ADVERTISEMENT

ರಂಜನೀಯ ಮಂಜನ ಪ್ರಪಂಚ

ಚ.ಹ.ರಘುನಾಥ
Published 5 ಫೆಬ್ರುವರಿ 2011, 16:05 IST
Last Updated 5 ಫೆಬ್ರುವರಿ 2011, 16:05 IST


ಹಾಸ್ಯಪ್ರಧಾನ ಎಂದು ಲೇಬಲ್ ಹಚ್ಚಿಕೊಂಡ ಬಹುತೇಕ ಸಿನಿಮಾಗಳ ಹೂರಣ ಮಾತು ಮಾತು ಮಾತು. ಅಂಥ ಸಿನಿಮಾಗಳ ಎಲ್ಲ ಪಾತ್ರಗಳು ಪೈಪೋಟಿಗೆ ಬಿದ್ದಂತೆ ಮಾತನಾಡುತ್ತವೆ. ಮಾತಿನ ಭರಾಟೆಯಲ್ಲಿ ಅಶ್ಲೀಲತೆ, ದ್ವಂದ್ವಾರ್ಥ ಕೂಡ ನುಸುಳುವುದುಂಟು. ಇಂಥ ಹಾಸ್ಯಕ್ಕೆ ತರ್ಕದ ಹಂಗು ಇರುವುದಿಲ್ಲ. ಆದರೆ, ಕೋಮಲ್ ಕುಮಾರ್ ನಾಯಕರಾಗಿರುವ ‘ಕಳ್ ಮಂಜ’ ಚಿತ್ರ ಸಿದ್ಧಹಾಸ್ಯದ ರೂಢಿಗೆ ವಿರುದ್ಧವಾಗಿದೆ. ಮಾತಿನ ಜೊತೆಗೆ ಭಾವನಾತ್ಮಕ ಸನ್ನಿವೇಶಗಳಿವೆ, ಕಥೆಯ ಬೆಂಬಲವೂ ಮಂಜನಿಗಿದೆ. ಆ ಕಾರಣದಿಂದಲೇ ‘ಕಳ್ ಮಂಜ’ ಖುಷಿ ಕೊಡುತ್ತದೆ.

ಎಲ್ಲರಿಂದಲೂ ಕಳ್ ಮಂಜ ಎಂದು ಕರೆಸಿಕೊಳ್ಳುವ ಚಿತ್ರದ ನಾಯಕ ಮಂಜನಿಗೆ ಸಿನಿಮಾ ಕಥೆಗಾರನಾಗುವ ಆಸೆ. ಅವನನ್ನು ತನ್ನಷ್ಟಕ್ಕೆ ತಾನು ಪ್ರೇಮಿಸುವ ಓರ್ವ ಚೆಲುವೆಯಿದ್ದಾಳೆ. ಆ ಹುಡುಗಿಯ ಅಪ್ಪನಿಗೋ ಮಂಜನ ತಲೆ ಕಂಡರಾಗದು. ಮಗಳ ಮನಸ್ಸಿನಲ್ಲಿ ಮಂಜನ ಬಗ್ಗೆ ತಿರಸ್ಕಾರ ಹುಟ್ಟಿಸುವ ಸಲುವಾಗಿ, ಕಲ್ಪಿತ ಹುಡುಗಿಯೊಬ್ಬಳಿಗೆ ಪ್ರೇಮಪತ್ರ ಬರೆಸುತ್ತಾನೆ. ನಿರುದ್ದೇಶದಿಂದ ಎಸೆದ ಕಲ್ಲು ಆಕಸ್ಮಿಕವಾಗಿ ಯಾವುದೋ ಹಣ್ಣಿಗೆ ತಾಗುವಂತೆ, ಮಂಜ ಬರೆದ ಪತ್ರ ಹೆಣ್ಣೊಬ್ಬಳಿಗೆ ತಲುಪುತ್ತದೆ. ಕಲ್ಪನೆಯ ಊರು ಮತ್ತು ಹುಡುಗಿ ನಿಜಜೀವನದ ವಾಸ್ತವಗಳಾಗುತ್ತವೆ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ ಕುತೂಹಲಕರ ಅಂಶ.

‘ಕಳ್ ಮಂಜ’ ಸಿನಿಮಾದಲ್ಲಿ (‘ಚದಿಕ್ಯಾತ ಚಂದು’ ಮಲೆಯಾಳಿ ಸಿನಿಮಾದ ಸ್ಫೂರ್ತಿ ಪಡೆದ ಚಿತ್ರ) ಉಪಕಥೆಗಳೂ ಇವೆ. ಮಂಜನ ಸಿನಿಮಾ ಹುಚ್ಚಿನದು ಒಂದು ಕಥೆ. ಆಸ್ತಿಗಾಗಿ ನಡೆಯುವ ಪಿತೂರಿ-ಕೊಲೆಗಳದು ಇನ್ನೊಂದು ಕಥೆ.

