ADVERTISEMENT

ಸಲ್ಮಾನ್‌ ಭಾಯ್‌ ಬರೆದ ’ಜಹೀರೊ’

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಸಲ್ಮಾನ್ ಖಾನ್ ಮತ್ತು ಜಹೀರ್
ಸಲ್ಮಾನ್ ಖಾನ್ ಮತ್ತು ಜಹೀರ್   

ಬಾಲಿವುಡ್‌ನಲ್ಲಿ ಹೊಸಬರಿಗೆ ಸದಾ ಬೆಂಬಲವಾಗಿ ನಿಲ್ಲುವವರು ನಟ ಸಲ್ಮಾನ್ ಖಾನ್. ಹಾಗಾಗಿ, ಸಲ್ಮಾನ್‌ ಬಹುತೇಕರಿಗೆ ಒಂದರ್ಥದಲ್ಲಿ ‘ಗಾಡ್‌ಫಾದರ್’. ಇತ್ತೀಚೆಗಷ್ಟೇ ತಮ್ಮ ಬ್ಯಾನರಿನಡಿ ತಯಾರಾದ ‘ಲವ್ ರಾತ್ರಿ’ ಸಿನಿಮಾದಲ್ಲಿ ಸಂಬಂಧಿಗಳಾದ ಆಯುಷ್‌ ಶರ್ಮಾ ಮತ್ತು ವರೀನಾ ಹುಸೇನ್ ಅವರನ್ನು ಪರಿಚಯಿಸಿದ್ದ ಸಲ್ಲೂ, ಇದೀಗ ತಮ್ಮ ಸ್ನೇಹಿತನ ಮಗ ಜಾಹೀರ್ ಇಕ್ಬಾಲ್ ಅವರನ್ನು ತೆರೆಮೇಲೆ ತರಲು ಸಿದ್ಧರಾಗಿದ್ದಾರೆ.

ಜಹೀರ್‌ಗೆ ಬಾಲಿವುಡ್‌ನ ನಂಟು ಇಲ್ಲದಿದ್ದರೂ ನಟನೆ ಮತ್ತು ನೃತ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಸಲ್ಮಾನ್ ತಂಗಿ ಅರ್ಪಿತಾಳ ಮದುವೆ ಕಾರ್ಯಕ್ರಮ ಮತ್ತು ಸ್ಟೇಜ್ ಷೋಗಳಲ್ಲಿ ಜಹೀರ್ ತಮ್ಮ ನೃತ್ಯಕಲೆಯಿಂದ ನೆರೆದವರನ್ನು ಚಕಿತಗೊಳಿಸಿದ್ದರು. ಆಗ ಜಹೀರ್ ಅವರ ನೃತ್ಯ ಮೋಡಿಗೆ ಒಳಗಾಗಿದ್ದ ಸಲ್ಮಾನ್ ಆತನನ್ನು ಸಿನಿಮಾ ರಂಗಕ್ಕೆ ಪರಿಚಯಿಸಬೇಕೆಂದು ಮನದಲ್ಲೇ ಅಂದುಕೊಂಡಿದ್ದರಂತೆ. ಬಾಲ್ಯದಿಂದಲೂ ಸಲ್ಮಾನ್ ಜತೆಯಲ್ಲಿ ಭಾವುಕ ಬೆಸುಗೆ ಹೊಂದಿರುವ ಜಹೀರ್ ಸಲ್ಲೂಗೆ ಅಚ್ಚುಮೆಚ್ಚು. ಅದರ ನೆನಪಿಗೆಂಬಂತೆ ಸಲ್ಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಜಹೀರ್ ತಮ್ಮನ್ನು ಬಿಗಿದಪ್ಪಿಕೊಂಡಿರುವ ಬಾಲ್ಯದ ಫೋಟೊವನ್ನು ಹಾಕಿ, ‘ಈ ಹುಡುಗ ಅಂದು ಹೀಗಿದ್ದ ನೋಡೋಣ ಇಂದು ಹೇಗೆ ಕಾಣುತ್ತಾನೋ’ ಎನ್ನುವ ಒಕ್ಕಣೆಯನ್ನೂ ಹಾಕಿದ್ದಾರೆ.

