ಆರು ವರ್ಷಗಳ ವಿರಾಮದ ಬಳಿಕ ಐಎಎಸ್ ಅಧಿಕಾರಿ ಕೆ. ಶಿವರಾಂ ಬಣ್ಣ ಹಚ್ಚಿದ್ದಾರೆ. ಅವರು ಸೇವೆಯಿಂದ ನಿವೃತ್ತಿಯಾಗಿ ಎರಡು ತಿಂಗಳಾಗಿದೆ. ಅಧಿಕಾರಿಯಾಗಿದ್ದಾಗ ತಮ್ಮ ಅನುಭವಕ್ಕೆ ಬಂದ ಸನ್ನಿವೇಶಗಳೇ ಈಗ ಬಣ್ಣಹಚ್ಚಿರುವ `ಈ ಹೃದಯ' ಚಿತ್ರದ ಸಾರವಾಗಿವೆ.
ಸುದೀರ್ಘವಾಗಿ ನಟನೆಯಿಂದ ದೂರವುಳಿದ ಬೇಸರವನ್ನು `ಈ ಹೃದಯ' ಇಂಗಿಸಲಿದೆ ಎನ್ನುವುದು ಅವರ ಮಾತು. ನಟನೆಯ ಜತಗೆ ಸಮಾಜಸೇವೆಯಲ್ಲಿ ತೊಡಗಿರುವ ಅವರಿಗೆ ರಾಜಕಾರಣದಲ್ಲೂ ಆಸಕ್ತಿ. ಚಿತ್ರರಂಗದ ಮತ್ತು ವೃತ್ತಿಯ ಕುರಿತು ಅವರು `ಮೆಟ್ರೊ'ದೊಂದಿಗೆ ಮಾತನಾಡಿದ್ದಾರೆ.
ನಟನೆಯ ಗೀಳು ಎಂದಿನಿಂದ?
ಕಲಾವಿದನಾಗಬೇಕೆಂಬ ಹಂಬಲ ಬಾಲ್ಯದ್ದು. ನಮ್ಮ ತಂದೆ ಕೆಂಪಯ್ಯ ಅವರು ರಂಗಭೂಮಿ ಕಲಾವಿದರು. ನನ್ನ ಕಲಾ ಬದುಕಿಗೆ ಅವರೇ ಪ್ರೇರಣೆ. ಅವರು ಅಭಿನಯಿಸುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ನನಗೂ ಸಣ್ಣಪಾತ್ರ ದೊರೆಯುತ್ತಿತ್ತು. ಕಾಲೇಜು ಹಂತದಲ್ಲಿ ನಾಟಕಗಳಲ್ಲಿ ಸಕ್ರಿಯನಾದಾಗ ಕಲೆಯ ಬಗೆಗಿನ ತುಡಿತ ವೇಗ ಪಡೆಯಿತು.
ಚಿತ್ರರಂಗದಲ್ಲಿ ನಿಮ್ಮ `ನಾಯಕ'ತ್ವಕ್ಕೆ ಸಂದ ಗೆಲುವು ಕಡಿಮೆ ಅಲ್ಲವೆ?
ಜನಪ್ರಿಯ ನಟನಾಗಬೇಕು ಎಂಬ ಆಸೆಯಿಂದ ನಾನು ಚಿತ್ರರಂಗಕ್ಕೆ ಬಂದವನಲ್ಲ. ಕಲಾವಿದನಾಗಬೇಕು ಎಂದುಕೊಂಡು ಚಿತ್ರರಂಗ ಪ್ರವೇಶಿಸಿದವನು. ನಾಯಕ ಪ್ರಧಾನ ಚಿತ್ರಗಳಿಗಿಂತ ಕಥಾ ಪ್ರಾಮುಖ್ಯ ಚಿತ್ರಗಳಲ್ಲಿ ನಟಿಸುವುದು ಇಷ್ಟ. ಮುಖ್ಯವಾಗಿ ಆ ಕಥೆ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಮೊದಲ ಚಿತ್ರ `ಬಾ ನಲ್ಲೆ ಮಧುಚಂದ್ರಕೆ'ಯೇ ನನ್ನ ಸಿನಿಮಾ ಲೋಕಕ್ಕೆ ಸಿಕ್ಕ ತಿರುವು. ಆ ಚಿತ್ರದ ಯಶಸ್ಸು ನನ್ನನ್ನು ಚಿತ್ರರಂಗದಲ್ಲಿ ಮುಂದುವರಿಯುವಂತೆ ಮಾಡಿತು. ಇಲ್ಲಿಯವರೆಗೂ ನಟಿಸಿರುವ 10 ಚಿತ್ರಗಳಲ್ಲಿ ಸೋಲು, ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಚಿತ್ರರಂಗದಲ್ಲಿ ಏರಿಳಿತ ಸಹಜ.
`ಈ ಹೃದಯ'ದ ನಂತರ ಯಾವ ಚಿತ್ರದಲ್ಲಿ ನಟಿಸುತ್ತಿದ್ದೀರಿ?
ನಿರ್ದೇಶಕ ಮೋಹನ್‌ರ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಕಥೆ ಕೇಳಿದೆ, ಇಷ್ಟವಾಗಿದೆ. ಸಾಮಾಜಿಕ ಪರಿಣಾಮ ಮತ್ತು ಭಾವನಾತ್ಮಕ ವಸ್ತುವುಳ್ಳ ವಿಷಯ ಕಥೆಯಲ್ಲಿದೆ.
ಅಧಿಕಾರಿಗಳು ಬಣ್ಣಹಚ್ಚುವಂತಿಲ್ಲ ಎನ್ನುವ ಸರ್ಕಾರದ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೀರಿ, ಆ ವಿಷಯ ಏನಾಯಿತು?
ಸರ್ಕಾರಿ ಅಧಿಕಾರಿಗಳು ಬಣ್ಣಹಚ್ಚುವಂತಿಲ್ಲ ಎನ್ನುವ ನಿರ್ಧಾರ ನನಗಾಗಿಯೇ ಹೊರಡಿಸಿದ ಅಧಿಸೂಚನೆ. ನನ್ನ ಜನಪ್ರಿಯತೆಯನ್ನು ತಡೆಯಲು ಮಾಡಿದ ಪ್ರಯತ್ನ. ಅಂದಿನ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಕೆಲವು ಐಎಎಸ್ ಅಧಿಕಾರಿಗಳು ಈ ಹುನ್ನಾರದ ಹಿಂದಿದ್ದರು. ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಕೆಲವು ಇಲಾಖೆಗಳಲ್ಲಿರುವ ನೌಕರರು ಕ್ರೀಡಾಪಟುಗಳಾಗಿದ್ದರೆ ಅವರನ್ನು ಆ ಕ್ಷೇತ್ರದಲ್ಲೇ ಪೂರ್ಣವಾಗಿ ತೊಡಗಿಸಲಾಗುತ್ತದೆ. ಆದರೆ ಚಿತ್ರರಂಗದಲ್ಲಿ ತೊಡಗಿದರೆ ತಾರತಮ್ಯವೇಕೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.