ADVERTISEMENT

ಮರ್ಡರ್ 3 ಆದಿತಿ ಮಿಂಚು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST
ಮರ್ಡರ್ 3 ಆದಿತಿ ಮಿಂಚು
ಮರ್ಡರ್ 3 ಆದಿತಿ ಮಿಂಚು   

ಬಾಲಿವುಡ್ ನಟಿ ಅದಿತಿ ರಾವ್ `ಮರ್ಡರ್ 3' ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಚುಂಬನ ದೃಶ್ಯಗಳಲ್ಲೂ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಆದಿತಿಗೆ ಅಂಥ ದೃಶ್ಯಗಳಲ್ಲಿ ನಟಿಸುವುದೇನೂ ದೊಡ್ಡ ಸಂಗತಿ ಎನಿಸಿಲ್ಲವಂತೆ.

ಜನರ ಟೀಕೆಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಈ ನಟಿಯ ಪ್ರಕಾರ ಚುಂಬನ ನೈಸರ್ಗಿಕ ಪ್ರಕ್ರಿಯೆ. ಜೋಡಿಯೊಂದು ಸಲುಗೆಯಿಂದ ಪರಸ್ಪರ ಚುಂಬಿಸಿಕೊಳ್ಳುವುದು ಮಧುರ ಕ್ಷಣಗಳಿಗೆ ಮುನ್ನುಡಿ ಬರೆಯುತ್ತದೆ ಎನ್ನುತ್ತಾರವರು. `ತೆರೆ ಮೇಲೆ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ದೊಡ್ಡ ಸಂಗತಿಯೇನಲ್ಲ. ಇಂತಹ ದೃಶ್ಯಗಳಲ್ಲಿ ಪ್ರಾಮಾಣಿಕವಾಗಿ ನಟಿಸಬೇಕು. ಚುಂಬಿಸುವುದು ನಮ್ಮ ನಡುವಿನ ಸಂಬಂಧವನ್ನು ಪ್ರಕಟಪಡಿಸುತ್ತದೆ. ಪ್ರೇಮಿಗಳು ಕ್ರಿಕೆಟ್ ಅಂಗಳಕ್ಕೆ ಹೋಗಿ ಆಟವಾಡುವುದಿಲ್ಲ. ಪರಸ್ಪರ ಮೈಮರೆತು ಮೈನವಿರೇಳುವಂತೆ ಚುಂಬಿಸಿಕೊಳ್ಳುತ್ತಾರೆ' ಎಂದಿದ್ದಾರೆ ಅದಿತಿ.

ಬೋಲ್ಡ್ ಸನ್ನಿವೇಶಗಳಲ್ಲಿ ನಟಿಸುವಾಗ ಅವರಿಗೆ ಯಾವುದೇ ಅಳುಕು ಕಾಡುವುದಿಲ್ಲವಂತೆ. ಇದಕ್ಕೆ ಅವರ ಈ ಮಾತೇ ಸಾಕ್ಷಿ: `ನಾನು ಏನು ಎಂಬುದರ ಸ್ಪಷ್ಟ ಅರಿವಿದೆ. ಪ್ರಣಯ ಸನ್ನಿವೇಶಗಳಲ್ಲಿ ನಟಿಸುವಾಗ ತುಂಬಾ ಆತ್ಮವಿಶ್ವಾಸದಿಂದ ಇರುತ್ತೇನೆ. ನಮ್ಮಳಗೆ ಅಭದ್ರತೆ ಕಾಡುತ್ತಿದ್ದರೆ ಪಾತ್ರಕ್ಕೆ ನ್ಯಾಯ ಒದಗಿಸುವುದು ಕಷ್ಟ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಜನ ಏನು ಮಾತನಾಡಿಕೊಳ್ಳುತ್ತಾರೋ ಎಂಬ ಭಯವಿದ್ದರೆ ನಾವು ಸ್ಥೈರ್ಯ ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಬಗೆಯ ಪಾತ್ರವನ್ನಾದರೂ ಸರಿ ತುಂಬು ಪ್ರೀತಿಯಿಂದ ಮಾಡಬೇಕೆಂಬುದು ನನ್ನ ಸಿದ್ಥಾಂತ'.

ಚಿತ್ರದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದರ ಬಗ್ಗೆಯೂ ಆದಿತಿ ಮಾತನಾಡಿದ್ದಾರೆ. `ನಟಿಯಾದವಳಿಗೆ ಬೋಲ್ಡ್‌ನೆಸ್ ಇರಬೇಕು. ಕೆಲವು ಸನ್ನಿವೇಶಗಳಲ್ಲಿ ನಟಿಸುವಾಗ ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ನಟಿಯರು ಇಂತಹ ಮನೋಭಾವ ಬೆಳೆಸಿಕೊಂಡಿದ್ದರೆ ಚಿತ್ರದ ಸನ್ನಿವೇಶಗಳು ಸಹ ಪರಿಣಾಮಕಾರಿಯಾಗಿ ಮೂಡಿಬರುತ್ತವೆ. ಕಡಿಮೆ ಬಟ್ಟೆ ಹಾಕುವುದೇ ಬೋಲ್ಡ್‌ನೆಸ್ ಅಲ್ಲ. ನಮ್ಮ ಆತ್ಮ ಮತ್ತು ಮನಸ್ಸುಗಳನ್ನು ಆವರಿಸಿಕೊಂಡಿರುವ ವರ್ತನೆ ಅದು' ಎಂದೆಲ್ಲಾ ಮಾತನಾಡಿದ್ದಾರೆ.  

ಮರ್ಡರ್ ಸರಣಿಯಲ್ಲಿದ್ದ ಕಾಮದ ವಿಜೃಂಭಣೆ ಈ ಚಿತ್ರದಲ್ಲಿಲ್ಲ ಎನ್ನುವ ಅದಿತಿ, `ಮರ್ಡರ್ 3' ಸಿನಿಮಾ ಅತ್ಯುತ್ತಮ ಕಥೆಯನ್ನು ಹೊಂದಿದೆ ಎಂದಿದ್ದಾರೆ. `ಮೊದಲು ಬಂದ `ಮರ್ಡರ್' ಚಿತ್ರದಲ್ಲಿ ಒಲ್ಲದ ಮದುವೆ ಆಗಿ ದುಃಖಿಸುವ ಹೆಣ್ಣೊಬ್ಬಳ ಕಥೆಯನ್ನು ಆಧರಿಸಿ ತಯಾರಿಸಲಾಗಿತ್ತು. ಮದುವೆಯಾಚೆಗಿನ ಸಂಬಂಧದಲ್ಲಿ ಸುಖಿಸುವ ಹುಡುಗಿಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದರಿಂದ ಈ ಚಿತ್ರದಲ್ಲಿ ಶೃಂಗಾರ ದೃಶ್ಯಗಳು ಢಾಳಾಗಿ ಕಾಣಿಸಿಕೊಂಡಿದ್ದವು. ಆದರೆ, `ಮರ್ಡರ್ 3 ಚಿತ್ರಕಥೆ ಕಾಮವನ್ನು ಮೀರಿದ್ದು. ಅತ್ಯುತ್ತಮ ಚಿತ್ರಕಥೆಯೇ ಈ ಚಿತ್ರದ ಜೀವಾಳ' ಎಂದಿದ್ದಾರೆ ಆದಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.