‘ಈ ಮಕ್ಕಳು ಎಷ್ಟು ಬೇಗ ದೊಡ್ಡವರಾಗಿಬಿಡುತ್ತಾರೆ. ಜಾಹೀರೊ ಏನೇ ಆಗಿರಲಿ ಸದಾ ಒಳ್ಳೆಯದನ್ನೇ ಕೊಡು. ದೈತ್ಯವಾಗಿ ಬೆಳೆ. ನಿನ್ನ ಪ್ರೀತಿಪಾತ್ರರಿಗೆ ತಲೆಬಾಗು. ಆದರೆ, ಜೀವನದಲ್ಲಿ ಗೌರವ ಮತ್ತು ನಿಷ್ಠೆಯ ಸಂಗತಿಗಳನ್ನು ಸದಾ ನೆನಪಿನಲ್ಲಿಟ್ಟುಕೊ...’ ಎಂದು ತುಸು ಭಾವುಕವಾಗಿಯೇ ತಮ್ಮದೇ ಶೈಲಿಯಲ್ಲಿ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

ADVERTISEMENT


ಬಾಲ್ಯದಲ್ಲಿ ಸಲ್ಮಾನ್ ಖಾನ್ ಜತೆ ಜಹೀರ್

ಗುಲಾಬಿ ಬಣ್ಣದ ತುಟಿಗಳು, ಬೆಕ್ಕಿನ ಕಣ್ಣು, ಆಕರ್ಷಕ ನಿಲುವಿನ ಜಹೀರ್ ಈಗಾಗಲೇ ಯುವತಿಯರ ಮನ ಕದ್ದಿದ್ದು, ಇನ್ನೇನು ತೆರೆ ಮೇಲೆ ಕಾಣಿಸಿಕೊಳ್ಳುವುದೊಂದೇ ಬಾಕಿ ಎನ್ನುವಂತಿದೆ ಅವರ ಫೋಟೊಗಳು. ಸಾಮಾಜಿಕ ಮಾಧ್ಯಮಗಳಲ್ಲಿ ಜಹೀರ್ ಮತ್ತು ಸಲ್ಮಾನ್ ಜತೆಗಿರುವ ಚಿತ್ರಗಳು ಈಗಾಗಲೇ ವೈರಲ್ ಆಗಿವೆ.

ಸಲ್ಮಾನ್ ಒಡೆತನದ ‘ಎಸ್‌ಕೆಎಫ್‌’ ಫಿಲಂ ಬ್ಯಾನರಿನಲ್ಲಿ ಇನ್ನೂ ಹೆಸರಿಡದ ಚಿತ್ರದಲ್ಲಿ ನಾಯಕನಾಗಿರುವ ಜಹೀರ್‌ಗೆ ನಾಯಕಿ ಇನ್ನೂ ಸಿಕ್ಕಿಲ್ಲ. ನಾಯಕಿಗಾಗಿ ಹೊಸ ಮುಖದ ಹುಡುಕಾಟದಲ್ಲಿದೆ ಚಿತ್ರತಂಡ. ಈ ಚಿತ್ರದಲ್ಲಿ ಕಾಶ್ಮೀರದಲ್ಲಿ ನಡೆಯುವ ಪ್ರೇಮಕಥನದಲ್ಲಿ ಲವ್ವರ್ ಬಾಯ್ ಆಗಿ ಜಹೀರ್ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಈ ಸಿನಿಮಾಕ್ಕೆ ಮುರುದ್ ಖೇತಾನಿ ಮತ್ತು ಅಶ್ವಿನ್ ವರ್ದೆ ಅವರ ಸಹ ನಿರ್ಮಾಣವಿದ್ದು, ನಿತಿನ್ ಕಕ್ಕರ್ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.