ADVERTISEMENT

ಮನೆ ಮನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 19:30 IST
Last Updated 25 ಜೂನ್ 2011, 19:30 IST
ಮನೆ ಮನ
ಮನೆ ಮನ   

ಸುದ್ದಿ ಮಾಡುವುದು, ಸುದ್ದಿಯಲ್ಲಿ ಇರುವುದು ಎರಡೂ ದೀಪಿಕಾ ಪಡುಕೋಣೆಗೆ ಕರಗತ. ಐಪಿಎಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ಬೆಂಗಳೂರು ತಂಡವು ಕೋಲ್ಕತ್ತವನ್ನು ಸೋಲಿಸಿದಾಕ್ಷಣ ಅವರು ಸಿದ್ಧಾರ್ಥ ಮಲ್ಯ ಜೊತೆ ತುಟಿಮುತ್ತು ಹಂಚಿಕೊಂಡಿದ್ದರು.

ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬುದರ ರುಜುವಿನಂತಿತ್ತು ಆ ಮುತ್ತು. ಅದಕ್ಕೆ ಗರಿ ಮೂಡಿಸಿರುವಂಥ ಇನ್ನೊಂದು ಸುದ್ದಿ ಏನಪ್ಪಾ ಅಂದರೆ, ದೀಪಿಕಾಗೆ ಸಿದ್ಧಾರ್ಥ ಮನೆ ಕೊಡಿಸಿದ್ದಾರಂತೆ.

ಮುಂಬಯಿಯ ಪ್ರಭಾವತಿ ಎಂಬಲ್ಲಿನ ಮನೆಯನ್ನು ತನ್ನ ಮನದನ್ನೆಗೆ ಸಿದ್ಧಾರ್ಥ ಕೊಡಿಸಿದ್ದಾರೆಂದು ಬಾಲಿವುಡ್‌ನಲ್ಲಿ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ದೀಪಿಕಾ ಮಾತ್ರ ಅದು ಸುಳ್ಳೆಂದು ಅವಕಾಶ ಸಿಕ್ಕ ಕಡೆ ಎಲ್ಲಾ ಪ್ರತಿಕ್ರಿಯಿಸುತ್ತಿದ್ದಾರೆ. 

`ಇಪ್ಪತ್ತನೇ ವಯಸ್ಸಿನಲ್ಲಿ ಮನೆ ತೊರೆದು ವೃತ್ತಿಬದುಕನ್ನು ಕಟ್ಟಿಕೊಳ್ಳಲು ಬಂದವಳು ನಾನು. ಮಾಡೆಲಿಂಗ್‌ಗೆ ಕಾಲಿಟ್ಟಾಗ ನನಗಿನ್ನೂ ಹದಿನೆಂಟು. ಮುಂಬೈನಲ್ಲಿ ಬಾಡಿಗೆ ಕಟ್ಟುವುದು ಕಷ್ಟ. ಅದಕ್ಕೇ ಮೊದಲು ಬಾಂದ್ರಾದಲ್ಲಿ ಸಣ್ಣ ಮನೆ ಕೊಂಡೆ.

ಆಮೇಲೊಂದು ಕಾರು. ಈಗ ಪ್ರಭಾವತಿಯಲ್ಲಿ ಎರಡು ಬೆಡ್‌ರೂಮಿನ ಮನೆ ಕೊಂಡುಕೊಂಡಿದ್ದೇನೆ. ಸಿದ್ಧಾರ್ಥ ತನಗೇ ಮನೆ ಕೊಂಡಿಲ್ಲ. ಅಪ್ಪ ಕೊಡಿಸಿದ ಮನೆಯಲ್ಲೇ ಇದ್ದಾನೆ. ಅವನು ನನಗ್ಯಾಕೆ ಮನೆ ಕೊಡಿಸಬೇಕು. ನಾನು ಯಾರೋ ಮನೆ ಕೊಡಿಸುತ್ತಾರೆ ಎಂದು ಅವರ ಜೊತೆ ಸುತ್ತುವವಳಲ್ಲ. ನನ್ನ ಬದುಕಿನ ಅಗತ್ಯ ಪೂರೈಸಿಕೊಳ್ಳುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ~ ಎಂಬುದು ದೀಪಿಕಾ ಸಮಜಾಯಿಷಿ.

