ADVERTISEMENT

ಬೇರುಗಳ ಕಡೆಗೆ ಹೊರಳುನೋಟ...

ಪದ್ಮನಾಭ ಭಟ್ಟ‌
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   

* ‘ಕಾನೂರಾಯಣ’ ರೂಪುಗೊಂಡ ಹಿನ್ನೆಲೆ ತಿಳಿಸಿ.
‘ಬಂಗಾರದ ಜಿಂಕೆ’ಯಿಂದ ‘ಕಾನೂರಾಯಣ’ದವರೆಗೆ ಒಂದೊಂದೇ ಹೆಜ್ಜೆ ಇಡುತ್ತ 36ನೇ ಹೆಜ್ಜೆಯಲ್ಲಿದ್ದೇನೆ. ಯಾವ ಹೆಜ್ಜೆಯ ಗುರುತು ಹೇಗೆ ಮೂಡಿದೆ, ಅದರ ಪರಿಣಾಮಗಳೇನು ಎಂಬೆಲ್ಲ ಮೌಲ್ಯಮಾಪನ ಜನರಿಗೆ ಬಿಟ್ಟಿದ್ದು. ಆದರೆ ಈ 36ನೇ ಹೆಜ್ಜೆ (ಕಾನೂರಾಯಣ) ನನಗೆ ಅದ್ಭುತ ಅನುಭವ ನೀಡಿದೆ. ಅದಕ್ಕೆ ಕಾರಣ ಡಾ.ವೀರೇಂದ್ರ ಹೆಗ್ಗಡೆ ಅವರು.

‘ಕಾನೂರಾಯಣ’ದ ಕನಸು ಮೊಳೆತಿದ್ದು ಎರಡು ವರ್ಷಗಳ ಹಿಂದೆ. ಆಗ ನಾನು ಧರ್ಮಸ್ಥಳಕ್ಕೆ ಹಲವು ಸಾಕ್ಷ್ಯಚಿತ್ರಗಳನ್ನು ಮಾಡಿಕೊಟ್ಟಿದ್ದೆ. ‘ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ’ದ ಕುರಿತೂ ಸಾಕ್ಷ್ಯಚಿತ್ರ ಮಾಡಿದ್ದೆ. ಆಗ ಆ ಯೋಜನೆಯ ಪರಿಣಾಮಗಳನ್ನು ಗಮನಿಸಿದ್ದೆ. ಒಮ್ಮೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಮಂಜುನಾಥ್‌ ಅವರು ನನ್ನನ್ನು ಕರೆದು ಈ ಯೋಜನೆಯ ಕುರಿತು ಒಂದು ಸಿನಿಮಾ ಮಾಡಿಕೊಡಿ ಎಂದು ಕೇಳಿದರು.

2018ಕ್ಕೆ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 50 ವರ್ಷ. ಈ ಸಂದರ್ಭಕ್ಕೆ ಒಂದು ಸಿನಿಮಾ ಮಾಡಿ ಉಡುಗೊರೆ ಕೊಡಬೇಕು ಎಂದು ಅವರು ನಿರ್ಧರಿಸಿದ್ದರು. ‘ಗ್ರಾಮೀಣಾಭಿವೃದ್ಧಿ ಸಂಘ’ದ ಕಾರ್ಯಗಳ ಬಗ್ಗೆ ನಮ್ಮಲ್ಲಿ ತಿಳಿದಿದೆ. ಆದರೆ ಹೊರಗಿನ ಜನಕ್ಕೆ ತಿಳಿದಿಲ್ಲ. ಆದ್ದರಿಂದ ಎಲ್ಲರಿಗೂ ಈ ಯೋಜನೆಯ ಬಗ್ಗೆ ತಿಳಿಯಬೇಕು’ ಎಂಬುದು ಅವರ ಉದ್ದೇಶವಾಗಿತ್ತು. ನಾನು ಮತ್ತು ಕಥೆಗಾರ ಹರೀಶ ಹಾಗಲವಾಡಿ ಸಾಕಷ್ಟು ಚರ್ಚಿಸಿ ಒಂದು ಕಥೆ ಸಿದ್ಧಪಡಿಸಿದೆವು.

ADVERTISEMENT

* ಈ ಚಿತ್ರದ ಕಥೆಯ ಭಿತ್ತಿ ಯಾವ ರೀತಿಯದ್ದು?
ಹಳ್ಳಿಯಲ್ಲಿ ಒಬ್ಬಳು ಸ್ತ್ರೀ ಕ್ರಿಯಾಶೀಲಳಾದರೆ ಯಾವ ರೀತಿ ಚಲನಶೀಲತೆ ಉಂಟಾಗಲು ಸಾಧ್ಯ ಎನ್ನುವುದನ್ನು ‘ಕಾನೂರಾಯಣ’ ಕಥೆ ಹೇಳುತ್ತದೆ.

