ADVERTISEMENT

ಮುಂಜಾನೇಲಿ ಮುಸ್ಸಂಜೇಲಿ...

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಸಂಕ್ರಾಂತಿ ಹಬ್ಬದಂದು ಮತ್ತೊಂದು ಹಬ್ಬದ ಸಂಭ್ರಮದಲ್ಲಿತ್ತು ಚಿತ್ರತಂಡ. ಮೊದಲು ಮಾತು ಮುಗಿಸಿ ನಂತರ ಹಬ್ಬದೂಟ ಮಾಡೋಣ ಎಂದು ಗಂಟೆಗಟ್ಟಲೆ ಕಾದರೂ ಅತಿಥಿಯ ಸುಳಿವಿಲ್ಲ. ಮುಂಜಾನೆಯ ಹಿತವಾದ ಬಿಸಿಲಿನಲ್ಲಿ ಮೈಮುರಿಯಬೇಕಿದ್ದ ಜನ ಮಧ್ಯಾಹ್ನದ ಬಿಸಿಲ ಝಳಕ್ಕೆ ಬೆವರೊರೆಸಿಕೊಳ್ಳುತ್ತಿದ್ದರು. ಕೊನೆಗೆ ಮುಖ್ಯ ಅತಿಥಿಯ ಅನುಪಸ್ಥಿತಿಯಲ್ಲೇ ಚಿತ್ರತಂಡದೊಂದಿಗೆ ಕುಳಿತು ಮಾತು ಆರಂಭಿಸಿದರು ನಿರ್ದೇಶಕ ಎಸ್.ನಾರಾಯಣ್.

ಅದು `ಮುಂಜಾನೆ~ ಚಿತ್ರದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭ. ಮುಖ್ಯ ಅತಿಥಿ ನಟ ಅಂಬರೀಷ್ ಬರುವುದು ತಡವಾಗುತ್ತದೆ ಎಂಬ ಸಂದೇಶ ಬಂದೊಡನೆ ಎಸ್. ನಾರಾಯಣ್ ಮೈಕ್ ಕೈಗೆತ್ತಿಕೊಂಡರು. `42 ದಿನಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲಾಗಿದೆ. ಇದರಲ್ಲಿ ಹೆಚ್ಚಿನ ಸಮಯ ಹಾಡುಗಳಿಗಾಗಿಯೇ ಮೀಸಲಿಡಲಾಗಿದೆ. ಚಿತ್ರದಲ್ಲಿರುವುದು ಒಟ್ಟು ಆರು ಹಾಡು~ ಹೀಗೆ ವಿವರಣೆ ಕೊಟ್ಟ ಎಸ್.ನಾರಾಯಣ್ ಒಂದು ಹಾಡನ್ನು ಹೆಚ್ಚುವರಿಯಾಗಿ ಸೇರಿಸಿದ ಕಥೆ ಹೇಳಿದರು.

ಐದು ಹಾಡು ಬರೆದು, ಅದರಲ್ಲಿ ನಾಯಕಿಗಾಗಿ ರಚಿಸಲಾಗಿದ್ದ ಹಾಡೊಂದನ್ನು ಕೇಳಿಸಿದಾಗ ನಾಯಕ ನಟ ಗಣೇಶ್ `ಸಾ...ರ್~ ಎಂದು ರಾಗವೆಳೆದು ಸುಮ್ಮನಾದರಂತೆ. ಈ ರಾಗದ ಒಳಾರ್ಥ ಅರಿತುಕೊಂಡ ನಾರಾಯಣ್ ಗಣೇಶ್‌ಗಾಗಿಯೇ ಮತ್ತೊಂದು ಹಾಡನ್ನು ಸೇರಿಸಿದರಂತೆ. `ಚೆಲುವಿನ ಚಿತ್ತಾರ~ದ ವೇಳೆಯಲ್ಲಿ ಅಷ್ಟಾಗಿ ಆತ್ಮೀಯರಾಗಿರದಿದ್ದ ಗಣೇಶ್ ಈಗ ಹೆಗಲ ಮೇಲೆ ಕುಳಿತುಕೊಳ್ಳುವ ಮಟ್ಟಿಗೆ ಹತ್ತಿರವಾಗಿದ್ದಾರೆ ಎಂದು ನಕ್ಕರು ನಾರಾಯಣ್.

