ADVERTISEMENT

ಬೊಂಬೆಯಾಟವಯ್ಯಾ...

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST
ಬೊಂಬೆಯಾಟವಯ್ಯಾ...
ಬೊಂಬೆಯಾಟವಯ್ಯಾ...   

`ಅವಕಾಶಗಳು ಇಲ್ಲವೇ ಇಲ್ಲ ಎಂದಲ್ಲ. ಆಗೊಂದು ಈಗೊಂದು ಪಾತ್ರಕ್ಕೆ ಕರೆಯುತ್ತಾರೆ. ಸಿಕ್ಕ ಪಾತ್ರವನ್ನು ಮಾಡಿ ಬರುತ್ತೇನೆ. ಇಲ್ಲದಿದ್ದರೆ ಜೊತೆಗೆ ಹೇಗೂ ಇದೆಯಲ್ಲ ಹಾರ್ಮೋನಿಯಂ ಪೆಟ್ಟಿಗೆ. ಕೆಲಸ ಇಲ್ಲದಿದ್ದಾಗ ಸುಮ್ಮನೆ ಅದನ್ನೇ ಬಾರಿಸುತ್ತಾ ಕೂರುತ್ತೇನೆ~ - ನಗುತ್ತಾ ಹೇಳಿದರು ನಟ ಎಂ.ಎಸ್. ಉಮೇಶ್.

ಅವರ ನಗುವಿನ್ಲ್ಲಲಿ ವಿಷಾದದ ಛಾಯೆಯಿತ್ತು. `ಶ್ರುತಿ ಸೇರಿದಾಗ~ ಚಿತ್ರದ `ಬೊಂಬೆಯಾಟವಯ್ಯಾ...~ ಹಾಡಿನಲ್ಲಿ ಉಮೇಶ್‌ರನ್ನು ನೋಡಿದವರು ಎಂದಿಗೂ ಅವರನ್ನು ಮರೆಯಲಾರರು. ರಾಜ್‌ಕುಮಾರ್ ಜೊತೆಗಿನ ಈ ಪಾತ್ರ ಉಮೇಶ್‌ಗೆ ಹೆಸರು ತಂದುಕೊಟ್ಟಿತು.
 
`ಗೋಲ್‌ಮಾಲ್ ರಾಧಾಕೃಷ್ಣ~ ಚಿತ್ರದ ಹಾಸ್ಯ ಸನ್ನಿವೇಶ ಇಂದಿಗೂ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಇರುವಾಗ ಪಾತ್ರಗಳಿಗೆ ಕೊರತೆಯಿರಲಿಲ್ಲ. ಆದರೂ ಆಗಾಗ ಬಣ್ಣದ ಲೋಕ ಅವರನ್ನು ಮರೆತದ್ದಿದೆ. ಅಂತಹ ಸಂದರ್ಭಗಳಲ್ಲಿ ಉಮೇಶ್ ತಮ್ಮ ತವರು ರಂಗಭೂಮಿಗೆ ಮರಳಿದ್ದುಂಟು.

ನಾಲ್ಕು ವರ್ಷದವರಿದ್ದಾಗಲೇ ಕೆ.ಹಿರಣ್ಣಯ್ಯ ಅವರ ವೃತ್ತಿ ನಾಟಕ ಕಂಪೆನಿಗೆ ಉಮೇಶ್ ಸೇರಿಕೊಂಡರು. ಗುಬ್ಬಿ ವೀರಣ್ಣ ನಾಟಕ ಕಂಪೆನಿ ಸೇರಿದಂತೆ ವಿವಿಧ ಕಂಪೆನಿಗಳ ಮೂಲಕ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿದ್ದ ಉಮೇಶ್‌ರನ್ನು ಬೆಳ್ಳಿತೆರೆಗೆ ಕರೆದುಕೊಂಡು ಬಂದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ನಾಟಕಗಳಲ್ಲಿ ಉಮೇಶ್ ಮುಖ್ಯವಾಗಿ ನಿರ್ವಹಿಸುತ್ತಿದ್ದುದು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು.

