ADVERTISEMENT

ಭಜರಂಗಿಯ ಗೆಂಡೆತಿಮ್ಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

‘ಶಿವ’ ಚಿತ್ರದ ಶೂಟಿಂಗ್‌ ಸಂದರ್ಭ. ಎದುರಿಗೆ ನಿಂತ ಶಿವರಾಜ್‌ಕುಮಾರ್‌ ಅವರನ್ನು ತುಂಬಾ ಹೊತ್ತು ನೋಡುತ್ತಲೇ ಇದ್ದೆ. ಅವರ ಎನರ್ಜಿಯನ್ನು ಹತ್ತಿರದಿಂದ ಕಂಡು ದಂಗಾಗಿದ್ದೆ. ಅವರ ಬಗ್ಗೆ ಹೆಚ್ಚಿಗೆ ಹೇಳುವುದಾದರೂ ಏನಿದೆ? ಅವರು ತುಂಬಾ ಗ್ರೇಟ್‌...
ಲೋಕೇಶ್‌ ಅವರ ಮಾತುಗಳಲ್ಲಿ ಭಾವುಕತೆಯಿತ್ತು, ಹಿರಿಯ ನಟನ ಕುರಿತು ಅಭಿಮಾನವೂ ಇತ್ತು. ‘ಶಿವ’ ಚಿತ್ರದ ಸಣ್ಣಪಾತ್ರವೊಂದರಲ್ಲಿ ನಟಿಸಿದ್ದ ಅವರೀಗ, ‘ಭಜರಂಗಿ’ ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲಿಗೆ ಶಿವಣ್ಣನೊಂದಿಗಿನ ಜರ್ನಿ ಮುಂದುವರೆದಿದೆ.

‘ಭಜರಂಗಿ’ ಚಿತ್ರದಲ್ಲಿ ಶಿವರಾಜ್‌ರ ಮಗನ ಪಾತ್ರದಲ್ಲಿ ಲೋಕೇಶ್‌ ಅಭಿನಯಿಸಿದ್ದಾರಂತೆ. ಈ ಚಿತ್ರಕ್ಕಾಗಿ ಶಿವರಾಜ್‌ ಮೈಯಲ್ಲಿ ಮಡಿಕೆಗಳನ್ನು ಮೂಡಿಸಿಕೊಂಡಿದ್ದರಷ್ಟೇ; ಅವರ ಮಗನ ಪಾತ್ರಧಾರಿಯಾಗಿ ಲೋಕೇಶ್‌ ಅವರೂ ಮೈಹುರಿ ಮಾಡಿಕೊಂಡಿದ್ದಾರೆ. ಸ್ವಾರಸ್ಯವೆಂದರೆ, ಅಪ್ಪ–ಮಗನ ಈ ಪಾತ್ರಧಾರಿಗಳು ಒಟ್ಟಿಗೆ ಇರುವ ಒಂದು ಸನ್ನಿವೇಶವೂ ಸಿನಿಮಾದಲ್ಲಿ ಇಲ್ಲ! ಆ ಸ್ವಾರಸ್ಯವನ್ನು ಚಿತ್ರ ನೋಡಿಯೇ ಸವಿಯಬೇಕು.

ಲೋಕೇಶ್‌ ಅವರಿಗೆ ‘ಭಜರಂಗಿ’ಯಲ್ಲಿ ಅವಕಾಶ ಸಿಕ್ಕಿದ್ದರ ಹಿಂದೆಯೂ ಒಂದು ಕಥೆಯಿದೆ. ಹೇಳಿಕೇಳಿ ಲೋಕೇಶ್‌ ರಂಗಭೂಮಿ ಮೂಲದ ಕಲಾವಿದ. ಕಾಲೇಜು ನಂತರ ರಂಗಭೂಮಿಯಲ್ಲೇ ಭವಿಷ್ಯ ಕಂಡುಕೊಳ್ಳಲು ಬಯಸಿದ ಅವರು ಹಲವು ನಾಟಕಗಳಲ್ಲಿ ನಟಿಸಿದರು. ನಾಟಕವೊಂದರಲ್ಲಿ ಅವರ ಅಭಿನಯ ಕಂಡು ನಿರ್ದೇಶಕ ಹರ್ಷ ದಂಗುಬಡಿದುಹೋದರಂತೆ. ‘ತಮ್ಮ ಮುಂದಿನ ಸಿನಿಮಾದಲ್ಲಿ ನಿನಗೊಂದು ಪಾತ್ರ ಗ್ಯಾರಂಟಿ’ ಎಂದವರು ಭರವಸೆಯನ್ನೂ ನೀಡಿದರು. ಆ ಭರವಸೆಯೇ ‘ಭಜರಂಗಿ’ ಅವಕಾಶವಾಗಿ ಒದಗಿಬಂದಿದೆ. ಹರ್ಷ ಅವರ ಚಿತ್ರ ಮಾತ್ರವಲ್ಲ, ‘ಸವಾರಿ’ ಹಾಗೂ ‘ಮತ್ತೆ ಮುಂಗಾರು’ ಸಿನಿಮಾ ಅವಕಾಶಗಳು ದೊರೆತದ್ದು ಕೂಡ ರಂಗದ ನಂಟಿನಿಂದಲೇ.

