ADVERTISEMENT

ಮತ್ತೊಮ್ಮೆ `ಅರ್ಥ' ಶಾಸ್ತ್ರ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2013, 19:59 IST
Last Updated 21 ಫೆಬ್ರುವರಿ 2013, 19:59 IST
ಶ್ರೀಕಾಂತ್, ಶುಭಾ ಪೂಂಜಾ
ಶ್ರೀಕಾಂತ್, ಶುಭಾ ಪೂಂಜಾ   

ಕನಸುಗಳನ್ನು ಹೊತ್ತು ಹಳ್ಳಿಯಿಂದ ನಗರಕ್ಕೆ ಬರುವ ನಾಯಕ-ನಾಯಕಿ. ಅಪರಿಚಿತ ಸ್ಥಳದಲ್ಲಿ ಅವರಿಗೆ ನೂರಾರು ಅಡ್ಡಿ ಆತಂಕ. ಈ ತೊಡಕುಗಳನ್ನು ಅವರು ಮೀರಿ ನಿಲ್ಲುವರೇ?- ಇದು `ಅರ್ಥ' ಚಿತ್ರದ ಕಥನ ಕುತೂಹಲ.

`ಅರ್ಥ' ಡಿ. ರಾಜೇಶ್ ನಿರ್ದೇಶಿಸುತ್ತಿರುವ ಚಿತ್ರ. ಸಿನಿಮಾದ ಮುಹೂರ್ತ ನೆರವೇರಿಸಿ ಸುದ್ದಿಗಾರರಿಗೆ ಮುಖಾಮುಖಿಯಾಗಿದ್ದ ಅವರ ಮಾತುಗಳಲ್ಲಿ ಚಿತ್ರದ ಕಥೆಯ ಬಗ್ಗೆ ವಿಶ್ವಾಸವಿತ್ತು. ತಮ್ಮ ಕತೆಗೆ ಗೆಳೆಯ ಹೇಮಂತ್ ಕುಮಾರ್ ಹಣ ಹೂಡಲು ಮುಂದೆ ಬಂದಿರುವುದು ಅವರ ಉತ್ಸಾಹವನ್ನು ಹೆಚ್ಚಿಸಿದೆ. ಚಿತ್ರದ ನಾಯಕ ಶ್ರೀಕಾಂತ್. ನಾಯಕಿ ಶುಭಾ ಪೂಂಜಾ. ಅಂದಹಾಗೆ, ಕೆ.ವಿ.ರಾಜು ಮತ್ತು ಸುದೀಪ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ರಾಜೇಶ್ ಅವರದು.

`ಐಎಎಸ್ ಮಾಡುವ ಆಸೆಯಿಂದ ನಾಯಕ ಹಳ್ಳಿಯಿಂದ ನಗರದ ಹಾದಿ ಹಿಡಿಯುತ್ತಾನೆ. ಸಿನಿಮಾ ಕಲಾವಿದೆ ಆಗಬೇಕೆಂದು ನಾಯಕಿ ಕೂಡ ಹಳ್ಳಿಯಿಂದ ನಗರಕ್ಕೆ ಬರುತ್ತಾಳೆ. ನಾಯಕ ತನ್ನ ಗುರಿ ತಲುಪುವಲ್ಲಿ ವಿಫಲನಾದರೂ ಚಿತ್ರದುದ್ದಕ್ಕೂ ಕುತೂಹಲಕಾರಿ ಸನ್ನಿವೇಶಗಳಿಗೆ ಎದುರಾಗುತ್ತಿರುತ್ತಾನೆ. ನಾಯಕಿ ವೇಶ್ಯಾವಾಟಿಕೆಯ ಸುಳಿಯಲ್ಲಿ ಸಿಲುಕುವ ಒತ್ತಡ ಅನುಭವಿಸುತ್ತಾಳೆ. ಅವಳ ಬದುಕೂ ವಿಚಿತ್ರ ತಿರುವು ಪಡೆಯುತ್ತದೆ. ಸಿನಿಮಾ ಕೊನೆಯಲ್ಲಿ ಅವರಿಬ್ಬರ ನಿಜವಾದ ಬದುಕು ಆರಂಭವಾಗಿರುತ್ತದೆ' ಎಂದು ಚಿತ್ರದ ವಿವರ ನೀಡಿದರು ರಾಜೇಶ್.

`ಸುನೀಲ್ ಕುಮಾರ್ ದೇಸಾಯಿ ಅವರ `ಪ್ರತ್ಯರ್ಥ' ಸಿನಿಮಾದ ಶೈಲಿಯಲ್ಲಿಯೇ ತಮ್ಮ ಸಿನಿಮಾದ ನಿರೂಪಣೆ ಇರುತ್ತದೆ. ಚಿತ್ರಕಥೆ ಹೃದಯಕ್ಕೆ ತಟ್ಟುತ್ತದೆ. ಥ್ರಿಲ್ಲಿಂಗ್ ಅನುಭವ ಪ್ರೇಕ್ಷಕರಿಗೆ ಸಿಗಲಿದೆ' ಎಂದರು.

`ಚಿತ್ರದಲ್ಲಿ ನನಗೆ ಹಳ್ಳಿ ಹುಡುಗನ ಪಾತ್ರ. ಐಎಎಸ್ ಕನಸು ಕಾಣುವ ನನಗೆ ಬದುಕಿನ ಅರ್ಥವನ್ನೇ ಬದಲಾಯಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ತುಂಬಾ ಕುತೂಹಲಕಾರಿ ಕತೆ ಚಿತ್ರದಲ್ಲಿದೆ' ಎಂದರು ನಾಯಕ ಶ್ರೀಕಾಂತ್.

ನಾಯಕಿ ಶುಭಾ ಪೂಂಜಾ ಅವರಿಗೆ ಪ್ರಬುದ್ಧ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. `ಸ್ಲಂಬಾಲಾ' ಚಿತ್ರದಲ್ಲಿ ನಾನು ನಿರ್ವಹಿಸಿದ್ದ ಪಾತ್ರಕ್ಕಿಂಥ ಇದು ಪ್ರಬುದ್ಧವಾಗಿದೆ' ಎಂದರು.

ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರ ಸೋದರ ಪ್ರಣವ್ ರಾಯ್ `ಅರ್ಥ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ, ಕಲೈಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಬೆಂಗಳೂರಿನಲ್ಲಿ 25 ದಿನ, ದಾವಣಗೆರೆಯಲ್ಲಿ 20 ದಿನ ಚಿತ್ರೀಕರಣ ನಡೆಸುವ ಯೋಜನೆ ನಿರ್ದೇಶಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.