ADVERTISEMENT

ರೂಪಾಯಿಗೆ ಏನೆಲ್ಲಾ!

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST
ರೂಪಾಯಿಗೆ ಏನೆಲ್ಲಾ!
ರೂಪಾಯಿಗೆ ಏನೆಲ್ಲಾ!   

ನಟ ಪುನೀತ್ ರಾಜ್‌ಕುಮಾರ್ ನಾಣ್ಯ ಚಿಮ್ಮಿದರು. ಆ ಮೂಲಕ `ಒಂದು ರೂಪಾಯಲ್ಲಿ ಎರಡು ಪ್ರೀತಿ~ ಚಿತ್ರಕ್ಕೆ ಚಾಲನೆ ನೀಡಿದರು. ಆದರೆ ಹೆಡ್ಡು ಬಿತ್ತೋ ಟೈಲು ಬಿತ್ತೋ ತಿಳಿಯಲಿಲ್ಲ. ಚಿತ್ರದ ಆಶಯವೂ ಅದಲ್ಲ.

`ಜೀವನದಲ್ಲಿ ನಿಮಗೆ ಆಯ್ಕೆ ಬೇಕಾದಾಗ ನಾಣ್ಯ ಚಿಮ್ಮುತ್ತೀರಿ, ಏಕೆಂದರೆ ಅದು ನಿಮ್ಮ ಪ್ರಶ್ನೆಗೆ ಉತ್ತರ ಹೇಳುತ್ತದೆ. ಆದರೆ ನಾಣ್ಯ ಗಾಳಿಯಲ್ಲಿರುವಾಗ ನಿಮ್ಮ ಹೃದಯ ಯಾವುದನ್ನು ಬಯಸುತ್ತದೆ ಎಂಬುದು ನಿಮಗೆ ಗೊತ್ತು~ ಎನ್ನುವುದು ಚಿತ್ರತಂಡ ಸಿನಿಮಾದ ಬಗ್ಗೆ ನೀಡಿರುವ ಕೊಂಚ ದೀರ್ಘವಾದ ಟಿಪ್ಪಣಿ. 

ಇಂತಹ ವಿಚಿತ್ರ ಕಥೆ ಹೊಳೆದಿರುವುದು ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ. ಫೇಸ್‌ಬುಕ್‌ನ ಗೆಳೆಯರೊಬ್ಬರು ಕಳುಹಿಸಿದ ಸಂದೇಶವೊಂದು ಕೇವಲ 45 ನಿಮಿಷಗಳಲ್ಲಿ ಚಿತ್ರದ ಕತೆ ಹುಟ್ಟಲು ಕಾರಣವಾಯಿತಂತೆ. ಕತೆ ತಂದವರೇ ದಯಾಳ್ ಹೊಸ ನಟ ಸಂದೀಪ್ ಅವರನ್ನು ಜಾಗೃತಗೊಳಿಸಿದರು.
 
ತಕ್ಷಣ ಸಂದೀಪ್ ಹೋದದ್ದು ತಮ್ಮ ತಂದೆ ಅಶ್ವತ್ಥರೆಡ್ಡಿ ಬಳಿಗೆ. ಚಿತ್ರದ ಕತೆ ಕೇಳಿದ ಅವರು ನಿರ್ಮಾಪಕರಾಗಲು ಸಜ್ಜಾದರು. ಚಿತ್ರವನ್ನು ದಯಾಳ್ ಅವರೇ ನಿರ್ದೇಶಿಸಬೇಕು. ಜತೆಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಹೊಣೆ ಹೊರಬೇಕೆಂದರು.

`ಖಂಡಿತಾ ಇದೊಂದು ಪ್ರಯೋಗಾತ್ಮಕ ಚಿತ್ರವಲ್ಲ. ಆದರೆ ಭಿನ್ನ ನಿರೂಪಣೆ ಇರುವ ಮನರಂಜನಾ ಭರಿತ ಕಮರ್ಷಿಯಲ್ ಚಿತ್ರ. ವಿಜಯರಾಘವೇಂದ್ರ, ಸಂದೀಪ್ ಜತೆ ರಮ್ಯಾ ಬಾರ್ನಾ ನಟಿಸುತ್ತಿದ್ದಾರೆ. ಆದರೆ ಇದು ತ್ರಿಕೋನ ಪ್ರೇಮಕತೆಯೂ ಅಲ್ಲ~ ಎಂದರು ದಯಾಳ್.

ನಾಯಕಿ ಯಾರನ್ನು ಪ್ರೀತಿಸುತ್ತಾಳೆ ಎಂಬ ಪತ್ರಕರ್ತರ ಪ್ರಶ್ನೆಗೆ ಮಾತ್ರ ದಯಾಳ್ ಉತ್ತರಿಸಲಿಲ್ಲ. `ಇದೊಂದು ಟ್ವಿಸ್ಟೆಡ್ ಪ್ರೇಮ ಕತೆ. ನದಿ ದಡವೊಂದರಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯಲಿದೆ~ ಎಂದಷ್ಟೇ ಹೇಳಿದರು. ಚಿತ್ರದ ಪೋಸ್ಟರ್‌ನಲ್ಲಿ ಬಳಸಲಾದ ಒಂದು ರೂಪಾಯಿಯ ನಾಣ್ಯವನ್ನು 1978ರಲ್ಲಿ ಟಂಕಿಸಲಾಗಿದೆ.

