ADVERTISEMENT

ರ‌್ಯಾಂಬೋಗೆ ಶರಣು!

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 19:30 IST
Last Updated 28 ಜೂನ್ 2012, 19:30 IST
ರ‌್ಯಾಂಬೋಗೆ ಶರಣು!
ರ‌್ಯಾಂಬೋಗೆ ಶರಣು!   

ಶರಣ್ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಕಾರ್ಯಕ್ರಮದ ಮೊದಲಿನಿಂದ ಕೊನೆಯವರೆಗೂ ಅವರ ಮುಖದಲ್ಲಿ ತುಂಬಿದ್ದ ನಗು ಕಿಂಚಿತ್ತೂ ಮಾಸಿರಲಿಲ್ಲ. ಅವರ ಪಾಲಿಗದು ವಿಶಿಷ್ಟ ದಿನ. ಅವರ ಕನಸಿನ `ರ‌್ಯಾಂಬೋ~ ಚಿತ್ರದ ಧ್ವನಿಮುದ್ರಿಕೆಗಳ ಬಿಡುಗಡೆ ಸಮಾರಂಭವದು.
 
ನಟರಾದ ರವಿಚಂದ್ರನ್, ಗಣೇಶ್ ಮತ್ತು ಬಾಲಾಜಿ ಅಂದಿನ ವಿಶೇಷ ಅತಿಥಿಗಳು. ಈ ನಾಲ್ವರು ಈ ಹಿಂದೆ ಒಂದಾಗಿದ್ದು `ಅಹಂ ಪ್ರೇಮಾಸ್ಮಿ~ ಚಿತ್ರದಲ್ಲಿ. ಮತ್ತೊಂದು ವಿಶೇಷವೆಂದರೆ ಇದು ಶರಣ್‌ರ ನೂರನೇ ಸಿನಿಮಾ.

ದನಿಮುದ್ರಿಕೆ ಬಿಡುಗಡೆ ಮಾಡಿದ ರವಿಚಂದ್ರನ್, `ಯಾವ ಕೋನದಿಂದ ನೋಡಿದರೆ ಶರಣ್ ರ‌್ಯಾಂಬೋ ಥರ ಕಾಣಿಸುತ್ತಾನೆ?~ ಎಂದು ಕಿಚಾಯಿಸಿದರು. ಚಿತ್ರದ ಬಗ್ಗೆ ಶರಣ್‌ಗೆ ತುಂಬಾ ಆತ್ಮವಿಶ್ವಾಸವಿದೆ. ಬಹಳ ಆಸೆ ಮತ್ತು ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಚಿತ್ರ ಗೆಲ್ಲಬೇಕು, ಶರಣ್ ನಾಯಕನಾಗಿ ಮತ್ತಷ್ಟು ಸಿನಿಮಾಗಳನ್ನು ಮಾಡಬೇಕು ಎಂಬ ಹಾರೈಕೆ ಅವರದು.

ಖುಷಿ ಮತ್ತು ಭಯ ಎರಡೂ ಆಗುತ್ತಿದೆ ಎಂದರು ಶರಣ್. ಇದು ಕೇವಲ ನನ್ನ ಚಿತ್ರವಲ್ಲ. ಇಡೀ ಚಿತ್ರತಂಡ ಒಂದಾಗಿ ಪ್ರೀತಿಯಿಂದ ಚಿತ್ರ ಮಾಡಿದೆ ಎಂದು ಶರಣ್ ಚಿತ್ರತಂಡಕ್ಕೆ ಶ್ರೇಯಸ್ಸನ್ನು ಅರ್ಪಿಸಿದರು. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತವರು ತರುಣ್ ಸುಧೀರ್. ನನ್ನ ಪ್ರತಿ ಕೆಲಸದ ಹಿಂದಿನ ಶಕ್ತಿ ಅವರು ಎಂದು ತರುಣ್‌ಗೆ ಕೃತಜ್ಞತೆ ಸಲ್ಲಿಸಿದರು.

ನಿರ್ಮಾಪಕ ಅಟ್ಲಾಂಟಾ ನಾಗೇಂದ್ರ ಚಿತ್ರಕ್ಕೆ ಶರಣ್ ಜೊತೆಗೂಡಿ ಬಂಡವಾಳ ಹೂಡಿದ್ದಾರೆ. ರವಿಚಂದ್ರನ್ ಅವರ ತಾಂತ್ರಿಕ ಕುಶಲತೆಯನ್ನು ನೋಡಿ ಬೆಳೆದ ಅವರು, ಅದರಿಂದ ಪ್ರಭಾವಿತರಾಗಿ ಈ ಚಿತ್ರದಲ್ಲಿಯೂ ಹಲವು ಪ್ರಯೋಗಗಳನ್ನು ನಡೆಸಿರುವುದಾಗಿ ಹೇಳಿಕೊಂಡರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ `ರೋಮಿಯೋ~ ಚಿತ್ರದ ಹಾಡಿನ ಯಶಸ್ಸಿನ ಗುಂಗಲ್ಲಿ ತೇಲುತ್ತಿರುವಂತೆ ಕಂಡರು. `ಇಂದು `ರೋಮಿಯೊ~ ಹಾಡುಗಳ ಬಿಡುಗಡೆ ಸಮಾರಂಭ~ ಎಂದು ಹೇಳಿದ ಅವರು ಕೂಡಲೇ ತಪ್ಪಿನ ಅರಿವಾಗಿ ಕ್ಷಮೆ ಕೋರಿದರು. ಈ ಚಿತ್ರದ `ಮನೆತಂಕ ಬಾರೆ...~ ಹಾಡು ಈಗಲೇ ಎಫ್‌ಎಂನಲ್ಲಿ ಹಿಟ್ ಆಗಿರುವುದು ಅವರಿಗೆ ಖುಷಿ ತಂದಿದೆ.

ಒಂದು ಹಾಡನ್ನು ಇಡೀ ಚಿತ್ರತಂಡಕ್ಕೆ ಅರ್ಪಿಸಲಾಗಿದೆ. `ರ‌್ಯಾಂಬೋ ರ‌್ಯಾಂಬೋ...~ ಎಂಬ ಹಾಡಿನಲ್ಲಿ ಶರಣ್ ತಮ್ಮ ಕುಟುಂಬ ವರ್ಗದ ಜೊತೆ ಹಾಗೂ ಚಿತ್ರೀಕರಣದಲ್ಲಿ ಅಡುಗೆ ಮಾಡುವವರಿಂದ ಹಿಡಿದು, ಚಿತ್ರದಲ್ಲಿ ದುಡಿದ ಎಲ್ಲರೊಂದಿಗೂ ಹೆಜ್ಜೆ ಹಾಕಿದ್ದಾರೆ.

ಸಂಕೋಚದ ಸ್ವಭಾವದವರಾದ ನಿರ್ದೇಶಕ ಎಂ.ಎಸ್. ಶ್ರೀನಾಥ್ ಮಾತನಾಡುವ ಮನಸ್ಸು ಮಾಡಲಿಲ್ಲ. ನಟ ತಬಲಾ ನಾಣಿ, ಆನಂದ್ ಆಡಿಯೋದ ಶ್ಯಾಂ, ಚಿತ್ರ ಸಾಹಿತಿಗಳಾದ ಕವಿರಾಜ್, ಹೃದಯಶಿವ, ಗೌಸ್‌ಪೀರ್ ಹಾಜರಿದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.