ADVERTISEMENT

ಪ್ರಿಯಾಂಕಾ ‘ಸೆಕೆಂಡ್‌ ಹಾಫ್‌’ ಪಯಣ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:29 IST
Last Updated 4 ಮೇ 2018, 11:29 IST
ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ   

ಪ್ರಿಯಾಂಕಾ ಉಪೇಂದ್ರ ಮದುವೆ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದ್ದೂ ಆಯಿತು. ಅವರ ಸಿನಿ ಪಯಣದ ‘ಸೆಕೆಂಡ್‌ ಹಾಫ್’ನಲ್ಲಿ ಯಶಸ್ಸು ಕಂಡಿದ್ದು ಕಡಿಮೆ. ಆದರೆ, ಇದೇ ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ ಪ್ರಿಯಾಂಕಾ. ಇದರಲ್ಲಿ ಅವರದು ಪೊಲೀಸ್‌ ಕಾನ್‌ಸ್ಟೆಬಲ್‌ ಪಾತ್ರ.

ಯೋಗಿ ದೇವಗಂಗೆ ನಿರ್ದೇಶನದ ‘ಸೆಕೆಂಡ್‌ ಹಾಫ್’ ಚಿತ್ರ‌‌ ಬಿಡುಗಡೆಗೆ ಸಿದ್ಧವಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ನಟ ಉಪೇಂದ್ರ ಕುಟುಂಬದ ಮತ್ತೊಬ್ಬ ಸದಸ್ಯ ನಿರಂಜನ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ‍‍ಪಾದಾರ್ಪಣೆ ಮಾಡುತ್ತಿದ್ದಾರೆ.

ಮೂವತ್ತೈದು ಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾ ಅವರಿಗೆ ಇದು ಭಿನ್ನವಾದ ಚಿತ್ರವಂತೆ. ‘ಕಾನ್‌ಸ್ಟೇಬಲ್‌ ಪಾತ್ರ ಮಾಡುವಂತೆ ಯಾರೊಬ್ಬರು ನನಗೆ ಧೈರ್ಯ ಮಾಡಿ ಕೇಳಿರಲಿಲ್ಲ. ಆದರೆ, ಯೋಗಿ ಈ ಧೈರ್ಯ ಮಾಡಿದ್ದಾರೆ. ಕಥೆಯಲ್ಲಿ ಗಟ್ಟಿತನವಿದೆ. ಹಾಗಾಗಿ, ತಕ್ಷಣವೇ ಒಪ್ಪಿಕೊಂಡೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿರುವ ತೃಪ್ತಿಯಿದೆ’ ಎಂದು ಹೇಳಿಕೊಂಡರು ಪ್ರಿಯಾಂಕಾ.

ADVERTISEMENT

‘ಪೊಲೀಸ್‌ ಸಮವಸ್ತ್ರ ಧರಿಸಿದ ತಕ್ಷಣವೇ ಕರ್ತವ್ಯ ಪ್ರಜ್ಞೆ ಬರುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ಗಳ ಜವಾಬ್ದಾರಿ ದೊಡ್ಡದು. ಅವರದು ಕಠಿಣ ವೃತ್ತಿ. ಹೊಸ ತಂಡ ಭಿನ್ನವಾದ ಪ್ರಯೋಗ ಮಾಡಿದೆ’ ಎಂದ ಅವರ ಮಾತುಗಳಲ್ಲಿ ಚಿತ್ರಕ್ಕೆ ಯಶಸ್ಸು ಸಿಗಲಿದೆ ಎಂಬ ವಿಶ್ವಾಸವಿತ್ತು.

ನಿರ್ದೇಶಕ ಯೋಗಿ ದೇವಗಂಗೆ, ‘ಚಿತ್ರದಲ್ಲಿನ ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ಉಪೇಂದ್ರ ಅವರು ಒಂದು ಹಾಡಿಗೆ ಧ್ವನಿಯಾಗಿದ್ದಾರೆ’ ಎಂದರು.

ನಟ ನಿರಂಜನ್, ‘ಇದು ನನ್ನ ಮೊದಲ ಚಿತ್ರ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಜನರಿಗೆ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದುಷ್ಟ’ ಚಿತ್ರದ ಬಳಿಕ ನಾಲ್ಕು ವರ್ಷ ತೆರೆಗೆ ಸರಿದಿದ್ದ ಸುರಭಿ ಈ ಚಿತ್ರದ ಮೂಲಕ ಮತ್ತೆ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಈ ಅವಧಿಯಲ್ಲಿ ಅವರು ಕಾನೂನು ಪದವಿ ಅಭ್ಯಾಸ ಮಾಡಿದರಂತೆ. ‘ಒಳ್ಳೆಯ ಸಿನಿಮಾದೊಂದಿಗೆ ಮತ್ತೆ ಚಿತ್ರರಂಗಕ್ಕೆ ಮರಳುವ ಆಸೆ ಇತ್ತು. ಅದಕ್ಕೆ ಸೆಕೆಂಡ್‌ ಹಾಫ್ ವೇದಿಕೆ ಕಲ್ಪಿಸಿದೆ’ ಎಂದ ಅವರ ಮೊಗದಲ್ಲಿ ಸಂತಸ ಇಣುಕಿತು.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚೇತನ್ ಸೋಸ್ಕಾ ಸಂಗೀತ ಸಂಯೋಜಿಸಿದ್ದಾರೆ. ಆರ್.ಕೆ. ಶಿವಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಾಗೇಶ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೇ ವೇಳೆ ಚಿತ್ರದ ಆಡಿಯೊ ಬಿಡುಗಡೆ ಮಾಡಲಾಯಿತು. ಮುಂದಿನ ತಿಂಗಳು ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.