ಲೋಕೇಶ್‌ ಅವರಲ್ಲಿ ಜೀವಮಾನ ಪೂರ್ತಿ ಮರೆಯಲಾಗದ ನೆನಪುಗಳನ್ನು ‘ಭಜರಂಗಿ’ ಚಿತ್ರ ಮೂಡಿಸಿದೆ. ಸಿನಿಮಾ ಆರಂಭಗೊಳ್ಳಲು ನಾಲ್ಕೈದು ತಿಂಗಳು ಇದೆ ಎನ್ನುವಾಗಲೇ ಲೋಕೇಶರಿಗೆ ಕರೆ ಕಳುಹಿಸಿದ ಹರ್ಷ, ಚಿತ್ರಕ್ಕಾಗಿ ಮೈಕಟ್ಟು ತಿದ್ದಿತೀಡಿಕೊಳ್ಳಲು ಸೂಚಿಸಿದರಂತೆ. ಅಷ್ಟು ಮಾತ್ರವಲ್ಲ, ಅದಕ್ಕೆ ಅಗತ್ಯವಿರುವ ಸವಲತ್ತುಗಳನ್ನೂ ಒದಗಿಸಿದರಂತೆ. ಈ ವಾತ್ಸಲ್ಯದ ಜೊತೆಗೆ– ಪ್ರತಿಕೂಲ ವಾತಾವರಣದ ನಡುವೆಯೂ ಚಿತ್ರೀಕರಣ ನಡೆಸಿದ ಸಾಹಸ ಹಾಗೂ ಮೂರು ಸಲ ಕುದುರೆಯ ಮೇಲಿಂದ ಬಿದ್ದುದು ಲೋಕೇಶ್‌ ಅವರ ನೆನಪಿನ ಬುತ್ತಿಯ ಸರಕುಗಳು. ಹೀಗೆ ಆಯ ತಪ್ಪಿದಾಗ ಒಮ್ಮೆ ತಿಂಗಳುಪೂರ್ತಿ ಹಾಸಿಗೆಯಲ್ಲಿ ಮಲಗಿದ್ದ ಅವರು, ಚೇತರಿಸಿಕೊಂಡ ನಂತರ ಹಳೆಯ ಹುಮ್ಮಸ್ಸಿನಲ್ಲೇ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದರಂತೆ.

ಇಡೀ ಸಿನಿಮಾ ಒಂದು ಸುಂದರ ಪಯಣದಂತೆ ಲೋಕೇಶ್‌ ಅವರಿಗನ್ನಿಸಿದೆ. ಕಥೆಯೂ ಒಂದು ರೋಚಕ ಜರ್ನಿಯಂತೆ ಇದೆಯಂತೆ. ಈ ಜರ್ನಿಯ ಒಂದು ಪ್ರಮುಖ ತಿರುವಾಗಿ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ‘ಭಜರಂಗಿ’ಯಂಥ ಸಿನಿಮಾ ಅನುಭವ ಮತ್ತೆ ತಮ್ಮ ವೃತ್ತಿಜೀವನದಲ್ಲಿ ಪುನರಾವರ್ತನೆಗೊಳ್ಳುತ್ತದೋ ದೊರೆಯುತ್ತದೋ ಇಲ್ಲವೋ ಎನ್ನುವಷ್ಟರ ಮಟ್ಟಿಗೆ ‘ಭಜರಂಗಿ’ ಲೋಕೇಶ್‌ ಅವರನ್ನು ಆವರಿಸಿಕೊಂಡಿದೆ. ತಾವು ಮಾತ್ರವಲ್ಲ, ತಮ್ಮಂಥ ಅನೇಕರಿಗೆ ‘ಭಜರಂಗಿ’ ವೃತ್ತಿ ಜೀವನದ ತಿರುವು ನೀಡುವ ಸಿನಿಮಾ ಆಗಲಿದೆ ಎನ್ನುವ ನಿರೀಕ್ಷೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.