ADVERTISEMENT

ರಜ್ಜೋ ಪಾತ್ರದಲ್ಲಿ ಕಂಗನಾ ರಣೌತ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಕಂಗನಾ ರಣೌತ್ ವಿಶ್ವಾಸ್ ಪಾಟೀಲ ನಿರ್ದೇಶನದ ಮೊದಲ ಚಿತ್ರ `ರಜ್ಜೋ'ಗೆ ಆಯ್ಕೆಯಾಗಿದ್ದಾರೆ. ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕಂಗನಾ ಇದೇ ಹೆಸರಿನ ಪಾತ್ರಕ್ಕಾಗಿ `ಉಮರಾವ್‌ಜಾನ್' ಹಾಗೂ `ಪಾಕೀಜಾ'ದಂಥ ಚಿತ್ರಗಳನ್ನು ಚಿತ್ರ ಮೇಲಿಂದ ಮೇಲೆ ನೋಡುತ್ತಿದ್ದಾರಂತೆ.

ವಿಶ್ವಾಸ್ ಪಾಟೀಲ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಯಾಗಿದ್ದು, ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಇದಾಗಿದೆ. ದಕ್ಷಿಣ ಮುಂಬೈನಲ್ಲಿ ಈಗಲೂ ಚಾಲ್ತಿಯಲ್ಲಿರುವ ಹಳೆಯ ಶೈಲಿಯ ಮುಜರಾ ಮನೆಗಳಿವೆ. ಈ ಮುಜರಾ ಮನೆಗಳ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಂತೆ.

ಮುಜರಾದ ಆಂಗಿಕ ಚಲನೆಗಳನ್ನು ಕಲಿಯಲು ಕಂಗನಾ ಇದೀಗ ಉತ್ಸುಕರಾಗಿದ್ದಾರೆ. ಸಂಪೂರ್ಣ ಸಂಗೀತಮಯ ಚಿತ್ರ ಇದಾಗಲಿದ್ದು, ಕ್ಲಾಸ್ ಹಾಗೂ ಮಾಸ್ ಎರಡನ್ನೂ ಸೆಳೆಯುವ ಗುಣ ಇದಕ್ಕಿದೆ ಎನ್ನುವುದು ವಿಶ್ವಾಸ್ ಪಾಟೀಲ್ ಅವರ ಭರವಸೆಯಾಗಿದೆ. `ಕಂಗನಾ ಮುಖದಲ್ಲಿ ಭಾರತೀಯ ಸ್ತ್ರೀಯ ನೋಟವಿದೆ. ಈ ಪಾತ್ರಕ್ಕೆ ಬೇಕಿರುವ ತುಂಟತನ, ಗಾಂಭೀರ್ಯ, ಲಜ್ಜೆ ಎಲ್ಲವನ್ನೂ ಕಂಗನಾ ಸಮರ್ಥವಾಗಿ ಮುಖದ ಮೇಲೆ ಬಿಂಬಿಸಬಲ್ಲರು. ಅವರೇ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಎನಿಸಿತು' ಎನ್ನುವುದು ವಿಶ್ವಾಸ್ ಅವರ ಮಾತು.

`ರಜ್ಜೊ' ಚಿತ್ರ ಕತೆ ಕೇಳಿದಾಗಲೇ ಈ ಚಿತ್ರದ ಭಾಗವಾಗಬೇಕು ಎಂದು ಕಂಗನಾ ತೀರ್ಮಾನಿಸಿದ್ದರಂತೆ. `ಇದೊಂದು ಸಂಪೂರ್ಣ ವಿಭಿನ್ನವಾದ ಸವಾಲಿನ ಪಾತ್ರವಾಗಿದೆ. ಕಂಗಳಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸುವ ವಿಶೇಷ ಚಿತ್ರ ಇದು. ಖುಷಿಯಿಂದಲೇ ಒಪ್ಪಿಕೊಂಡಿದ್ದೇನೆ. 2013ರಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ' ಎಂದೆಲ್ಲ ಹೇಳಿದ್ದಾರೆ.

ವಿಕ್ರಮ್ ಭಟ್ ಈ ಚಿತ್ರದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.