ಹಣ ಇಂದು ಎಲ್ಲರ ಬದುಕಿನಲ್ಲಿಯೂ ಬಹಳ ಮುಖ್ಯವಾದದ್ದು. ಆದರೆ ಆ ಹಣವನ್ನು ಬಳಸಿಕೊಂಡು, ಅದರ ಮುಖಾಂತರ ಯಾವ ರೀತಿಯ ಶಿಸ್ತಿನ ಬದುಕನ್ನು ರೂಪಿಸಿಕೊಳ್ಳಬೇಕು ಎನ್ನುವುದು ತುಂಬ ಜನರಿಗೆ ಗೊತ್ತಿಲ್ಲ. ನಮ್ಮಲ್ಲಿ ಹಲವರಿಗೆ ಹಣ ಗಳಿಕೆ ಗೊತ್ತಿದೆಯೇ ವಿನಾ ಅದನ್ನು ಸರಿಯಾಗಿ ವ್ಯಯಿಸುವುದು ಗೊತ್ತಿಲ್ಲ.

ಹಾಗೆಯೇ ಇಂದು ಗ್ರಾಮೀಣ ಭಾಗದ ತರುಣ ತರುಣಿಯರು ನಗರಮುಖಿಗಳಾಗುತ್ತಿದ್ದಾರೆ. ಹಳ್ಳಿಯಲ್ಲಿ ಇದ್ದುಕೊಂಡೇ ಆರ್ಥಿಕ ಶಿಸ್ತನ್ನು ಬೆಳೆಸಿಕೊಂಡು ಹೇಗೆ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವುದನ್ನು ಈ ಸಿನಿಮಾ ಹೇಳುತ್ತದೆ. ಇದನ್ನು ಉಪದೇಶದ ರೂಪದಲ್ಲಿ, ನಿಯಮಾವಳಿಗಳ ರೂಪದಲ್ಲಿ ಹೇಳಹೊರಟಿಲ್ಲ. ಬದಲಿಗೆ ಮನರಂಜನೆ ಮತ್ತು ಸಾಕಷ್ಟು ನಾಟಕೀಯ ಅಂಶಗಳನ್ನು ಇಟ್ಟುಕೊಂಡೇ ಹೇಳುತ್ತೇವೆ.

* ಬಹುತೇಕ ಹೊಸಬರನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದಕ್ಕೆ ಏನಾದರೂ ನಿರ್ದಿಷ್ಟ ಕಾರಣಗಳಿವೆಯೇ?
ಇಂದು ಮುಖ್ಯವಾಹಿನಿಯಲ್ಲಿರುವ ಸ್ಟಾರ್‌ಗಳೆಲ್ಲ ಅವರದ್ದೇ ಆದ ಗುಂಪಿನಲ್ಲಿ ಸೇರಿಹೋಗಿದ್ದಾರೆ. ಆ ಗುಂಪುಗಳು ಅವರದ್ದೇ ಆದ ಆದ್ಯತೆಗಳ ಮೇಲೆ ಕೆಲಸ ಮಾಡುತ್ತವೆ. ನಮಗೆ ಈ ರೀತಿಯ ಸಾಮಾಜಿಕ ಕಾಳಜಿ ಇರುವಂಥ ಸಿನಿಮಾಗಳಿಗೆ ಸ್ಟಾರ್‌ಗಳನ್ನು ಹಾಕಿಕೊಂಡರೆ ಅವರ ‘ಇಮೇಜ್‌’ ಜತೆಯಲ್ಲಿಯೇ ಸಿನಿಮಾ ಕಟ್ಟಬೇಕಾಗುತ್ತದೆ. ನಮಗೆ ಆ ಇಮೇಜ್‌ ಬೇಕಾಗಿಲ್ಲ. ಅದಕ್ಕಾಗಿಯೇ ನಾನು ಸ್ಟಾರ್‌ಗಳನ್ನು ಈ ಸಿನಿಮಾಗೆ ಬಳಸಿಕೊಂಡಿಲ್ಲ.

ದೊಡ್ಡಣ್ಣ ಅವರಿಂದ ನಟನೆ ತೆಗೆಯುವಾಗ ನನಗೆ ಈ ಸಮಸ್ಯೆ ಬರುವುದಿಲ್ಲ. ನನಗೆ ಬೇಕಾದ ಹಾಗೆ ನಟನೆ ಮಾಡಿಸಿಕೊಳ್ಳಬಹುದು. ಹಾಗೆಯೇ ಸ್ಕಂದ ಅಶೋಕ್‌ ‘ರಾಧಾ ರಮಣ’ ನಾಯಕ ಅಷ್ಟೆ. ಒಂದು ಸಿನಿಮಾದ ನಾಯಕನ ಇಮೇಜ್‌ ಅವರಿಗೆ ಅಂಟಿಕೊಂಡಿಲ್ಲ. ಹೀಗಾಗಿ ಇಮೇಜ್‌ಗಿಂತ ಪಾತ್ರವೇ ಮುಖ್ಯವಾಗುತ್ತ ಹೋಗುತ್ತದೆ. ಆ ಪಾತ್ರದ ಕಷ್ಟ ಸುಖವೆಲ್ಲ ನಮ್ಮದಾಗಲು ಸಾಧ್ಯವಾಗುತ್ತದೆ. ಅದರ ಬದಲಿಗೆ ಸ್ಟಾರ್‌ ನಟನನ್ನು ಕರೆದುಕೊಂಡು ಬಂದರೆ ಅವನ ಇಮೇಜ್‌ಗೆ ಪೂರಕವಾಗಿ ನಾವು ಪಾತ್ರ ಕಟ್ಟಬೇಕಾಗುತ್ತದೆ.

