ADVERTISEMENT

ಶರಣ್ ಎಂಬ ‘ಸತ್ಯ ಹರಿಶ್ಚಂದ್ರ’!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಭಾವನಾ ರಾವ್, ಶರಣ್ ಮತ್ತು ಸಂಚಿತಾ ಪಡುಕೋಣೆ
ಭಾವನಾ ರಾವ್, ಶರಣ್ ಮತ್ತು ಸಂಚಿತಾ ಪಡುಕೋಣೆ   

ದಯಾಳ್‌ ಪದ್ಮನಾಭನ್ ನಿರ್ದೇಶನದ ‘ಸತ್ಯ ಹರಿಶ್ಚಂದ್ರ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಪದ್ಮನಾಭನ್ ಅವರು ಹೇಳಿಕೊಂಡಿರುವಂತೆ ಇದು ಸಂಪೂರ್ಣ ಕಮರ್ಷಿಯಲ್ ಸಿನಿಮಾ.

‘ಕೆಲವು ಪ್ರಯೋಗಾತ್ಮಕ ಸಿನಿಮಾಗಳ ನಂತರ ನಾನು ಮಾಡುತ್ತಿರುವ ಕಮರ್ಷಿಯಲ್ ಸಿನಿಮಾ ಇದು. ಮನರಂಜನೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎಂದರು ಪದ್ಮನಾಭನ್. ಸಿನಿಮಾ ಬಗ್ಗೆ ಮಾಹಿತಿ ನೀಡಲು ಅವರು ಬೆಂಗಳೂರಿನಲ್ಲಿ ಈಚೆಗೆ ಸುದ್ದಿಗೋಷ್ಠಿ ಕರೆದಿದ್ದರು.

(ಕೆ. ಮಂಜು)

ADVERTISEMENT

‘ಸತ್ಯ ಹರಿಶ್ಚಂದ್ರ’ ಹೆಸರಿನಲ್ಲಿ ಹಿಂದೆ ಡಾ.ರಾಜ್‌ಕುಮಾರ್‌ ಅಭಿನಯದ ಸಿನಿಮಾ ಬಂದಿದ್ದು, ಅದು ಕನ್ನಡ ವೀಕ್ಷಕರ ಮನಸೂರೆಗೊಂಡಿದ್ದು ಈಗ ಇತಿಹಾಸ. ಆ ಸಿನಿಮಾದ ಶೀರ್ಷಿಕೆಯನ್ನು ಈ ಸಿನಿಮಾಕ್ಕೆ ಬಳಸಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಕೂಡ ಪದ್ಮನಾಭನ್ ಅವರ ಮುಂದೆ ಬಂದಿತ್ತಂತೆ.

‘ಮನರಂಜನೆಯ ಸಿನಿಮಾವೊಂದಕ್ಕೆ ಈ ಹೆಸರು ಇಟ್ಟಿದ್ದು ಏಕೆ ಎಂಬ ಪ್ರಶ್ನೆಗಳನ್ನು ಎದುರಿಸಿದ್ದೇನೆ. ಈ ಶೀರ್ಷಿಕೆ ಬಳಸಿಕೊಂಡಿದ್ದು ಏಕೆ ಎಂಬುದು ಸಿನಿಮಾ ವೀಕ್ಷಿಸಿದರೆ ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.

ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಒಬ್ಬರು ಭಾವನಾ ರಾವ್. ಇನ್ನೊಬ್ಬರು ಸಂಚಿತಾ ಪಡುಕೋಣೆ. ‘ನನ್ನನ್ನು ಈ ಸಿನಿಮಾದಲ್ಲಿ ಬಬ್ಲಿ ಆಗಿ ತೋರಿಸಿದ್ದಾರೆ. ಸಾನ್ವಿ ಎಂಬ ಹುಡುಗಿಯ ಪಾತ್ರ ನನ್ನದು’ ಎಂದರು ಸಂಚಿತಾ. ಪೋರ್ಚುಗಲ್‌ನಲ್ಲಿ ಸಹ ಈ ಸಿನಿಮಾದ ಚಿತ್ರೀಕರಣ ನಡೆದಿದೆಯಂತೆ.

(ದಯಾಳ್ ಪದ್ಮನಾಭನ್)

ಸಿನಿಮಾ ಬಿಡುಗಡೆಯ ದಿನ ಹತ್ತಿರ ಬರುತ್ತಿರುವಂತೆಯೇ, ನಾಯಕ ನಟ ಶರಣ್ ಅವರಲ್ಲಿ ಪರೀಕ್ಷೆ ಹತ್ತಿರವಾಗುವಾಗ ವಿದ್ಯಾರ್ಥಿಗಳಲ್ಲಿ ಮೂಡುವಂತಹ ಭಯ ಶುರುವಾಗಿದೆಯಂತೆ. ಈ ಮಾತನ್ನು ಶರಣ್ ಅವರೇ ಹೇಳಿದರು. ‘ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ’ ಎನ್ನುವ ಮೂಲಕ ತಮ್ಮ ಭಯಕ್ಕೆ ಒಂದು ಸಮಜಾಯಿಷಿಯನ್ನೂ ಕೊಟ್ಟರು ಶರಣ್.

‘ನಂಗೆ ಡಾನ್ಸೂ ಬರಲ್ಲ, ಫೈಟೂ ಸರಿಯಾಗಿ ಬರಲ್ಲ. ಈ ಎರಡು ಮಿತಿಗಳನ್ನು ಮುಚ್ಚಿಟ್ಟುಕೊಳ್ಳಲು ನಾನು ಬಹಳ ಹೆಚ್ಚು ಎನರ್ಜಿ ಇರುವವನಂತೆ ತೋರಿಸಿಕೊಳ್ಳುತ್ತೇನೆ’ ಎಂದರು.

ಸಿನಿಮಾದ ಹಂಚಿಕೆಯ ಹೊಣೆಯನ್ನು ಜಾಕ್ ಮಂಜು ಅವರು ಹೊತ್ತುಕೊಂಡಿದ್ದಾರೆ. 200ರಿಂದ 250 ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ಅವರ ಉದ್ದೇಶವಂತೆ. ‘ಸಿನಿಮಾ ಮಂದಿರಗಳಿಂದ ಬೇಡಿಕೆ ಬರುತ್ತಿದೆ. ಶರಣ್ ಅವರ ಸಿನಿಮಾಗಳು ಗಳಿಕೆಯಲ್ಲಿ ಮುಂದೆಯೇ ಇರುತ್ತವೆ’ ಎಂದು ವಿಶ್ವಾಸದಿಂದ ಹೇಳಿದರು ಜಾಕ್ ಮಂಜು.

ಕೊನೆಯಲ್ಲಿ ಮಾತನಾಡಿದ ಸಿನಿಮಾ ನಿರ್ಮಾಪಕ ಕೆ. ಮಂಜು, ‘ಪ್ರತಿ ವ್ಯಕ್ತಿಗೂ ಹತ್ತಿರವಾಗುವಂತಹ ಕಥೆ ಇದರಲ್ಲಿದೆ. ಇದು ದೀಪಾವಳಿ ಹಬ್ಬಕ್ಕೆ ನಮ್ಮ ಕೊಡುಗೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.