ಹಾಗೆ ನೋಡಿದರೆ, `ಓಂ ಶಾಂತಿ ಓಂ~ ಚಿತ್ರ ಬಂದ ನಂತರ ದೀಪಿಕಾ ಖಾಲಿ ಕೂತದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಅವಕಾಶ ಸಿಗುತ್ತಲೇ ಇದೆ. ಹಾಗಿದ್ದೂ ಅವರು ನಟಿಯಾಗಿ ರುಜುವಾತು ಮಾಡಬೇಕಾದದ್ದು ಸಾಕಷ್ಟಿದೆ. ಯಾರು ಹೆಚ್ಚು ಜನಪ್ರಿಯರು, ಅಭಿನಯದ್ಲ್ಲಲಿ ಯಾರು ಮೇಲೆ ಎಂಬಿತ್ಯಾದಿ ಸಮೀಕ್ಷೆಗಳು ನಡೆದಾಗಲೆಲ್ಲಾ ದೀಪಿಕಾಗೆ ಹೆಚ್ಚು ಓಟುಗಳು ಬೀಳುತ್ತಿಲ್ಲ. `ಈಗಿನ್ನೂ ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಪ್ರಿಯಾಂಕಾ ಚೋಪ್ರಾ, ಕರೀನಾ ಮೊದಲಾದವರು ಆಗಲೇ ಹತ್ತು ವರ್ಷದಿಂದ ಇಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಕತ್ರಿನಾ ಕೂಡ ಎಂಟು ವರ್ಷದಿಂದ ಬಣ್ಣ ಹಚ್ಚುತ್ತಿದ್ದಾರೆ. ನನ್ನ ಇತ್ತೀಚಿನ ಚಿತ್ರದ ಅಭಿನಯವನ್ನು ಸೈಫ್ ಅಲಿ ಖಾನ್ ತುಂಬು ಹೃದಯದಿಂದ ಕೊಂಡಾಡಿದರು. ನಿರ್ದೇಶಕ ಪ್ರಕಾಶ್ ಝಾ ಫೋನ್ ಮಾಡಿ ನನ್ನ ಕೆಲಸ ಚೆನ್ನಾಗಿತ್ತು ಎಂದು ಅಭಿನಂದಿಸಿದರು. ಅವರು ಈ ಮೊದಲು ಾವ ನಟಿಯನ್ನೂ ಈ ರೀತಿ ಅಭಿನಂದಿಸಿದ್ದೇ ಇಲ್ಲವಂತೆ. ಹೀಗಾಗಿ, ನಟಿಯಾಗಿ ನಾನು ಬೆಳೆಯುತ್ತಿದ್ದೇನೆಂದೇ ಅರ್ಥವಲ್ಲವೇ?~- ದೀಪಿಕಾ ಜಾಣತನದಿಂದ ಕೇಳುತ್ತಾರೆ.