ಆದರೆ ಚಿತ್ರಕ್ಕೂ ಇಸವಿಗೂ ಸಂಬಂಧ ಇಲ್ಲವಂತೆ. ಅಕಿರಾ ಕುರೊಸವಾನ ಜಪಾನಿ ಚಿತ್ರ `ರಾಶೊಮನ್~ ಹಾಗೂ ಶೋಲೆ ಚಿತ್ರವೊಂದರ ನೆರಳು ಚಿತ್ರದ ಮೇಲಿದೆಯಂತೆ. ವಿಜಯರಾಘವೇಂದ್ರ ಅವರದ್ದು ಚಿತ್ರದಲ್ಲಿ ದ್ವಿತೀಯ ದರ್ಜೆ ಗುಮಾಸ್ತನ ಪಾತ್ರ. ಸಂದೀಪ್ ಸೆಕೆಂಡ್ ಹ್ಯಾಂಡ್ ಕಾರ್‌ಶೆಡ್‌ನ ಮಾಲೀಕ. ಫೈವ್‌ಡಿ, ರೆಡ್ ಹಾಗೂ ಫ್ಯಾಂಟಮ್ ಕ್ಯಾಮೆರಾಗಳನ್ನು ದೃಶ್ಯಗಳ ಅದ್ದೂರಿತನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಒಟ್ಟು 43 ದಿನಗಳ ಕಾಲ ಚಿತ್ರೀಕರಣ ನಡೆಸಲು ನಿರ್ದೇಶಕರು ಲೆಕ್ಕ ಹಾಕಿದ್ದಾರೆ.  

ನಟ ವಿಜಯ ರಾಘವೇಂದ್ರ `ಚಿತ್ರದ ಶೀರ್ಷಿಕೆ ವಿಭಿನ್ನವಾಗಿರುವಂತೆ ಕತೆಯೂ ವಿಭಿನ್ನವಾಗಿದೆ. ನನ್ನದು ಸಾಮಾನ್ಯ ಪಾತ್ರವಾದರೂ ಕತೆಯಿಂದಾಗಿ ವೈಶಿಷ್ಟ್ಯತೆ ದೊರೆತಿದೆ. ದಯಾಳ್ ಅವರೊಂದಿಗೆ ಕೆಲಸ ಮಾಡಲು ಮೊದಲ ಅವಕಾಶ ದೊರೆತಿದೆ. ಹಿಂದೆಯೇ ಇಬ್ಬರೂ ಒಟ್ಟಿಗೆ ಕಾರ್ಯ ನಿರ್ವಹಿಸಬೇಕು ಎಂದಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ~ ಎಂದರು.

`ಸ್ವಾತಿ ಸಿನಿಮಾಸ್~ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ ರಾಘವೇಂದ್ರ ರಾಜ್‌ಕುಮಾರ್ ವಿಜಯ ರಾಘವೇಂದ್ರ ಅವರ ನೃತ್ಯವನ್ನು ಕೊಂಡಾಡಿದರು. ಸಂದೀಪ್ ಅವರು ತಮಗೆ ನೀಡುವ ಜಿಮ್ ತರಬೇತಿಯನ್ನೂ ಸ್ಮರಿಸಿದರು. `ಟಾಸ್ ಪರಿಕಲ್ಪನೆಯ ಸುತ್ತ ಇರುವ ಚಿತ್ರ ಇಷ್ಟವಾಯಿತು. ಒಂದು ರೂಪಾಯಿಯ ಪಕ್ಕ ಹಲವು ಸೊನ್ನೆಗಳು ಸೇರಿ ಹಣ ಬರುವಂತೆ ಚಿತ್ರ ಮಾಡಿ~ ಎಂದು ಹಾರೈಸಿದರು.

ನಟಿ ರಮ್ಯಾ ಬಾರ್ನಾ ಬಹುದಿನಗಳ ನಂತರ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು. `ಚಿತ್ರದ ಬಗ್ಗೆ ತುಂಬಾ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಚಿತ್ರ ಯಾವಾಗ ಹೊರ ಬರುತ್ತದೋ ಎಂಬ ಕಾತರದಲ್ಲಿದ್ದೇನೆ~ ಎನ್ನುತ್ತ ನಕ್ಕರು.

ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಚಿತ್ರದ ನಿರ್ಮಾಪಕರಾದ ಅಶ್ವತ್ಥರೆಡ್ಡಿ, ಲೋಕೇಶ್ ರೆಡ್ಡಿ, ನಟ ಸಂದೀಪ್, ನಿರ್ಮಾಪಕರಾದ ಕೆ.ಮಂಜು, ಉಮೇಶ್ ಬಣಕಾರ್ ಮತ್ತಿತರು ಮಾತನಾಡಿದರು.

ಚಿತ್ರಕ್ಕೆ ರಿಕಿ ಕೇಜ್ ಅವರ ಸಂಗೀತವಿದೆ. ಸಾಹಿತ್ಯ ಯೋಗರಾಜ್ ಭಟ್ ಅವರ್ದ್ದದು, ಬಿ.ರಾಕೇಶ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮುರಳಿ ನೃತ್ಯ ನಿರ್ದೇಶಿಸುತ್ತಿದ್ದಾರೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.