ADVERTISEMENT

ಸಂಜನಾ ಹೊಸ ಗಾನಬಜಾನಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ನಟನೆಯ ಗ್ರಾಫು ಏರದೇ ಹೋದರೂ ಸದಾ ಸುದ್ದಿಯಲ್ಲಿ ಉಳಿದ ನಟಿ ಸಂಜನಾ. `ಗಂಡ ಹೆಂಡತಿ~ ಚಿತ್ರದಲ್ಲಿ ಅಧರಚುಂಬನಕ್ಕೆ ಒಡ್ಡಿಕೊಂಡ ಕಾರಣಕ್ಕೆ ಸದ್ದು ಮಾಡಿದ್ದ ಸಂಜನಾ ಈಗ ಆ ಚಿತ್ರವನ್ನು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಸದ್ಯಕ್ಕೆ ಅವರದ್ದು ಬೆಂಗಳೂರಿನಲ್ಲೊಂದು ಕಾಲು, ಕೇರಳದಲ್ಲಿ ಇನ್ನೊಂದು ಕಾಲು. ಯಾಕೆಂದರೆ, ಅವರ ಕೈಲೀಗ ಎರಡು ಮಲಯಾಳಿ ಚಿತ್ರಗಳಿವೆ.

ಕನ್ನಡದಲ್ಲಿ ಅವರು ನಟಿಸಿದ `ಐ ಆ್ಯಮ್ ಸಾರಿ... ಮತ್ತೆ ಬನ್ನಿ ಪ್ರೀತ್ಸೋಣ~ ಮರುಬಿಡುಗಡೆ ಕಾಣುತ್ತಿದೆ. ಚಿತ್ರಕ್ಕೆ ಹೊಸದಾಗಿ ಸೇರಿಸಿರುವ `ಕುಣಿ ಕುಣಿ...~ ಹಾಡಿನಲ್ಲಿ ಅವರದ್ದೇ ಕುಣಿತ. ಕೊನೆಯಲ್ಲಿ ಖಳನ ಜೊತೆ ಅವರು ಕಾದಾಡುವ ದೃಶ್ಯವನ್ನೂ ನಿರ್ದೇಶಕ ರವೀಂದ್ರ ಸೇರಿಸಿದ್ದಾರಂತೆ.

`ಐ ಆ್ಯಮ್ ಸಾರಿ... ನನಗೆ ಸಿಕ್ಕ ವಿಭಿನ್ನ ಅವಕಾಶ. ಎಲ್ಲರೂ ನನಗೆ ಬಬ್ಲಿ ಆಗಿರುವ, ಗ್ಲಾಮರಸ್ ಪಾತ್ರಗಳನ್ನು ಕೊಡುವ ಬಗ್ಗೆ ಯೋಚಿಸುತ್ತಾರೆ. ಆದರೆ, ಆ ಚಿತ್ರದಲ್ಲಿ ನನ್ನದು ನೆಗೆಟಿವ್ ಶೇಡ್ ಇರುವ ಭಿನ್ನ ಪಾತ್ರ. ಅದಕ್ಕೆ ಬೇರೆಯದೇ ಸಿದ್ಧತೆ ಬೇಕಿತ್ತು. ಸಾಕಷ್ಟು ಹೋಂವರ್ಕ್ ಮಾಡಿಕೊಂಡೇ ಆ ಚಿತ್ರದಲ್ಲಿ ನಟಿಸಿದೆ.

ಮೊದಲು ಬಿಡುಗಡೆಯಾದಾಗ ಸಮಸ್ಯೆಗಳು ಎದುರಾಗಿ, ಚಿತ್ರಮಂದಿರಗಳಿಂದ ತೆಗೆಯಬೇಕಾಯಿತು. ಈಗ ಮತ್ತೆ ಅದು ಬಿಡುಗಡೆಯಾಗುತ್ತಿರುವುದು ಸಂತೋಷದ ವಿಷಯ~ ಅಂತಾರೆ ಸಂಜನಾ.