`ಚೆಲುವಿನ ಚಿತ್ತಾರ~, `ಶೈಲು~ ಎರಡರ ಬಳಿಕ `ಮುಂಜಾನೆ~ ನಮ್ಮಿಬ್ಬರ ಸಮ್ಮಿಲನದ ಹ್ಯಾಟ್ರಿಕ್ ಗೆಲುವು ತಂದುಕೊಡುತ್ತದೆ ಎಂಬುದು ನಟ ಗಣೇಶ್ ಭರವಸೆ.

ಎಸ್.ನಾರಾಯಣ್ ರಚನೆಯ ಹಾಡುಗಳಲ್ಲಿ ಮಾಧುರ್ಯವಿರುತ್ತದೆ. ನನಗೆಂದೇ ಕೇವಲ ಎರಡು ಗಂಟೆಯಲ್ಲಿ ಬರೆದ ಹಾಡನ್ನು ಎರಡು ದಿನದಲ್ಲಿ ಚಿತ್ರೀಕರಣ ನಡೆಸಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಹೀಗೆ ಗಣೇಶ್ ಹೆಚ್ಚಿನ ಮಾತು ನಾರಾಯಣ್ ಹೊಗಳಿಕೆಗೆ ಮೀಸಲಾಗಿತ್ತು.

ಇಡೀ ಚಿತ್ರತಂಡ ಮಾತು ಮುಗಿಸಿದ ಮೇಲೂ ಒಂದು ಮುಖ್ಯ ಕೆಲಸ ಬಾಕಿ ಇತ್ತು. ಅದು ಧ್ವನಿಸುರುಳಿ ಬಿಡುಗಡೆ. ಆದರೆ ಅದನ್ನು ಬಿಡುಗಡೆ ಮಾಡಬೇಕಿದ್ದ ಅಂಬರೀಷ್ ಇನ್ನೂ ಆಗಮಿಸಿರಲಿಲ್ಲ. ಅವರು ಬರುವುದರೊಳಗೆ ಹಬ್ಬದೂಟ ಮುಗಿಸೋಣ ಎಂದು ಚಿತ್ರತಂಡ ಭೋಜನ ಕೂಟದ ಸ್ಥಳದತ್ತ ಹೆಜ್ಜೆ ಹಾಕಿತು.

ತಡವಾಗಿ ಬಂದ ಅಂಬರೀಷ್ ಚಿತ್ರಕ್ಕೆ `ಮುಂಜಾನೆ~ ಬದಲು ಸುಂದರ ಸಂಜೆ ಎಂಬ ಹೆಸರು ಇಡಬೇಕಿತ್ತು ಎಂದು ತಾವು ಸಂಜೆ ಹೊತ್ತಲ್ಲಿ ಬಂದಿದ್ದನ್ನು ಸಮರ್ಥಿಸಿಕೊಳ್ಳುವಂತೆ ನಕ್ಕರು. ಪರಭಾಷಾ ಚಿತ್ರಗಳ ಹಾವಳಿಯನ್ನು ನಿಯಂತ್ರಿಸುವ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರ ಸಂಘಗಳೊಂದಿಗೆ ಚರ್ಚಿಸುವ ಭರವಸೆಯನ್ನೂ ನೀಡಿದರು.

ಛಾಯಾಗ್ರಾಹಕ ಜಗದೀಶ್ ವಾಲಿ, ರಾಜೇಂದ್ರ ಕಾರಂತ್, ಆನಂದ್ ಆಡಿಯೊದ ಶ್ಯಾಮ್, ರಾಘವೇಂದ್ರ ಜೋಶಿ, ನಟಿ ಸುಮಲತಾ ಹಾಜರಿ ಸಮಾರಂಭದ ಕಳೆ ಹೆಚ್ಚಿಸಿತ್ತು. ಚಿತ್ರದ ಆಮದು ನಾಯಕಿ ಮಂಜರಿ ಚಡ್ನಿಸ್ ಗೈರುಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.