ADVERTISEMENT

ಬೇರೇನಿಲ್ಲ, ಬರೀ ತರ್ಲೆ!

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಯತಿರಾಜ್
ಯತಿರಾಜ್   

ರವಿಚಂದ್ರನ್‌ಗೆ ಚಿತ್ರದಲ್ಲಿ ಅವಮಾನ ಮಾಡಲಾಗಿದೆ, ಗಾಂಧಿನಗರವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ, ಸೆನ್ಸಾರ್ ಮಂಡಳಿ ಸಾಕಷ್ಟು ಕತ್ತರಿ ಪ್ರಯೋಗಿಸಿದೆ... ಹೀಗೆ ಅನೇಕ ಕಾರಣಗಳಿಂದಾಗಿ ವಿವಾದಕ್ಕೆ ಒಳಗಾಗಿದ್ದ ‘ತರ್‍ಲೆ ನನ್ಮಕ್ಳು’ ಸಿನಿಮಾ, ಈಗ ಬರ್ತೀನಿ ಇನ್ನು ಕೆಲವೇ ದಿನಗಳಲ್ಲಿ ಖಂಡಿತ ಬರ್ತೀನಿ ಎಂದು ಕಾಲ ನೂಕಿ ಅಂತೂ ಈ ವಾರ (ಜ. 15) ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.

‘ತರ್‍ಲೆಗಳಾದರೂ ಇವರು ಕೆಟ್ಟವರಲ್ಲ’ ಎಂಬುದನ್ನು ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ರಾಕೇಶ್. ಗಾಂಧಿನಗರದಲ್ಲಿನ ಕೆಲ ನಿರ್ಮಾಪಕ, ನಿರ್ದೇಶಕರುಗಳು ಕಲಾವಿದರನ್ನು ಹೇಗೆಲ್ಲ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬ ಎಳೆಯಿಟ್ಟುಕೊಂಡು ಕಥೆಯನ್ನು ಬೆಳೆಸಿದ್ದಾರೆ ರಾಕೇಶ್. ಇದು ತನ್ನ ಕಲ್ಪನೆಯೇ ಹೊರತು ಅನುಭವವಲ್ಲ ಎಂದು ಹೇಳಿಕೊಳ್ಳಲು ಅವರು ಮರೆತಿಲ್ಲ.

‘ಕುಟುಂಬದವರೆಲ್ಲ ಕೂತು ನೋಡುವಂಥ ಸಿನಿಮಾ ಮಾಡು, ಯಾವುದೇ ದ್ವಂದ್ವಾರ್ಥದ ಸಂಭಾಷಣೆ ಬೇಡ ಎಂದೇ ಸಿನಿಮಾ ಮಾಡಲು ಹೇಳಿದೆ. ಆದರೆ ಕೊನೆಯ ಐದು ನಿಮಿಷದ ಹೊರತಾಗಿ ಇಡೀ ಚಿತ್ರದಲ್ಲೆಲ್ಲೂ ಒಂದೇ ಅರ್ಥದ ಮಾತುಗಳೇ ಇಲ್ಲ’ ಎಂದರು ನಿರ್ಮಾಪಕರಲ್ಲಿ ಒಬ್ಬರಾದ ಕೆ.ಆರ್. ಸಚ್ಚಿದಾನಂದ. ಅವರ ಸ್ನೇಹಿತನೊಬ್ಬ ಕರೆ ಮಾಡಿ ಚಿತ್ರದ ಬಗ್ಗೆ ವಿಚಾರಿಸಿದಾಗ ‘ದಯವಿಟ್ಟು ಹೆಂಡತಿಯನ್ನು ಕರೆದುಕೊಂಡು ಬರಬೇಡ’ ಎಂದು ಹೇಳಿದ್ದಾಗಿ ಅವರು ಹೇಳಿಕೊಂಡರು.

‘ಇತ್ತೀಚಿನ ಕೆಲ ಹಿಂದಿ ಚಿತ್ರಗಳಿಗೆ ಹೋಲಿಸಿದರೆ ನಮ್ಮ ಸಿನಿಮಾದ ಸಂಭಾಷಣೆ ಏನೇನೂ ಅಲ್ಲ’ ಎನ್ನುತ್ತಾರೆ ನಾಯಕ ಯತಿರಾಜ್. ‘ಎಲ್ಲೂ ಬೇಸರ ಎನ್ನಿಸದ, ಅತಿ ಪ್ರೀತಿ – ಅತಿ ಸೆಂಟಿಮೆಂಟ್ ಇಲ್ಲದ ತರ್‍ಲೆ ತುಂಬಿಕೊಂಡ ಮುದ್ದು ಮುದ್ದಾದ ಪ್ರೇಮ ಕಥೆ ನಮ್ಮದು’ ಎಂದರು ನಾಯಕಿ ಶುಭಾ ಪೂಂಜ. ಮತ್ತೊಬ್ಬ ನಾಯಕಿ ಅಂಜನಾ ದೇಶಪಾಂಡೆ ಮೊದಲ ಬಾರಿ ಕನ್ನಡದಲ್ಲಿ ಕ್ಯಾಮೆರಾ ಎದುರಿಸಿದ ಖುಷಿಯಲ್ಲಿದ್ದಾರೆ. ಅವರಿಲ್ಲಿ ಟೀವಿ ನಿರೂಪಕಿ.

ಸೆನ್ಸಾರ್ ಮಂಡಳಿ ಆಕ್ಷೇಪ ಎತ್ತಿದ್ದ ದೃಶ್ಯಗಳನ್ನು ದೆಹಲಿಯ ಟ್ರಿಬ್ಯೂನಲ್‌ಗೆ ಹೋಗಿ ಪರಿಹರಿಸಿಕೊಂಡು ಬಂದಿದೆ ಚಿತ್ರತಂಡ. ಈಗ ಒಂದೂ ಕಟ್ ಇಲ್ಲದೆ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಎರಡರ್ಥದ ಸಂಭಾಷಣೆಗಳ ಕಾರಣಕ್ಕೆ ಚಿತ್ರ ಹೆಚ್ಚು ಪ್ರಚಾರವನ್ನೂ ಪಡೆಯುತ್ತಿದೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ವಾಯುಪುತ್ರ ಫಿಲಂಸ್ ಹಂಚಿಕೆ ಮಾಡತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.