* ಹಳ್ಳಿ ಕಥೆಯೊಂದನ್ನು ಸಿನಿಮಾ ಮಾಡುವುದು ಯಾಕೆ ಮುಖ್ಯ?
‘ಚಿಗುರಿದ ಕನಸು’ ನನಗೆ ಯಾವತ್ತೂ ಕಾಡುವ ಒಂದು ಇಮೇಜ್‌. ನಗರದಲ್ಲಿರುವ ನಾಯಕ ಹಳ್ಳಿಗೆ ಹೋಗಿ ತನ್ನ ಬೇರುಗಳನ್ನು ಹುಡುಕುವ ಪ್ರಯತ್ನ ನನ್ನನ್ನು ನಿರಂತರವಾಗಿ ಕಾಡುತ್ತಿರುತ್ತದೆ. ‘ಸಾರ್‌ ನಾನು ಐವತ್ತು ವರ್ಷದಿಂದ ಬೆಂಗಳೂರಿನಲ್ಲಿಯೇ ಇದ್ದೇನೆ’ ಎಂದು ಹೇಳುವವರನ್ನು ‘ನಿಮ್ಮ ಊರು ಯಾವ್ದು?’ ಎಂದು ಕೇಳಿದರೆ ‘ಕಡೂರ ಹತ್ರದ ಒಂದು ಹಳ್ಳಿ ಸಾರ್...’ ಎಂದು ಶುರುಮಾಡುತ್ತಾನೆ. ನಗರದಲ್ಲಿರುವವರ ಮೂಲ ಸ್ವರೂಪ ಹಾಗೆಯೇ ಇರುತ್ತದೆ.

ಆದರೆ ಈ ಮಹಾನಗರದ ಒಟ್ಟಾರೆ ಭ್ರಮಾಜಗತ್ತು ಎಲ್ಲರನ್ನೂ ಆಕರ್ಷಿಸುತ್ತದೆ. ಅದರಲ್ಲಿಯೂ ಇಂದಿನ ಶಿಕ್ಷಣವ್ಯವಸ್ಥೆಯಂತೂ ಪೂರ್ಣಪ್ರಮಾಣದಲ್ಲಿ ನಗರ ಕೇಂದ್ರಿತ. ಹಳ್ಳಿಯಲ್ಲಿರುವವನೂ ಸಹ ಇಂಗ್ಲಿಷ್ ಮೀಡಿಯಂ ಶಾಲೆಗೆ ತನ್ನ ಮಕ್ಕಳನ್ನು ಸೇರಿಸುತ್ತಾನೆ. ಅಂಥ ಮಕ್ಕಳು ಎಂದಿಗೂ ‘ಬಾರೋ ಬಾರೋ ಮಳೆರಾಯ..’ ಪದ್ಯ ಹೇಳುವುದೇ ಇಲ್ಲ. ಸಮಸ್ಯೆ ಅಲ್ಲಿಂದಲೇ ಶುರುವಾಗುತ್ತದೆ.

ಇಡೀ ಭಾರತದಲ್ಲಿ  ನಮ್ಮನ್ನು ಬೇರುಗಳಿಂದ ಬೇರ್ಪಡಿಸುವ ಈ ಪ್ರಕ್ರಿಯೆ ತುಂಬಾ ವೇಗವಾಗಿ ನಡೆಯುತ್ತಿದೆ. ಬೌದ್ಧಿಕತೆ ಎಂದರೆ ಅದು ಹಳ್ಳಿಯದಲ್ಲವೇ ಅಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಅಕ್ಷರಶಃ ಇಡೀ ಬದುಕಿನ ಬೌದ್ಧಿಕತೆಯನ್ನು ಬಹಳ ಚೆನ್ನಾಗಿ ಕಾಪಾಡಿಕೊಂಡು ಬಂದಿರುವುದು ಹಳ್ಳಿಗಳೇ. ಇದನ್ನು ಯೋಚಿಸಿದಾಗ ನಮ್ಮ ‘ಕಾನೂರಾಯಣ’ ಸಿನಿಮಾ ಒಂದು ಮಾದರಿಯಾಗಿ ನಿಂತುಕೊಳ್ಳುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.