ADVERTISEMENT

ಬರಹ ನಟನೆಯ ನಂಟು...

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ನಂದನಾ ಸೇನ್
ನಂದನಾ ಸೇನ್   

ನಟನೆ ಮತ್ತು ಬರಹ ಎರಡೂ ಒಂದಕ್ಕೊಂದು ಪೂರಕವಾಗಿದ್ದೂ, ಎರಡೂ ಚಟುವಟಿಕೆಗಳಿಗೆ ಸಮಯ ಹೊಂದಿಸುವುದಕ್ಕೆ ತಮ್ಮ ಸಮಾನ ಆದ್ಯತೆ ಇದೆ ಎಂದಿದ್ದಾರೆ ನಟಿ, ಬರಹಗಾರ್ತಿ ಹಾಗೂ ಹೋರಾಟಗಾರ್ತಿ ನಂದನಾ ಸೇನ್.

‘ಅಭಿನಯಿಸುವುದು ಹಾಗೂ ಬರೆಯುವುದು ಎರಡೂ ಕಥೆಯನ್ನು ಹೇಳುವ ವಿಧಾನಗಳೇ ಆಗಿವೆ. ಅಲ್ಲಿ ಪಾತ್ರಗಳನ್ನು ಅಭಿನಯಿಸುತ್ತೇವೆ. ಇಲ್ಲಿ ಪಾತ್ರಗಳ ಮೂಲಕ ಕಥೆ ಹೇಳುತ್ತೇವೆ. ಕಥೆ ಹೇಳುವ ನನ್ನ ಶೈಲಿ ನನ್ನ ನಟನಾ ಕೌಶಲದಿಂದ ಪ್ರೇರಣೆ ಪಡೆದಿದೆ. ಹಾಗೆಯೇ ಒಂದು ಪಾತ್ರವೇ ನಾನಾಗಿ ನಟಿಸುವ ಕಲೆ ನನ್ನ ಬರಹದ ಪ್ರಭಾವ ಪಡೆದಿದೆ’ ಎನ್ನುವ ವಿವರಣೆ ಅವರದು.

‘ನಟಿಸುವಾಗ ಕಥೆಗಳು ಹಾಗೂ ಅದರಲ್ಲಿನ ಪಾತ್ರಗಳು ನನ್ನ ಮೇಲೆ ಪ್ರಭಾವ ಬೀರುವುದೂ ಇದೆ.  ಅಲ್ಲಿ ಪಾತ್ರಗಳನ್ನು ಸೃಷ್ಟಿಸಲು ನಮ್ಮ ಕಲ್ಪನಾಶಕ್ತಿಗೆ ಕೆಲಸ ಕೊಡುತ್ತೇವೆ. ಇಲ್ಲಿ ಆ ಪಾತ್ರವೇ ನಾವಾಗುವ ಕೌಶಲ ಪ್ರದರ್ಶಿಸಬೇಕು’ ಎನ್ನುವುದು ನಂದನಾ ಕಂಡುಕೊಂಡ ಸಂಬಂಧ.

2014ರಲ್ಲಿ ತೆರೆಕಂಡ ವಿವಾದಿತ ಬೆತ್ತಲೆ ದೃಶ್ಯಗಳುಳ್ಳ ಕೇತನ್ ಮೆಹ್ತಾ ಅವರ ‘ರಂಗ್ ರಸಿಯಾ’ ಚಿತ್ರದಲ್ಲಿ ಅರೆನಗ್ನ ದೃಶ್ಯಗಳಲ್ಲಿ ಕಾಣಿಸಿಕೊಂಡ ಮೋಹಕ ತಾರೆ ನಂದನಾ. ಅನಂತರ ಮತ್ತೆ ಅಂತಹ ಪಾತ್ರಗಳಿಗೆ ಆಹ್ವಾನ ಬಂದಾಗ ಮತ್ತೆಂದೂ ಇಂತಹ ಪಾತ್ರ ಮಾಡಲಾರೆ ಎಂದು ಹೇಳಿಕೆ ಕೊಟ್ಟಿದ್ದರು.

ಆನಂತರ ಮಕ್ಕಳಿಗಾಗಿ ಪುಸ್ತಕ ರಚಿಸುವಲ್ಲಿ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ದನಿ ಎತ್ತುವಲ್ಲಿ ನಂದನಾ ಹೆಚ್ಚು ತೊಡಗಿಕೊಂಡರು. ‘ಬರೆಯುವಾಗ ನಮಗೆ ಹೆಚ್ಚು ಸ್ವಾತಂತ್ರ್ಯವಿರುತ್ತದೆ. ನಮ್ಮ ಪಾತ್ರಗಳ ಆಯ್ಕೆ, ಕಥಾ ತಿರುವುಗಳು, ಸನ್ನಿವೇಶಗಳು ಎಲ್ಲವೂ ನಮ್ಮದೇ ಕಲ್ಪನೆಯಿಂದ ಬರುತ್ತವೆ. ಆದ್ದರಿಂದ ಅಲ್ಲಿ ನಾವೇ ನಿರ್ಣಾಯಕರು.

ಆದರೆ ನಟಿಸುವಾಗ ಇತರರ (ನಿರ್ದೇಶಕ) ಕಲ್ಪನೆಗೆ ಪೂರಕವಾಗಿ ನಾವು ವರ್ತಿಸಬೇಕು. ಎರಡೂ ಸೃಜನಶೀಲ ಚಟುವಟಿಕೆಗಳೇ. ಎರಡೂ ಕೆಲಸಗಳನ್ನು ನಾನು ಸಮಾನವಾಗಿ ಪ್ರೀತಿಸುತ್ತೇನೆ. ಅಲ್ಲದೇ ಈ ಎರಡೂ ಕೆಲಸಗಳು ಒಂದಕ್ಕೊಂದು ಪೂರಕವಾಗಿ ಹೋಗುತ್ತವೆ’ ಎನ್ನುವುದು ಅವರ ವಿವರಣೆ.

‘ಇವೆರಡರ ಜೊತೆ ಮಕ್ಕಳ ಹಕ್ಕಿಗಾಗಿ ನನ್ನ ಹೋರಾಟವೂ ಅಷ್ಟೇ ಮಹತ್ವಪೂರ್ಣವಾದುದು ಎಂದು ನಾನು ನಂಬಿದ್ದೇನೆ. ಅಂತಹ ಹೋರಾಟಗಳಿಗೂ ಸಮಯ ಹೊಂದಿಸಿಕೊಳ್ಳುವುದು ನನ್ನ ಜವಾಬ್ದಾರಿ ’ ಎನ್ನುತ್ತಾರೆ ಅವರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.