ADVERTISEMENT

ರಾಜನ್ ಸಾರಥ್ಯದಲ್ಲಿ ಹಿನ್ನೆಲೆ ಗಾಯನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST
ರಾಜನ್ ಸಾರಥ್ಯದಲ್ಲಿ ಹಿನ್ನೆಲೆ ಗಾಯನ
ರಾಜನ್ ಸಾರಥ್ಯದಲ್ಲಿ ಹಿನ್ನೆಲೆ ಗಾಯನ   

ವೈಜ್ಞಾನಿಕ ರೀತಿಯಲ್ಲಿ ಹಿನ್ನೆಲೆ ಗಾಯನವನ್ನು ಹೇಳಿಕೊಡಲು ಪಣತೊಟ್ಟಿದ್ದಾರೆ ಹಿರಿಯ ಸಂಗೀತ ನಿರ್ದೇಶಕ ರಾಜನ್. ಅವರಿಗೆ ಸಾಥ್ ನೀಡುತ್ತಿರುವ ಸಂಸ್ಥೆ ‘ಶ್ರೀವೀಣಾವಾಣಿ ಸಂಗೀತ ಶಾಲೆ’.

ತಮ್ಮ ಪರಿಕಲ್ಪನೆಗೆ ಈ ಶಾಲೆ ವೇದಿಕೆ ಒದಗಿಸಿದೆ ಎಂದು ಹೇಳಿ ಇಳಿವಯಸ್ಸಿನಲ್ಲೂ ಕಲಿಸುವ ಉತ್ಸಾಹವನ್ನು ವ್ಯಕ್ತಪಡಿಸುತ್ತಾರೆ ರಾಜನ್. ಇಂದಿನ ಕಾಲಮಾನಕ್ಕೆ ತಕ್ಕಂತೆ ಸಾಫ್ಟ್‌ವೇರ್‌ಗಳನ್ನು ಬಳಸಿ ಧ್ವನಿಯ ಲಯವನ್ನು ಅರಿಯುವ ಅವಕಾಶವನ್ನೂ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವಾಸೆ ಇದೆ ಮತ್ತು ತಮಗೆ ತಿಳಿದಿರುವ ಸಂಗೀತದ ಸಂಗತಿಗಳನ್ನು ಮುಂದಿನ ಪೀಳಿಗೆಗೆ ರವಾನಿಸುವಾಸೆ ಇದೆ ಎನ್ನುತ್ತಾರೆ ರಾಜನ್.

ಒಳ್ಳೆಯ ದನಿ ಇದ್ದವರೆಲ್ಲಾ ಹಾಡಲು ಸಾಧ್ಯವಿಲ್ಲ. ಅವರು ಕಲಿತಿರುವ ಪದ್ಧತಿಯಿಂದ ಅವರ ಶಾರೀರ ಎಡವುತ್ತಿರುತ್ತದೆ. ಅಂಥವರಿಗೆ ದೃಢವಾದ ಶಾರೀರ ತರಬೇತಿ ಮೂಲಕ ಮಾರ್ಗದರ್ಶನ ನೀಡುವುದು, ವಿನೂತನ ಸ್ವರವರಸೆಗಳನ್ನು ಬಳಸುವುದಕ್ಕೆ ಪ್ರೇರೇಪಿಸುವುದು, ಧ್ವನಿ ಸಂಸ್ಕಾರದ ತಿಳಿವಳಿಕೆ, ಸಾಹಿತ್ಯಕ್ಕೆ ಮಹತ್ವ ನೀಡುತ್ತಾ ಹಾಡುವುದು, ಉಸಿರಾಟದ ಏರಿಳಿತದೊಂದಿಗೆ ಭಾವ ಪ್ರದರ್ಶಿಸುವುದು, ಎಲ್ಲಾ ಸ್ಥಾಯಿಯಲ್ಲೂ ಹಾಡುವುದು, ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯ ತಿಳಿವಳಿಕೆ, ಶ್ರುತಿ ಮತ್ತು ರಿದಂ ತಿಳಿವಳಿಕೆ- ಈ ರೀತಿಯಾಗಿ ಹಿನ್ನೆಲೆ ಗಾಯನವನ್ನು ಕಲಿಸುವುದಾಗಿ ಹೇಳುವ ರಾಜನ್, ಅದಕ್ಕೆ ಸಂಬಂಧಪಟ್ಟ ‘ಹಾಡೊ ಸುಸ್ವರಗಳ ಸಂಗೀತ’ ಹೆಸರಿನ ಪುಸ್ತಕ ಬರೆದಿದ್ದಾರೆ.

ಅಂಧರು ಕೂಡ ಅದನ್ನು ಮುಟ್ಟಿ ಕಲಿಯುವಂತೆ ಪುಸ್ತಕ ಮುದ್ರಿಸಲಾಗಿದೆ ಎನ್ನುವ ರಾಜನ್, ಇದನ್ನೊಂದು ಸೇವೆ ಎಂದು ತಿಳಿದು ಮಾಡುತ್ತಿರುವುದಾಗಿ ಹೇಳುತ್ತಾರೆ.

ಜನಪ್ರಿಯ ಗಾಯಕಿ ಸಂಗೀತಾ ಕಟ್ಟಿ, ರಾಜನ್-ನಾಗೇಂದ್ರ ರಾಗಸಂಯೋಜಿಸಿದ್ದ ‘ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ.....’ ಹಾಡಿನ ಪಲ್ಲವಿ ಹಾಡಿ ರಾಜನ್ ಅವರಿಗೆ ವಂದಿಸಿ ಮಾತಿಗಾರಂಭಿಸಿದರು.

ಅವರ ಪ್ರಕಾರ ರಾಜನ್ ಸಂಗೀತದ ಭೀಷ್ಮ ಪಿತಾಮಹ. ‘ಅವರಿಂದ ಕಲಿಯುವುದು ತಮಗೂ ಇದೆ. ಸಿಗುತ್ತಿರುವ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ವೈಜ್ಞಾನಿಕ ಹಿನ್ನೆಲೆ ಗಾಯನ ಎಂದರೆ ಏನೆಂದು ತಮಗೂ ಕುತೂಹಲ ಇದೆ. ಇಂದು ಮಕ್ಕಳು ಸೀಡಿ ಕೇಳಿ ಹಾಡಲು ಕಲಿಯುತ್ತಿದ್ದಾರೆ. ಇಂಥ ಗುರು ಸಿಕ್ಕ ಮೇಲೆ ಮತ್ತೇನು ಬೇಕು?’ ಎಂದ ಅವರ ಮಾತಿನಲ್ಲಿ ಮೆಚ್ಚುಗೆ ತುಂಬಿತ್ತು.

ಶಾಲೆಯ ಅಧ್ಯಕ್ಷ ಬಿ.ಗಿರೀಶ್ ಕುಮಾರ್ ತಮ್ಮ ಸಂಸ್ಥೆ ಸೂಕ್ತ ರೀತಿಯಲ್ಲಿ ಹಿನ್ನೆಲೆ ಗಾಯನ ಕಲಿಸುತ್ತದೆ ಎಂದು ಹೇಳಿ ಇದು ‘ಸೈಂಟಿಫಿಕ್ ಪ್ಲೇಬ್ಯಾಕ್ ಸಿಂಗಿಂಗ್ ಕೋರ್ಸ್’ ಹೆಸರಿನ ಎಂಟು ತಿಂಗಳ ತರಬೇತಿ ಎಂದರು. ಕೋರ್ಸ್‌ನಲ್ಲಿ ಸ್ವರ ಬರೆಯುವ ಪರಿಕಲ್ಪನೆ ಕಲಿಸುವುದೇ ಪ್ರಮುಖ ಉದ್ದೇಶವಂತೆ.

ಹೆಚ್ಚಿನ ಮಾಹಿತಿಗೆ ವಿಳಾಸ: ಶ್ರೀ ವೀಣಾವಾಣಿ ಸಂಗೀತ ಶಾಲೆ, ನಂ.1508/ಎ, 25ನೇ ಮುಖ್ಯರಸ್ತೆ, 27ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ದೋಬಿಘಾಟ್ ಹತ್ತಿರ, ಬೆಂಗಳೂರು-70 ದೂ.98866 59845

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.