ಬಾಲಿವುಡ್ ನಟಿಯರು ಏನು ಮಾಡಿದರೂ ಸುದ್ದಿ. ನೀಲಿ ಕಂಗಳ ಚೆಲುವೆ ಐಶ್ವರ್ಯಾ ರೈ ನೇರಳೆ ಲಿಪ್‌ಸ್ಟಿಕ್ ಹಚ್ಚಿಕೊಂಡು ‘ಮಿಂಚಿದ’ ವಿಚಾರ ಹಲವರ ಕಣ್ಣಿಗೆ ತಣ್ಣಗೆ, ಕೆಲವರ ಕಣ್ಣಿಗೆ ಕೆಂಪಗೆ ಕಂಡಿದ್ದು ಹಳೆ ಸುದ್ದಿ.
ಈಗ ಹಳೆ ಸುದ್ದಿಯನ್ನು ಸೋನಂ ಕಪೂರ್ ಪ್ರಸ್ತಾಪಿಸುತ್ತಿದ್ದಾರೆ ಎನ್ನುವುದು ಹೊಸ ಸುದ್ದಿ. ‘ಎಲ್ಲರೂ ತನ್ನ ಬಗ್ಗೆ ಮಾತನಾಡಬೇಕು ಎಂಬ ಕಾರಣಕ್ಕಾಗಿಯೇ ಐಶ್ವರ್ಯಾ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡು ಬಂದಿದ್ದರು. ಅವರ ಮನದಿಚ್ಛೆ ಈಗ ನೆರವೇರಿದೆ’ ಎಂದು ಹೇಳಿದ್ದಾರೆ ಸೋನಂ ಕಪೂರ್.
ಲಾರಿಯಲ್ ಪ್ಯಾರಿಸ್ ಬ್ರಾಂಡ್ ರಾಯಭಾರಿಯಾಗಿರುವ ಐಶ್ವರ್ಯಾ ‘ಬ್ರಾಂಡ್ ಪ್ರಚಾರಕ್ಕಾಗಿ ಈ ಬಗೆಯ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದೇನೆ’ ಎಂದು ಹೇಳಿಕೊಂಡರೂ ಅದನ್ನು ಒಪ್ಪಲು ಸೋನಂ ತಯಾರಿಲ್ಲ. ಎಲ್ಲರೂ ತನ್ನ ಬಗ್ಗೆ ಚರ್ಚಿಸಲಿ ಎಂಬ ಕಾರಣಕ್ಕಾಗಿಯೇ ಐಶ್ವರ್ಯಾ ಈ ಬಣ್ಣದ ಲಿಪ್‌ಸ್ಟಿಕ್ ಆಯ್ದುಕೊಂಡಿರಬಹುದು ಎಂಬುದು ಸೋನಂ ಅನಿಸಿಕೆ.
‘ಸಿಕ್ಕಿರುವ ಪ್ರಚಾರದಿಂದ ಅವರಿಗೆ ಖುಷಿಯಾಗಿರಬಹುದು. ಫ್ಯಾಷನ್ ಹಾಗೂ ಮೇಕಪ್ ಜಮಾನಾದ ಮೂಲಮಂತ್ರವೇ ಎಲ್ಲರ ಆಕರ್ಷಣೆ ಗಳಿಸುವುದು. ಅದನ್ನು ಐಶ್ವರ್ಯಾ ಸಾಧಿಸಿದ್ದಾರೆ’ ಎಂದಿದ್ದಾರೆ ಸೋನಂ. ಫ್ಯಾಷನ್ ಹಾಗೂ ಟ್ರೆಂಡ್‌ಗಳ ಬಗ್ಗೆ ಹೆಚ್ಚು ವ್ಯಾಮೋಹ ಬೆಳೆಸಿಕೊಂಡಿರುವ ಸೋನಂ ಕಪೂರ್‌ಗೆ ಕೂಡ ನೇರಳೆ ಬಣ್ಣದ ಲಿಪ್‌ಸ್ಟಿಕ್ ಇಷ್ಟವಾಗಿದೆ.
ನಾನು ಈ ಮೊದಲೂ ಸಿನಿಮಾ ಚಿತ್ರೀಕರಣಕ್ಕಾಗಿ ಸೋನಂ ನೇರಳೆ ಹಾಗೂ ಕಪ್ಪು ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದೆ. ಆದರೆ ಯಾರೂ ಅದನ್ನು ಗಮನಿಸಿರಲಿಲ್ಲ ಎನ್ನುವುದು ಸೋನಂ ಬೇಸರಕ್ಕೆ ಕಾರಣ. ಇದನ್ನು ಅವರು ಖಾಸಗಿಯಾಗಿ ಹೇಳಿಕೊಳ್ಳುತ್ತಿದ್ದಾರೆ ಎನ್ನುವುದು ಹೊಸ ಗುಲ್ಲು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.