1960ರಲ್ಲಿ ಬಿ.ಆರ್. ಪಂತುಲು ಅವರಿಗೆ ಉಮೇಶ್‌ರನ್ನು ಪುಟ್ಟಣ್ಣ ಕಣಗಾಲ್ ಪರಿಚಯಿಸಿದರು. ಪಂತುಲು ನಿರ್ದೇಶನದ `ಮಕ್ಕಳ ರಾಜ್ಯ~ ಉಮೇಶ್ ಅಭಿನಯಿಸಿದ ಮೊದಲ ಚಿತ್ರ. ನಂತರ ರಂಗಭೂಮಿಗೆ ಹಿಂದಿರುಗಿದ್ದ ಅವರನ್ನು ಕಣಗಾಲ್ ಮತ್ತೆ `ಕಥಾಸಂಗಮ~ ಚಿತ್ರಕ್ಕೆ ಕರೆತಂದರು. 52 ವರ್ಷಗಳ ವೃತ್ತಿ ಜೀವನದಲ್ಲಿ ಉಮೇಶ್ ನಟಿಸಿದ ಚಿತ್ರಗಳ ಸಂಖ್ಯೆ 400 ದಾಟಿದೆ.

ಹಾಸ್ಯ ಪಾತ್ರಗಳಿಂದಲೇ ಗುರುತಿಸಿಕೊಂಡ ಉಮೇಶ್‌ಗೆ ನೆಗೆಟಿವ್ ಪಾತ್ರಗಳನ್ನು ಮಾಡುವ ಆಸೆ. ಈ ಹಿಂದೆಯೂ ಕೆಲ ಚಿತ್ರಗಳಲ್ಲಿ ನೇತ್ಯಾತ್ಮಕ ಪಾತ್ರಗಳನ್ನು ಮಾಡಿದ್ದಿದೆ. ವಿಭಿನ್ನವಾಗಿ ಗುರುತಿಸಿಕೊಂಡ ಪಾತ್ರವೆಂದಾಗ ಅವರು ನೆನೆಸಿಕೊಳ್ಳುವುದು `ರಾಮಾಪುರದ ರಾವಣ~ ಚಿತ್ರದ ಹುಚ್ಚನ ಪಾತ್ರ. ರಮೇಶ್ ಅರವಿಂದ್‌ರ `ವೆಂಕಟ ಇನ್ ಸಂಕಟ~ ಚಿತ್ರದಲ್ಲಿ ಅವರು ನಿರ್ವಹಿಸಿದ ಅಜ್ಜಿ ಪಾತ್ರ ಮೆಚ್ಚುಗೆ ಗಳಿಸಿತ್ತು.

ನಟನೆ ಮಾತ್ರವಲ್ಲ ಬರವಣಿಗೆಯಲ್ಲೂ ಉಮೇಶ್ ತೊಡಗಿಸಿಕೊಂಡಿದ್ದರು. ಪತ್ರಿಕೆಗಳಿಗೆ ಕಥೆ ಬರೆದಿದ್ದರು. ಅನೇಕ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆಗಳನ್ನೂ ರಚಿಸಿದ್ದರು. `ಹಲೋ ಸಿಸ್ಟರ್~ ಚಿತ್ರಕ್ಕೆ ಹಾಡನ್ನೂ ಬರೆದಿದ್ದರು. ಈಗ ಓದು ಬರಹ ಎರಡೂ ಸಾಧ್ಯವಾಗುತ್ತಿಲ್ಲ. ವಯಸ್ಸು 67ಕ್ಕೆ ತಲುಪಿದ್ದರೂ ನಟಿಸುವ ಉತ್ಸಾಹ ಮಾತ್ರ ಒಂದಷ್ಟೂ ಕುಗ್ಗಿಲ್ಲ ಎನ್ನುತ್ತಾರೆ ಅವರು.

