ADVERTISEMENT

ಸಹನೆಯ ಹಾದಿಯಲ್ಲಿ ಸನಾತನಿ

ಅಮಿತ್ ಎಂ.ಎಸ್.
Published 7 ಫೆಬ್ರುವರಿ 2013, 19:59 IST
Last Updated 7 ಫೆಬ್ರುವರಿ 2013, 19:59 IST
ಸನಾತನಿ
ಸನಾತನಿ   

ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಉತ್ಸಾಹದ ಚಿಲುಮೆ ನಟಿ ಸನಾತನಿ. ಚಿತ್ರರಂಗದಲ್ಲಿ ಇದೀಗ ತಾನೆ ಪುಟ್ಟ ಹೆಜ್ಜೆಗಳನ್ನಿಡಲು ಶುರುಮಾಡಿರುವ ಅವರ ಮುಂದೆ ಬೆಟ್ಟದಷ್ಟು ಕನಸು. ಅದು ಸಾಕಾರಗೊಳ್ಳಲು ಎಚ್ಚರಿಕೆಯ ನಡೆ ಅಗತ್ಯ ಎನ್ನುವ ಅರಿವು ಅವರಿಗಿದೆ.

ಹೀಗಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಮೂರೂವರೆ ವರ್ಷದಲ್ಲಿ ನಟಿಸಿರುವುದು ಬೆರಳಣಿಕೆಯ ಚಿತ್ರಗಳಲ್ಲಿ ಮಾತ್ರ. ಏಕ ನಾಯಕಿಯಾಗಿ ಗುರುತಿಸಿಕೊಳ್ಳುವ ಅವಕಾಶ ಇನ್ನೂ ದೊರೆತಿಲ್ಲ. ಹಾಗಂತ ಅದಕ್ಕಾಗಿ ಹಪಾಹಪಿಸುವ ಮನಃಸ್ಥಿತಿ ಅವರದ್ದಲ್ಲ.

ಒಳ್ಳೆಯ ಪಾತ್ರಗಳು ಬರಲಿ. ಅದನ್ನು ಸಮರ್ಥವಾಗಿ ನಿಭಾಯಿಸಿ ನನ್ನ ಪ್ರತಿಭೆ ತೋರಿಸಬೇಕು. ಅದರ ಮೂಲಕವೇ ಹಂತಹಂತವಾಗಿ ಮೆಟ್ಟಿಲೇರಬೇಕು ಎಂಬ ಸಹನೆ ಅವರದು.

ADVERTISEMENT

`ಕ್ರೇಜಿ ಕುಟುಂಬ', `ನಮ್ಮಣ್ಣ ಡಾನ್', `ಎಷ್ಟು ನಗ್ತಿ ನಗು' ಮುಂತಾದ ಚಿತ್ರಗಳಲ್ಲಿ ಪುಟ್ಟ ಪಾತ್ರಗಳ ಅಭಿನಯದ ಮೂಲಕ ಸನಾತನಿ ಗುರುತಿಸಿಕೊಂಡವರು. ರಾಜೇಂದ್ರ ಕಾರಂತರ `ಮಂಗನ ಕೈಲಿ ಮಾಣಿಕ್ಯ' ಮತ್ತು ಎಸ್. ನಾರಾಯಣ್ ನಿರ್ದೇಶನದ `ಛತ್ರಿಗಳು ಸಾರ್ ಛತ್ರಿಗಳು' ಚಿತ್ರಗಳಲ್ಲಿ ನಟನಾ ಕೌಶಲ್ಯವನ್ನು ಪ್ರದರ್ಶಿಸುವ ಉತ್ತಮ ಅವಕಾಶ ಸಿಕ್ಕಿದೆ ಎಂಬ ಸಂತಸ ಅವರದು.

