡಿದವರು ಗುರುಕಿರಣ್. ಉರ್ದು ಮತ್ತು ಕನ್ನಡದ ಪದಗಳನ್ನು ಜೋಡಿಸಿ ಹಾಡು ಹೊಸೆದವರು ಚಿತ್ರದ ನಿರ್ದೇಶಕರೂ ಆಗಿರುವ ಪವನ್ ಒಡೆಯರ್. ವಿಶೇಷವೆಂದರೆ ಅವರ ರಚನೆಯ ಮೊದಲ ಹಾಡಿದು. ಚೇತನ್ ಮತ್ತು ಇಂದು ನಾಗರಾಜ್ ಹಾಡಿಗೆ ದನಿಗೂಡಿಸಿದ್ದಾರೆ. ಮುರುಳಿ ನೃತ್ಯ ಸಂಯೋಜನೆಗೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

ಹಾಡಿನ ಚಿತ್ರೀಕರಣ ನಡೆದಿರುವುದು ಬಿಜಾಪುರದ ಇಬ್ರಾಹಿಂ ರೋಜಾ ಮತ್ತು ಬಾರಾ ಕಮಾನ್‌ಗಳಲ್ಲಿ. ಚಿತ್ರದ ಹಾಡು ಸಿಕ್ಕಾಪಟ್ಟೆ ಹಿಟ್ ಆದ ಬಗ್ಗೆ ನಿರ್ದೇಶಕ ಪವನ್ ಒಡೆಯರ್‌ಗೆ ತುಂಬಾ ಖುಷಿ ಇದೆ. ಹಾಡಿಗೆ ಅತಿ ಹೆಚ್ಚು ಹಿಟ್ಸ್ ಬಂದಿರುವುದು ಅಮೆರಿಕದಿಂದ. ಉತ್ತರ ಭಾರತದ ರಾಜ್ಯಗಳಲ್ಲೂ ಹಾಡು ಜನಪ್ರಿಯತೆ ಗಳಿಸಿದೆ ಎನ್ನುತ್ತಾರೆ ಪವನ್.
 
ಅವರ ವೆಬ್‌ಸೈಟ್‌ನಲ್ಲಿಯೇ ಹಾಡು ವೀಕ್ಷಿಸಿದವರ ಸಂಖ್ಯೆ 1.10 ಲಕ್ಷ! ಇನ್ನು ಯೂಟ್ಯೂಬ್ ಮತ್ತಿತರ ವೆಬ್‌ತಾಣಗಳಲ್ಲಿ ಹಾಡು ವೀಕ್ಷಿಸಿದವರ ಸಂಖ್ಯೆ 1.40 ಲಕ್ಷ ದಾಟುತ್ತದೆ ಎನ್ನುವುದು ಅವರ ಅಭಿಪ್ರಾಯ. ಅಂದಹಾಗೆ ಅತಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ವಿಡಿಯೊಗಳ ಪಟ್ಟಿಯಲ್ಲಿ ಪ್ಯಾರ್‌ಗೆ ಆಗ್ಬುಟೈತೆ ಹಾಡು ಮೂರನೇ ಸ್ಥಾನದಲ್ಲಿದೆ ಎಂಬ ಮಾಹಿತಿಯೂ ಅವರಿಗೆ ಲಭ್ಯವಾಗಿದೆಯಂತೆ. ಮುಂಬೈ ಬೆಡಗಿ ಪಾರುಲ್‌ಗೆ ಚಿತ್ರದಲ್ಲಿ ಮುಸ್ಲಿಂ ಹುಡುಗಿಯ ಪಾತ್ರ.
 
ಆಕೆಯದು ಉರ್ದು ಮಿಶ್ರಿತ ಮಾತು. ಹೀಗಾಗಿ ಕೋಮಲ್ ಮತ್ತು ಅವರ ನಡುವಿನ ಡ್ಯೂಯೆಟ್ ಸಾಂಗ್ ಉರ್ದು ಮಿಶ್ರಿತ ಕನ್ನಡದ ಹಾಡಾಗಲಿ. ಅದು ಹಾಸ್ಯಮಯವೂ ಆಗಿರಲಿ ಎಂದು ಈ ಬಗೆಯ ಹಾಡು ರಚಿಸಿದ್ದಾರಂತೆ.

ತಮ್ಮ ಹಾಡಿಗೆ ದೊರಕುತ್ತಿರುವ ಪ್ರತಿಕ್ರಿಯೆ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್ ಅವರೂ ತುಂಬಾ ಖುಷ್ ಆಗಿದ್ದಾರಂತೆ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.