ರಣಬೀರ್ ಕಪೂರ್ ಈಗಲೂ ತಮ್ಮ ಆತ್ಮೀಯ ಗೆಳೆಯ ಎನ್ನುವ ದೀಪಿಕಾ, ಸಿದ್ಧಾರ್ಥ ಮಲ್ಯ ಜೊತೆ ಪ್ರೇಮಸಲ್ಲಾಪ ನಡೆಸಿರುವುದನ್ನು ಮಾತ್ರ ಮುಕ್ತವಾಗಿ ಒಪ್ಪಿಕೊಳ್ಳುವುದಿಲ್ಲ. `ಅವನು ಸ್ಮಾರ್ಟ್. ಬೇರೆಯವರ ಬಗ್ಗೆ ಕಾಳಜಿ ತೋರಿಸುವ ಗುಣವಿರುವ ವ್ಯಕ್ತಿ. ಅದಕ್ಕೇ ಅವನು ನನ್ನ ಒಳ್ಳೆಯ ಗೆಳೆಯ. ನಾನೂ ಕ್ರಿಕೆಟ್ ಅಭಿಮಾನಿ. ಅವನೂ ಅಭಿಮಾನಿ. ಅಂದು ಬೆಂಗಳೂರು ಗೆದ್ದಾಗ ತುಂಬಾ ಸಂತೋಷವಾಯಿತು. ಮುತ್ತು ಕೊಡುವ ಮೂಲಕ ಅದನ್ನು ಹಂಚಿಕೊಂಡೆವು, ಅಷ್ಟೆ. ಅದಕ್ಕೆ ಏನೇನೋ ಬಣ್ಣ ಕಟ್ಟಿ, ಇಲ್ಲ ಸಲ್ಲದ್ದನ್ನು ಕಲ್ಪಿಸಿಕೊಂಡರೆ ನಾನೇನು ಮಾಡಲಿ. ಆಧುನಿಕ ಬದುಕಿನಲ್ಲಿ ಸಂತೋಷವನ್ನು ಮುತ್ತು ಕೊಟ್ಟು ಹಂಚಿಕೊಳ್ಳುವುದು ಅಪರೂಪವೇನೂ ಅಲ್ಲ~ ಎಂದು ಅಡ್ಡಗೋಡೆ ಮೇಲೆ ದೀಪವಿಡುತ್ತಾರೆ ದೀಪಿಕಾ.

ಆಧುನಿಕತೆಯ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಅವರು ಸೋಷಿಯಲ್ ನೆಟ್‌ವರ್ಕಿಂಗ್ ವಿಷಯದ್ಲ್ಲಲಿ ಮಾತ್ರ ಆಧುನಿಕರಲ್ಲ. ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ನಟ, ನಟಿಯರೆಲ್ಲಾ ತಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಟೀಕೆಗಳನ್ನು ದಾಖಲಿಸುತ್ತಿರುವ ಈ ದಿನಗಳಲ್ಲಿ ದೀಪಿಕಾ ಮಾತ್ರ ಅದಕ್ಕೆ ಹೊರತಾಗಿದ್ದಾರೆ. `ಗೆಳತಿಯರ ಜೊತೆ ಈಗಲೂ ನಾನು ಪತ್ರ ವ್ಯವಹಾರ ಇಟ್ಟುಕೊಂಡಿದ್ದೇನೆ. ಫೋನ್ ಮಾಡಿ ಮಾತಾಡುವ ದಾರಿಯೂ ಇದ್ದೇ ಇದೆ. ನನಗೆ ಸೋಷಿಯಲ್ ನೆಟ್‌ವರ್ಕಿಂಗ್ ಅಷ್ಟಾಗಿ ಒಗ್ಗಿಲ್ಲ. ಅದರ ಮೂಲಕ ನಾವು ಹೇಳಬೇಕಾದದ್ದನ್ನು ಹೃದಯಪೂರ್ವಕವಾಗಿ ಹೇಳಲು ಸಾಧ್ಯವೆಂದು ನನಗೆ ಅನ್ನಿಸಿಯೇ ಇಲ್ಲ. ಈ ವಿಷಯದಲ್ಲಿ ನಾನು ಸಂಪ್ರದಾಯಸ್ಥೆ~ ಎಂದು ನಗುವ ದೀಪಿಕಾ, ಮದುವೆ ಯಾವಾಗ ಎಂದು ಕೇಳಿದರೆ ಮತ್ತೂ ಜೋರಾಗಿ ನಗುತ್ತಾರೆ. `ಮದುವೆಯಾ, ಹಾಗಂದರೇನು?~ ಎಂಬುದು ತಮಾಷೆಯೂ ಗಾಂಭೀರ್ಯವೂ ಬೆರೆತ ಅವರ ಸದ್ಯದ ಪ್ರಶ್ನೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.