ನಾಯಕಿಯರ ಏಕಮುಖ ಪ್ರೇಮದ್ದು ಮತ್ತೊಂದು ಕಥೆ. ಚಿತ್ರೀಕರಣದಲ್ಲಿ ತೊಡಗಿದ ಸಿನಿಮಾ ಕುಟುಂಬದ್ದು ಮತ್ತೊಂದು ಕಥೆ. ಹೀಗೆ, ವಿವಿಧ ಎಳೆಗಳನ್ನು ಮಂಜನ ಕಥೆಗೆ ಪೂರಕವಾಗಿ ನಿರ್ದೇಶಕ ರಮೇಶ್ ಪ್ರಭಾಕರನ್ ಲವಲವಿಕೆಯಿಂದ ಜೋಡಿಸಿದ್ದಾರೆ. ಹಾಸ್ಯಪ್ರಸಂಗಗಳಿಗೆ ತಕ್ಕಮಟ್ಟಿಗೆ ತರ್ಕದ ನೆಲೆಗಟ್ಟನ್ನೂ ಒದಗಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಮಾತಿನ ಜೊತೆಗೆ ಭಾವಾಭಿನಯದಲ್ಲಿ, ಕುಣಿತದಲ್ಲಿ, ಸಾಹಸದೃಶ್ಯಗಳಲ್ಲಿ ಮಿಂಚಿರುವ ಕೋಮಲ್ ಕಳ್ ಮಂಜನಾಗಿ ಇಷ್ಟವಾಗುತ್ತಾರೆ. ಹಾಡಿನ ಸನ್ನಿವೇಶಗಳಲ್ಲಿ ಭಿನ್ನವಾಗಿ ಕಾಣುವ ಕೋಮಲ್, ಉಳಿದಂತೆ ತಮ್ಮ ಟೈಮಿಂಗ್‌ನಿಂದಾಗಿ, ಮಾತಿನ ಪಂಚ್‌ನಿಂದಾಗಿ ನೋಡುಗರಿಗೆ ಕಚಗುಳಿಯಿಡುತ್ತಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ: ಐಶ್ವರ್ಯಾ ನಾಗ್ ಹಾಗೂ ಉದಯತಾರಾ. ಐಶ್ವರ್ಯಾ ಚೆಲುವಿನಿಂದ ಕಂಗೊಳಿಸಿದರೆ, ಉದಯತಾರಾ ಅಮಾಯಕ ನೋಟದಿಂದ ಗಮನಸೆಳೆಯುತ್ತಾರೆ.

ಚಿತ್ರದ ಕ್ಲೈಮ್ಯಾಕ್ಸ್ ‘ಕಳ್ ಮಂಜ’ದ ಹೈಲೈಟ್. ಸಿನಿಮಾ ಮಂದಿ ಸೃಷ್ಟಿಸುವ ಭೂತಗಳ ಆಟ ನೋಡುಗರನ್ನು ರಂಜಿಸುತ್ತದೆ. ಚಿತ್ರರಂಗದಲ್ಲಿ, ಕನಸುಗಳ ವ್ಯಾಪಾರದಲ್ಲಿ ಮುಳುಗಿ ವಾಸ್ತವದ ಜಗತ್ತಿಗೆ ಬೆನ್ನುಹಾಕಿರುವವರೇ ಹೆಚ್ಚು. ಆದರೆ, ‘ಕಳ್ ಮಂಜ’ದಲ್ಲಿನ ಚಿತ್ರತಂಡ ಪ್ರೇಮಿಗಳ ಬದುಕನ್ನು ಸರಿಪಡಿಸುವ ಸಲುವಾಗಿ ತನ್ನನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತದೆ. ಈ ತಂಡದ ನಾಯಕನಾಗಿ ನಟಿಸಿರುವ ಗುರುಪ್ರಸಾದ್ (ಮಠ, ಎದ್ದೇಳು ಮಂಜುನಾಥಾ ಚಿತ್ರಗಳ ನಿರ್ದೇಶಕರು) ‘ಕಳ್ ಮಂಜ’ದ ಮತ್ತೊಂದು ಮುಖ್ಯಪಾತ್ರ. ಸಿನಿಮಾದಲ್ಲೂ ನಿರ್ದೇಶಕರಾಗಿರುವ ಅವರು, ಆ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ.

‘ಕಳ್ ಮಂಜ’ ರಂಜನೀಯ ಚಿತ್ರವಾಗಿ ರೂಪುಗೊಂಡಿರುವ ಯಶಸ್ಸಿನ ಪಾಲಿನಲ್ಲಿ- ತೆರೆಯ ಹಿಂದಿರುವ ನಿರ್ದೇಶಕರೊಂದಿಗೆ, ಸಂಭಾಷಣೆಕಾರ ರಾಜೇಂದ್ರ ಕಾರಂತ್, ಛಾಯಾಗ್ರಾಹಕ ಕವಿ ಅರಸು ಹಾಗೂ ಸಂಗೀತ ನಿರ್ದೇಶಕ ಎಮಿಲ್ ಅವರಿಗೂ ಸಲ್ಲುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.