ADVERTISEMENT

ಮನೆಯೊಳಗೆ ತಿಕ್ಕಾಟ!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 19:30 IST
Last Updated 27 ಫೆಬ್ರುವರಿ 2014, 19:30 IST
ಮನೆಯೊಳಗೆ ತಿಕ್ಕಾಟ!
ಮನೆಯೊಳಗೆ ತಿಕ್ಕಾಟ!   

ಒಂದು ಕುಟುಂಬದೊಳಗಿನ ಸದಸ್ಯರಲ್ಲಿ ಜಂಭ ಇದ್ದರೆ ಯಾವ ಯಾವ ಪರಿಣಾಮಗಳಾಗುತ್ತವೆ? ಕುಟುಂಬದ ಸದಸ್ಯರ ನಡುವಿನ ತಿಕ್ಕಾಟಗಳೇನು? ಒಬ್ಬರ ಜಂಭ ಮತ್ತೊಬ್ಬರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಹೀಗೆ ಜಂಭವನ್ನೇ ಪ್ರಧಾನ ವಸ್ತುವಿಷಯವನ್ನಾಗಿಟ್ಟುಕೊಂಡು ಕಥೆಯೊಂದು ಸಟ್ಟೇರಿದೆ. ಆ ಚಿತ್ರದ ಹೆಸರು ‘ಮನೆ ತುಂಬಾ ಬರಿ ಜಂಭ’.

ಚಿತ್ರದ ಮುಹೂರ್ತ ಮುಗಿಸಿ ಮಾಧ್ಯಮಗಳ ಎದುರಿಗೆ ಕುಳಿತ ಚಿತ್ರತಂಡ ಇಡೀ ಕಥೆ ಒಳಸುಳಿಗಳನ್ನು ಚುಟುಕು ಚುಟುಕಾಗಿಯೇ ಬಿಟ್ಟುಕೊಟ್ಟಿತ್ತು. ಆದರೆ ಚುಟುಕಾಗಿ ಹೇಳಿದ ಕಥೆಯಲ್ಲಿಯೇ ಸಿನಿಮಾ ಸಾರ ಬಿಚ್ಚಿಕೊಂಡಿತ್ತು. ನಿರ್ದೇಶಕ ಅರುಣೇಶ್ ಅವರಿಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್‌ ಹೇಳುವ ಸಂಭ್ರಮವೊಂದು ಕಡೆಯಾದರೆ, ಬಹುಪಾಲು ನಟರೂ ಹೊಸ ಮುಖಗಳಾದ್ದರಿಂದ ಅವರಿಗೂ ನಟರಾಗುತ್ತಿರುವ ಸಂಭ್ರಮ.

‘ಸೈನಿಕನ ಕುಟುಂಬವೊಂದನ್ನು ಕೇಂದ್ರೀಕರಿಸಿ ಚಿತ್ರಕಥೆಯನ್ನು ರೂಪಿಸಲಾಗಿದೆ. ಜಂಭ ಇದ್ದರೆ ಏನಾಗುತ್ತದೆ ಎನ್ನುವುದೇ ಕಥೆಯ ಮುಖ್ಯ ಅಂಶ. ಸಂದೇಶದ ಜೊತೆಯಲ್ಲಿ ಮನರಂಜನೆಯೂ ಚಿತ್ರದಲ್ಲಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. 35ರಿಂದ 40 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗುವುದು’ ಎಂದು ಚಿತ್ರದ ಯೋಜನೆಗಳ ಬಗ್ಗೆ ಹೇಳಿಕೊಂಡರು ನಿರ್ದೇಶಕ ಅರುಣೇಶ್. 

ಕೌಟುಂಬಿಕ ಕಥೆಯಾದ್ದರಿಂದ ಇಲ್ಲಿ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ನಾಲ್ವರು ನಾಯಕರು ಮತ್ತು ನಾಲ್ವರು ನಾಯಕಿಯರು ಚಿತ್ರದಲ್ಲಿದ್ದು, ಎಲ್ಲರಿಗೂ ಸಮಾನ ಅವಕಾಶಗಳು ಇದೆಯಂತೆ. ಮುಖ್ಯಭೂಮಿಕೆಯಲ್ಲಿರುವ ಅಕ್ಷತಾ, ಅನಿತಾ, ಜ್ಯೋತಿ, ಜ್ಯೋತಿಗೌಡ, ಲಕ್ಷ್ಮೀಶ್ ಭಟ್, ಮಹೇಶ್, ಜಗದೀಶ್, ಮಧು, ಮಹೇಂದ್ರ ಮುನ್ನೋತ್ ತಮ್ಮ ಪಾತ್ರ ಮತ್ತು ಹಿನ್ನೆಲೆಯನ್ನು ಪರಿಚಯಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.