ADVERTISEMENT

‘ಮೋಜೊ’ ಎಂಬ ಮಾಯೆಯ ಕಥೆ

ವಿಜಯ್ ಜೋಷಿ
Published 27 ಅಕ್ಟೋಬರ್ 2017, 12:58 IST
Last Updated 27 ಅಕ್ಟೋಬರ್ 2017, 12:58 IST
ಅನೂಷಾ ಮತ್ತು ಮನು
ಅನೂಷಾ ಮತ್ತು ಮನು   

ಸಿನಿಮಾ: ಮೋಜೊ
ನಿರ್ದೇಶನ: ಶ್ರೀಶ ಬೆಳಕವಾಡಿ
ನಿರ್ಮಾಣ: ಗಜಾನನ ಭಟ್
ಸಂಗೀತ: ಎಸ್.ಡಿ. ಅರವಿಂದ್
ತಾರಾಗಣ: ಮನು, ಅನೂಷಾ

‘ಮೋಜೊ’. ಪದ ಕೇಳಿದ ತಕ್ಷಣ ಅರ್ಥ ಹೊಳೆಯುವುದಿಲ್ಲ. ಈ ಪದದ ಅರ್ಥವನ್ನು ಶಬ್ದಕೋಶಗಳಲ್ಲಿ ಹುಡುಕಬೇಕು, ಗೂಗಲ್‌ ಸಹಾಯ ಪಡೆಯಬೇಕು, ತಿಳಿದವರನ್ನು ಕೇಳಬೇಕು. ಆಗ ಗೊತ್ತಾಗುತ್ತದೆ ಇದು ಮಾಯೆಗೆ ಸಂಬಂಧಿಸಿದ್ದು ಎಂದು. ಶ್ರೀಶ ಬೆಳಕವಾಡಿ ಚೊಚ್ಚಲ ನಿರ್ದೇಶನದ ‘ಮೋಜೊ’, ಮಾಯೆ ಹಾಗೂ ವಾಸ್ತವಗಳಿಗೆ ಸಂಬಂಧಿಸಿದ ಸಿನಿಮಾ.

ಈ ಸಿನಿಮಾದ ನಾಯಕ ಮೋಹನ್ (ಮನು). ನಾಯಕಿ ಮಾಯಾ (ಅನೂಷಾ). ನಾಯಕ ಪತ್ರಕರ್ತ, ನಾಯಕಿ ಮನಃಶಾಸ್ತ್ರಜ್ಞೆ. ಮುಂದೆ ಆಗಲಿರುವ ಸಂಗತಿಗಳು ನಾಯಕನಿಗೆ ನಿದ್ರಾವಸ್ಥೆಯಲ್ಲಿ ಇದ್ದಾಗ, ಏನನ್ನೋ ಯೋಚಿಸುತ್ತ ಇದ್ದಾಗ ಕಾಣಿಸಲು ಆರಂಭಿಸುತ್ತವೆ. ಹೀಗಾಗಬಹುದು ಎಂದು ತನಗೆ ಅನಿಸಿದ್ದು ಕೆಲವೇ ಸಮಯಗಳಲ್ಲಿ ನಿಜವಾಗಿ ಘಟಿಸುವುದನ್ನು ಕಂಡು ನಾಯಕ ದಂಗಾಗುತ್ತಾನೆ.

ADVERTISEMENT

ತನ್ನಲ್ಲಿ ಉಂಟಾಗುತ್ತಿರುವುದು ಭ್ರಾಂತಿಯೋ, ತಾನು ಕಾಣುತ್ತಿರುವುದು ಸತ್ಯವೋ, ಮಾಯೆ ಯಾವುದು, ವಾಸ್ತವ ಯಾವುದು ಎಂಬುದು ಗೊತ್ತಾಗದೆ ಮಾನಸಿಕ ಹಿಂಸೆ ಅನುಭವಿಸುತ್ತಾನೆ. ತನಗೆ ಆಗುತ್ತಿರುವುದು ಏನು ಎಂಬುದನ್ನು ತಿಳಿಯಲು ಮನಃಶಾಸ್ತ್ರಜ್ಞರನ್ನು ಹುಡುಕಿಕೊಂಡು ಹೋಗುವ ನಾಯಕ, ಮಾಯಾಳನ್ನು ಭೇಟಿಯಾಗುತ್ತಾನೆ. ಸಿನಿಮಾದ ಕಥೆ ಆರಂಭವಾಗುವುದು ಇಲ್ಲಿಂದ.