`ಗಂಡ ಹೆಂಡತಿ~ ನಂತರ ಸಂಜನಾ ಅವರತ್ತ ಹರಿದುಬಂದ ಆಫರ್‌ಗಳು ಆಶಾದಾಯಕವಾಗಿಯೇನ ಇರಲಿಲ್ಲ. ಅಭಿನಯ ಪ್ರಧಾನ ಪಾತ್ರಗಳ ಆಯ್ಕೆಗೂ ಅವರ ಎದುರು ಇಲ್ಲದ ಕಾರಣ ಅವರು ತಮಿಳುನಾಡು, ಮುಂಬೈ ಗಲ್ಲಿಗಳನ್ನೂ ಸುತ್ತಿಬಂದರು. ಈಗ ಅವರಿಗೆ ಚಿತ್ರದ ಹಾಡೊಂದರಲ್ಲಿ ನರ್ತಿಸುವ ಅವಕಾಶ ಹೆಚ್ಚಾಗಿ ಸಿಗುತ್ತಿದೆ.

ಅದಕ್ಕೆ ಅವರು ಒಲ್ಲೆ ಎನ್ನುತ್ತಿಲ್ಲ. ರವಿಚಂದ್ರನ್ ಅಭಿನಯಿಸಿ, ಮೋಹನ್ ನಿರ್ದೇಶಿಸಿರುವ `ನರಸಿಂಹ~ ಚಿತ್ರದಲ್ಲಿ ಅಂಥ ಹಾಡೊಂದಕ್ಕೆ ಅವರು ನರ್ತಿಸಿದ್ದಾಗಿದೆ. `ಒಂದು ಕ್ಷಣದಲ್ಲಿ~ ಎಂಬ ಇನ್ನೊಂದು ಚಿತ್ರದಲ್ಲಿ ತರುಣ್ ಚಂದ್ರ ಜೊತೆ ಹೆಜ್ಜೆ ಹಾಕುವ ಅವಕಾಶವನ್ನೂ ಅವರು ಒಪ್ಪಿದ್ದರು.
 
ಮುಂದೆ ಬರೀ ಹಾಡುಗಳಿಗೆ ಕುಣಿಯುವ ಪರಿಸ್ಥಿತಿ ಉದ್ಭವವಾದರೆ ಏನು ಮಾಡುವಿರಿ ಎಂಬ ಪ್ರಶ್ನೆಗೂ ಸಂಜನಾ ಅವರಲ್ಲಿ ಉತ್ತರವಿದೆ: `ಹಾಡಿನಲ್ಲಿ ನರ್ತಿಸುವುದು ಕೂಡ ಒಂದು ಕಲೆ.

ಅದು ಸಭ್ಯತೆಯ ಎಲ್ಲೆ ಮೀರಬಾರದು. ಕ್ಯಾಮೆರಾ ಕಣ್ಣು ನೋಡಬಾರದ್ದನ್ನು ನೋಡಕೂಡದು. ಅದನ್ನು ಎಚ್ಚರದಲ್ಲಿಟ್ಟುಕೊಂಡೇ ನಾನು ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳಲು ಒಪ್ಪುತ್ತಿದ್ದೇನೆ. ಇದರಿಂದ ಕೆರಿಯರ್‌ಗೆ ತೊಂದರೆಯೇನೂ ಆಗಲಾರದು~.

ಕಡಿಮೆ ಅವಕಾಶಗಳಿದ್ದರೂ ಸಂಜನಾ ಅವರದ್ದು ಬತ್ತದ ಆಶಾವಾದ. ಮೊದಲು ಚಿತ್ರ ಸೋತಿತೆಂದರೆ ಆಕಾಶ ಕಳಚಿ ಬಿತ್ತೆಂಬ ಭಾವದಲ್ಲಿ ಇರುತ್ತಿದ್ದ ಅವರೀಗ ಬದಲಾಗಿದ್ದಾರೆ. ನಟಿಸಿ ಮನೆಗೆ ಬಂದ ಮೇಲೆ ಅದನ್ನು ಮರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.