ADVERTISEMENT

ವಿತರಕ ಉವಾಚ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 11:05 IST
Last Updated 30 ಡಿಸೆಂಬರ್ 2010, 11:05 IST

ಈ ವರ್ಷ ಕನ್ನಡ ಚಿತ್ರರಂಗದ ಮೇಲೆ ಹೂಡಿದ ಬಂಡವಾಳವೆಷ್ಟು, ಲಾಭ-ನಷ್ಟದ ಪ್ರಮಾಣ ಏನು, ಮಾರುಕಟ್ಟೆಯ ನಿಜ ಸ್ಥಿತಿ ಏನು ಎಂಬ ಮೂರು ಪ್ರಶ್ನೆಯನ್ನು ‘ಸಿನಿಮಾ ರಂಜನೆ’ಯು ಸ್ಯಾಂಡಲ್‌ವುಡ್‌ನ ಇಬ್ಬರು ಪ್ರಮುಖ ವಿತರಕರ ಮುಂದಿಟ್ಟಿತು. ಅವರಿಬ್ಬರೂ ಹೇಳಿದ್ದು ಹೀಗೆ:

ಹಳೇ ರಾಗ
ಕಳೆದ ಐದಾರು ವರ್ಷಗಳಿಂದ ಪರಿಸ್ಥಿತಿ ಬೇರೆಯಾಗೇನೂ ಇಲ್ಲ. ಹೂಡಿದ ಬಂಡವಾಳವನ್ನು ಸ್ಪಷ್ಟವಾಗಿ ಹೇಳುವುದೂ ಸಾಧ್ಯವಿಲ್ಲ. ಈ ವರ್ಷ ಸುಮಾರು 150 ಕೋಟಿ ರೂಪಾಯಿಯನ್ನು ವಿನಿಯೋಗಿಸಿರಬಹುದು. ಶೇ 50-60ರಷ್ಟು ನಷ್ಟವಾಗಿರುವುದಂತೂ ಗ್ಯಾರಂಟಿ. ಹತ್ತರಲ್ಲಿ ಐದು ನಿರ್ಮಾಪಕರು ಒಂದೋ ಹಾಕಿದ ಹಣ ವಾಪಸ್ ಪಡೆದು ನೆಮ್ಮದಿ ಪಡೆದಿರಬಹುದು, ಇಲ್ಲವೇ ಲಾಭ ಮಾಡಿದ ಹುಮ್ಮಸ್ಸಿನಲ್ಲಿರಬಹುದು. ನೂರಾರು ಚಿತ್ರಮಂದಿರಗಳಲ್ಲಿ ಕೆಲವು ಸ್ಟಾರ್‌ಗಳ ಸಿನಿಮಾ ಬಿಡುಗಡೆ ಮಾಡುವ ಪರಿಪಾಠ ಈ ವರ್ಷ ಶುರುವಾಗಿದೆ. ಇದರಿಂದ ಗಿಟ್ಟುತ್ತಿದೆ. ಪರಭಾಷಾ ನಟರ ಚಿತ್ರಗಳನ್ನು ಸಾಕಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ದುಡ್ಡು ಎಳೆದುಕೊಳ್ಳುವುದನ್ನು ನಾವು ನೋಡಿದ್ದೆವು. ಅದನ್ನು ನಮ್ಮ ಚಿತ್ರಗಳೂ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.
- ಜಯಣ್ಣ

ಹೊಸ ಮೂರ್ಖತನ
ಕಳೆದ ವರ್ಷ ಬಂದಷ್ಟು ಹಿಟ್ ಚಿತ್ರಗಳು ಈ ವರ್ಷ ಬರಲಿಲ್ಲ. ನಾನು ಕಂಡಂತೆ ಈ ವರ್ಷ 10% ಹಿಟ್, 10% ಎಬೌ ಆ್ಯವರೇಜ್, 10% ಆ್ಯವರೇಜ್, ಇನ್ನು ಉಳಿದ 70% ಫ್ಲಾಪ್. ಚಿತ್ರರಂಗದಲ್ಲಿ ಎಷ್ಟು ಬಜೆಟ್ ಹೂಡಿದ್ದಾರೆ ಎಂಬುದು ಯಾರ ಲೆಕ್ಕಕ್ಕೂ ಸಿಗೋದಿಲ್ಲ. ಹಾಗಾಗಿ ಹಾಕಿದ್ದೆಷ್ಟು, ಹೋದದ್ದೆಷ್ಟು ಎಂಬುದೆಲ್ಲಾ ಊಹೆ ಅಷ್ಟೆ. ಏಕಕಾಲಕ್ಕೆ ನೂರಾರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಐಡಿಯಾ ನನ್ನ ಪ್ರಕಾರ ಮೂರ್ಖತನದ್ದು. ಬೆಂಗಳೂರಿನಲ್ಲಿ 25 ಥಿಯೇಟರ್‌ಗಳಲ್ಲಿ ರಿಲೀಸ್ ಮಾಡೋದೂ ಒಂದೇ, 40ರಲ್ಲಿ ರಿಲೀಸ್ ಮಾಡೋದೂ ಒಂದೇ. ಬರುವ ದುಡ್ಡಿನಲ್ಲಿ ಏನೂ ವ್ಯತ್ಯಾಸ ಆಗೋಲ್ಲ. ಆದರೆ, ಸಿನಿಮಾ ಓಡುವ ಕಾಲ ಕಡಿಮೆಯಾಗುತ್ತೆ. ನಮ್ಮ ಮಾರ್ಕೆಟ್‌ಗೆ ಈ ತಂತ್ರ ಒಗ್ಗೋದಿಲ್ಲ.
- ಬಾಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.