ನಡೆಯಲಿರುವ ಕೊಲೆಯೊಂದನ್ನು ಮೋಹನ್, ಆರನೆಯ ಇಂದ್ರಿಯದ ಮೂಲಕ ಕಂಡುಕೊಂಡಿರುತ್ತಾನೆ. ಕೊಲೆಗಾರನನ್ನೂ ಅಸ್ಪಷ್ಟವಾಗಿ ಕಂಡಿರುತ್ತಾನೆ. ಆದರೆ ತಾನು ಕಂಡ ಕೊಲೆ ವಾಸ್ತವದಲ್ಲಿ ನಡೆದಿದ್ದೋ ಅಥವಾ ತನ್ನ ಮನಸ್ಸಿನ ಭ್ರಮೆಯೋ ಎಂಬುದು ಆತನಿಗೆ ಸ್ಪಷ್ಟವಾಗಿರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಮೋಹನ್, ಮಾಯಾಳ ನೆರವು ಬಯಸುತ್ತಾನೆ.

ಆದರೆ, ಅವನು ಬಯಸಿದ ನೆರವು ಮಾಯಾಳಿಂದ ಸಿಗುವುದಿಲ್ಲ. ಕಥೆಗೊಂದು ಟ್ವಿಸ್ಟ್ ಇರುವುದೇ ಇಲ್ಲಿ. ಹಾಗಾಗಿ ಮಾಯಾಳಿಂದ ಮೋಹನ್‌ಗೆ ನೆರವು ಏಕೆ ಸಿಗುವುದಿಲ್ಲ ಎಂಬುದನ್ನು ಇಲ್ಲಿ ಹೇಳಲಾಗದು! ಸಿನಿಮಾವನ್ನು ಸೂಕ್ಷ್ಮವಾಗಿ ವೀಕ್ಷಿಸದಿದ್ದರೆ, ಪಾಪ್‌ ಕಾರ್ನ್‌ ಅಥವಾ ಕಡ್ಲೆಕಾಯಿ ತಿನ್ನುತ್ತ ದೃಶ್ಯಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದಿದ್ದರೆ ನಾಯಕ ವಾಸ್ತವವಾಗಿ ಅನುಭವಿಸುತ್ತಿರುವುದು ಏನು, ಆತನ ಆರನೆಯ ಇಂದ್ರಿಯದ ಮೂಲಕ ಕಾಣುತ್ತಿರುವುದು ಏನು ಎಂಬುದರ ವ್ಯತ್ಯಾಸ ಅರಿಯಲು ವೀಕ್ಷಕ ವಿಫಲನಾಗಬಹುದು. ಆಗ ಸಿನಿಮಾದ ಮಜಾ ಕೂಡ ತಪ್ಪಿಹೋಗಬಹುದು!

ಮನಃಶಾಸ್ತ್ರ, ಉಪನಿಷತ್ತುಗಳು, ಅತೀಂದ್ರಿಯ ಶಕ್ತಿಗಳ ಬಗ್ಗೆ ನಿರ್ದೇಶಕರಿಗೆ ಬಹಳ ಆಸಕ್ತಿ ಇರುವಂತಿದೆ. ಹಾಗಾಗಿಯೇ ಅವರು ಸಿನಿಮಾದುದ್ದಕ್ಕೂ ಇವುಗಳನ್ನು ಸಂಭಾಷಣೆಗಳ ಮೂಲಕ, ಹಿನ್ನೆಲೆ ಸಂಗೀತದ ಮೂಲಕ ಹೇಳಿಸಿದ್ದಾರೆ.

ಮನಃಶಾಸ್ತ್ರವೆಂಬುದು ಆಸಕ್ತಿ ಕೆರಳಿಸುವ, ಅಷ್ಟೇ ಗಂಭೀರವಾದ ವಿಷಯ. ಮನಃಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರವೊಂದನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸಾಹಸದ ಕೆಲಸವೇ ಸರಿ. ಕೊಲೆ ರಹಸ್ಯವೊಂದನ್ನು ಅದರ ಜೊತೆ ಜೋಡಿಸಿದಾಗ ಆ ವಿಷಯ ಇನ್ನಷ್ಟು ಸಂಕೀ‌ರ್ಣವೂ ಆಗುತ್ತದೆ. ಅಂದಹಾಗೆ, ಸಂಕೀರ್ಣವಾದ ವಿಷಯವನ್ನು ಸಂಕೀರ್ಣವಾಗಿಯೇ ಹೇಳಿರುವ ಸಿನಿಮಾ ಇದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.