`ನಾನು ವ್ಯವಹಾರದಲ್ಲಿ ದಡ್ಡ. ನಟನೆ ಕಲಿತೆನೇ ವಿನಾ ವ್ಯವಹಾರ ಕಲಿಯಲಿಲ್ಲ. ಹೀಗಾಗಿ ಇಷ್ಟು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಇದ್ದರೂ ಹೆಸರಿನ ಹೊರತು ಸಂಪಾದಿಸಿದ್ದು ಅಷ್ಟಕಷ್ಟೇ. ಆಗ ನಾವು ನಟನೆಯನ್ನು ಪವಿತ್ರವಾದ ಕೆಲಸ ಎಂದು ಮಾಡುತ್ತಿದ್ದೆವು. ನಿರ್ಮಾಪಕ ಕೊಟ್ಟಿದ್ದನ್ನು ತೆಗೆದುಕೊಳ್ಳುತ್ತಿದ್ದೆವು. ಈಗ ಕಲೆಯೂ ವ್ಯವಹಾರವಾಗಿದೆ. ಕಾಲ ಬದಲಾದಂತೆ ಹಾಸ್ಯದ ಸ್ವರೂಪವೂ ಬದಲಾಗಿದೆ. ಕಾಲಾಯ ತಸ್ಮೈ ನಮಃ~ ಎಂದು ಉಮೇಶ್ ಬೇಸರದಿಂದ ನುಡಿಯುತ್ತಾರೆ.

ಚಿತ್ರರಂಗದ ಸ್ಥಿತ್ಯಂತರಗಳ ಬಗ್ಗೆ ಉಮೇಶ್ ಅವರದ್ದು ಸ್ಥಿತಪ್ರಜ್ಞ ಭಾವ. ಬದಲಾವಣೆಗಳು ಕಲಾವಿದನ ಬದುಕಿನಲ್ಲಿ ಇದ್ದದ್ದೇ. ಪುಟ್ಟಣ್ಣ ಕಣಗಾಲ್ ಬಂದಾಗ ಬದಲಾವಣೆಗಳಾದಂತೆ ಯೋಗರಾಜ್ ಭಟ್, ಸೂರಿಯಂತಹ ಹೊಸ ತಲೆಮಾರಿನ ನಿರ್ದೇಶಕರು ಬದಲಾವಣೆಗಳನ್ನು ತಂದಿದ್ದಾರೆ. ಇದೆಲ್ಲವೂ ಚಿತ್ರರಂಗವನ್ನು ಸಕಾರಾತ್ಮಕವಾಗಿ ಮುನ್ನಡೆಸುತ್ತಿದೆ ಎಂದವರು ವಿಶ್ಲೇಷಿಸುತ್ತಾರೆ.

ಎರಡು ದೋಣಿಯಲ್ಲಿ ಕಾಲು ಹಾಕುವುದು ಬೇಡ ಎಂದು ರಂಗಭೂಮಿ ಸೆಳೆತವಿದ್ದರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡೆ. ಅದರಲ್ಲಿ ತೃಪ್ತಿ ಸಿಕ್ಕಿದೆ. ಅವಕಾಶಗಳು ಕಡಿಮೆಯಾಗಿದೆ. ಆದರೆ ಹಿಂದೆ ಸಿಗುತ್ತಿದ್ದ ಪ್ರೀತಿ ಗೌರವ ಈಗಲೂ ನನಗೆ ಸಿಗುತ್ತಿದೆ ಎನ್ನುತ್ತಾರೆ ಉಮೇಶ್.
 

`ಬೊಂಬೆಯಾಟವಯ್ಯಾ...~
ಉಮೇಶ್‌ರಿಗೆ ಹೆಸರು ತಂದುಕೊಟ್ಟ ಗೀತೆ. ಅದು ಪ್ರಸ್ತುತ ಚಿತ್ರೋದ್ಯಮದಲ್ಲಿನ ಅವರ ಪರಿಸ್ಥಿತಿಯೂ ಹೌದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT