ADVERTISEMENT

ರಾಟೆಯಲ್ಲಿ ಅರ್ಜುನ್!

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST
ರಾಟೆಯಲ್ಲಿ ಅರ್ಜುನ್!
ರಾಟೆಯಲ್ಲಿ ಅರ್ಜುನ್!   

`ಮೊದಲ ಸಿನಿಮಾ ಅಂಬಾರಿ 150 ದಿನ ಪ್ರದರ್ಶನ ಕಂಡಿತು. ಆದರೂ `ಅದ್ದೂರಿ~ ಮಾಡಲು ಮೂರು ವರ್ಷ ಬೇಕಾಯ್ತು. ಈಗ `ಅದ್ದೂರಿ~ ಸೂಪರ್ ಹಿಟ್ ಆಗಿದೆ. ಮುಂದಿನ ಸಿನಿಮಾದ ಹೆಸರು `ರಾಟೆ~. ಯನ್ನು ಆಗಸ್ಟ್‌ನಲ್ಲಿ ಘೋಷಣೆ ಮಾಡ್ತೀನಿ~ ಎಂದು ನಿರ್ದೇಶಕ ಎ.ಪಿ.ಅರ್ಜುನ್ ಎದೆತುಂಬ ವಿಶ್ವಾಸ ಇಟ್ಟುಕೊಂಡು ಮಾತನಾಡಿದರು.

`ಅಂಬಾರಿ~ ಮತ್ತು `ಅದ್ದೂರಿ~ ಚಿತ್ರಗಳ ಯಶಸ್ಸು ಅರ್ಜುನ್‌ರ ನೆತ್ತಿಗೇರಿಲ್ಲ. ಹಾಗೆಂದು ಅವರ ಖುಷಿಗೇನೂ ಕಡಿಮೆಯಿಲ್ಲ. ರಾಜ್ಯದ ಮೂಲೆ ಮೂಲೆಗಳಿಗೆ `ಅದ್ದೂರಿ ಯಾತ್ರೆ~ ಕೈಗೊಂಡು ಕೊನೆಯದಾಗಿ ಮೈಸೂರಿಗೆ ಬಂದಿದ್ದರು.
 
ಮೈಸೂರಿನ ಗಾಯತ್ರಿ ಟಾಕೀಸ್‌ನಲ್ಲಿ `ಅದ್ದೂರಿ~ ಬಿಡುಗಡೆಗೊಂಡ ಮೊದಲ ವಾರದ ಎಲ್ಲ 28 ಪ್ರದರ್ಶನಗಳಿಗೆ ಗೇಟ್‌ಕೀಪರ್ ಹೌಸ್‌ಫುಲ್ ಬೋರ್ಡ್ ಹಾಕಿದ್ದಾನೆ. ಎರಡನೇ ವಾರದ 18 ಪ್ರದರ್ಶನಗಳಿಗೂ ಇದು ಮರುಕಳಿಸಿದೆ.

ಗಾಯತ್ರಿ ಟಾಕೀಸ್‌ನ ಇತಿಹಾಸದಲ್ಲಿ ಹೊಸ ನಾಯಕನ ಚಿತ್ರಕ್ಕೆ ಇಂಥ ಪ್ರತಿಕ್ರಿಯೆ ಬಂದಿರುವುದು ಇದೇ ಮೊದಲು ಎನ್ನುವುದು ಮಾಲೀಕ ರಾಜಾರಾಂ ಮಾತು. ಈ ಮಾತು ಕೇಳಿದ ಅರ್ಜುನ್, ಧ್ರುವ ಸರ್ಜಾ ಅವರ ಕಣ್ಣುಗಳು ಅರಳಿದವು. `ಅದ್ದೂರಿ~ ಯಶೋಗಾಥೆಯನ್ನು ಅರ್ಜುನ್, ಧ್ರುವ ಸರ್ಜಾ ಪೈಪೋಟಿಗೆ ಇಳಿದವರಂತೆ ವರ್ಣಿಸಿದರು.

ಗೆದ್ದೆತ್ತಿನ ಬಾಲ ಹಿಡಿಯುವುದು ಗಾಂಧಿನಗರಿಗರ ಮಾಮೂಲಿ ಬುದ್ಧಿ. `ಅದ್ದೂರಿ~  ಗೆದ್ದ ಮೇಲೆ ಅರ್ಜುನ್ ಮತ್ತು ಧ್ರುವ ಸರ್ಜಾಗೆ ಆಫರ್‌ಗಳು ಬಂದಿವೆ. ಆದರೆ ಇಬ್ಬರೂ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

`ಆಗ ಅಂಬಾರಿ, ಈಗ ಅದ್ದೂರಿ, ಮುಂದೆ `ಅಂಬರ~ ಹೌದಾ?~ ಎಂದು ಕೇಳಿದರೆ `ನಾನು ಒಂದೇ ಅಕ್ಷರಕ್ಕೆ ಗಂಟುಬಿದ್ದು ಹೆಸರಿಡುವುದಿಲ್ಲ. ಮೈಸೂರು ದಸರಾದ ಅಂಬಾರಿ ಅಂದ್ರೆ ನಂಗಿಷ್ಟ. ಆದರೆ, ಇದುವರೆಗೂ ಅಂಬಾರಿ ನೋಡಿಲ್ಲ.
 
ಆದರೂ ಅದರ ಮೇಲಿನ ಮೋಹ ಕೊಂಚವೂ ಕಡಿಮೆಯಾಗಿಲ್ಲ. ಆದ್ದರಿಂದಲೇ ನನ್ನ ಮೊದಲ ಚಿತ್ರಕ್ಕೆ ಅಂಬಾರಿ ಹೆಸರಿಟ್ಟೆ. ಅದು ಯಶಸ್ವಿಯಾದಾಗ ಕೊಟ್ಟ ಜಾಹೀರಾತಿನಲ್ಲಿ ಅಂಬಾರಿಗೆ 150ನೇ ದಿನದ ಅದ್ದೂರಿ ಸಂಭ್ರಮ ಎಂದು ಬರೆದೆ. ಆಗಲೇ ಅದ್ದೂರಿ ಶೀರ್ಷಿಕೆ ಮನಸ್ಸಿನಲ್ಲಿ ಉಳಿದುಬಿಟ್ಟಿತು. ಈಗ ಮುಂದಿನ ಚಿತ್ರಕ್ಕೆ ರಾಟೆ ಎಂದು ಹೆಸರಿಟ್ಟ್ದ್ದಿದೇನೆ~ ಎಂದು ಅರ್ಜುನ್ ಒಂದೇ ಸಮನೆ ಎಲ್ಲವನ್ನೂ ಹೇಳಿದರು.

`ರಾಟೆ~ಯ ಕಥೆ, ಚಿತ್ರಕತೆ ಸಿದ್ಧವಾಗಿದೆ. ಸಂಭಾಷಣೆ ಬರೆಯುವ ಕೆಲಸ ನಡೆಯುತ್ತಿದೆ. ಈ ಚಿತ್ರವನ್ನು ಹೊಸ ತಂಡ ನಿರ್ಮಿಸಲಿದೆ. ನಾಯಕ ಯಾರು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲವಂತೆ.

ಸಿನಿಮಾ ಯಶಸ್ಸಿನಲ್ಲಿ ಎಲ್ಲರ ಪಾಲೂ ಇದೆ ಎನ್ನುವಷ್ಟರ ಮಟ್ಟಿಗೆ ಅರ್ಜುನ್ ಕಾಲುಗಳು ನೆಲದ ಮೇಲಿವೆ. `ಅಮಾಟೆ~ ಮತ್ತು `ಥೂ ಅಂತ ಉಗಿದರು~ ಹಾಡುಗಳು ಜನರನ್ನು ಚಿತ್ರಮಂದಿರಕ್ಕೆ ಕರೆತಂದವು. ಆಮೇಲೆ ಕಥೆ ಅವರನ್ನು ಹಿಡಿದಿಟ್ಟುಕೊಂಡಿತು. ಕಥೆ ಇಲ್ಲದೆ ಸಿನಿಮಾನೇ ಇಲ್ಲ~ ಎನ್ನುವುದು ಅವರ ನಂಬಿಕೆ.

`ನನಗೆ ಸಿನಿಮಾ ಮಾಡುವಾಗ ಯಾವ ಭಯವೂ ಇರುವುದಿಲ್ಲ, ಬಿಡುಗಡೆಯ ಹಿಂದಿನ ದಿನ ಮಾತ್ರ ನಾನು ನಾನಾಗಿರುವುದಿಲ್ಲ. ಏನು ಮಾತನಾಡುತ್ತೀನಿ ಎನ್ನುವುದೂ ಗೊತ್ತಿರುವುದಿಲ್ಲ~ ಎಂದು ಅರ್ಜುನ್ ನಕ್ಕರು.

ನಾಯಕ ಧ್ರುವ ಸರ್ಜಾ ಹೇಳಿದ್ದು ಇಷ್ಟು- `ಇದು ಚೊಚ್ಚಿಲ ಚಿತ್ರವಾದ್ದರಿಂದ ಪ್ರೇಕ್ಷಕರು ನನ್ನ ಅಭಿನಯ ಪರವಾಗಿಲ್ಲ ಎಂದರೂ ಸಾಕಿತ್ತು, ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿ ಸಂಭ್ರಮಿಸಬೇಕು ಎಂದುಕೊಂಡಿದ್ದೆ. ಈಗ ಚಿತ್ರ ಸೂಪರ್ ಹಿಟ್ ಆಗಿದೆ. ಆದರೂ ನಾನು ನಾನಾಗಿಯೇ ಇದ್ದೇನೆ~.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.