`ಮಂಗನ ಕೈಲಿ ಮಾಣಿಕ್ಯ'ದಲ್ಲಿ ವಿಶಿಷ್ಟ ಪಾತ್ರ ಅವರದು. ಕಾಲೇಜು ಹುಡುಗಿಯಾಗಿ ಜೊತೆಗೆ ಪತ್ತೇದಾರಿಕೆಯ ಕೆಲಸವನ್ನೂ ಅವರು ಮಾಡಿದ್ದಾರೆ. `ಛತ್ರಿಗಳು...' ಚಿತ್ರ ತಮಗೆ ಸಿನಿರಂಗದಲ್ಲಿ ಬೇರೂರಲು ಸೂಕ್ತ ನೆಲೆ ಒದಗಿಸಲಿದೆ ಎನ್ನುವುದು ಅವರ ನಂಬಿಕೆ.

ಈ ಚಿತ್ರದಲ್ಲಿ ಅವರು ಎಸ್. ನಾರಾಯಣ್‌ಗೆ ಜೋಡಿ. ಚಿತ್ರದಲ್ಲಿ ಅವರನ್ನು ಆಗಾಗ ದೆವ್ವ ಆವರಿಸಿಕೊಳ್ಳಲಿದೆಯಂತೆ. `ನಾರಾಯಣ್ ಅವರೇ ಒಂದು ಕಲಿಕಾ ಸಂಸ್ಥೆ ಇದ್ದಂತೆ' ಎನ್ನುವ ಸನಾತನಿ ಅವರ ಜೊತೆ ಕೆಲಸ ಮಾಡಿದ ಅನುಭವ ಸಾಕಷ್ಟು ಕಲಿಸಿದೆ ಎನ್ನುತ್ತಾರೆ.

ಕಲಾವಿದೆಯಾಗಿ ನಿಂತ ನೀರಾಗಬಾರದು ಎಂಬ ನೀತಿ ಪಾಲಿಸುತ್ತಿರುವ ಸನಾತನಿ ವೈವಿಧ್ಯಮಯ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಆರಂಭದಿಂದಲೂ ಕಥೆಯ ಆಯ್ಕೆಯಲ್ಲಿ ಅವರು ಚೂಸಿ. ಹೀಗಾಗಿಯೇ ನಟಿಸಿದ ಪಾತ್ರಗಳ ಸಂಖ್ಯೆ ಕಡಿಮೆ.

`ಮಂಥನ' ಹಾಗೂ `ಗುಬ್ಬಿ ದೇವರು ಮತ್ತು ಮೂರು ಪ್ರಶ್ನೆಗಳು' ಎಂಬ ಎರಡು ಕಲಾತ್ಮಕ ಚಿತ್ರಗಳಲ್ಲಿ ನಟಿಸಿರುವ ಅವರೀಗ ಮತ್ತೊಂದು ಕಲಾತ್ಮಕ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಪಾತ್ರ ಯಾವುದೇ ಇರಲಿ, ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಿದರೆ ಸಾಕು, ಜನ ಖಂಡಿತಾ ಗುರುತಿಸುತ್ತಾರೆ.

ಹೀಗಾಗಿ ಗುರುತಿಸಿಕೊಳ್ಳುವಂಥ ಪಾತ್ರಗಳಿಗಾಗಿ ಹುಡುಕಾಡುವುದು ತಪ್ಪು ಎನ್ನುವ ಸನಾತನಿ, ಕಥೆ ಮತ್ತು ನಿರ್ದೇಶಕ ಮುಖ್ಯ ಎನ್ನುತ್ತಾರೆ. ನಿರ್ದೇಶಕ ಹೇಳಿದ್ದನ್ನು ಚಾಚೂ ತಪ್ಪದೆ ನಿರ್ವಹಿಸುವುದು ನಮ್ಮ ಕರ್ತವ್ಯ ಎಂಬ ಭಾವ ಅವರದು.

ಬಾಲನಟಿಯಾಗಿ ನಾಲ್ಕು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಸನಾತನಿ ಫ್ಯಾಷನ್ ಡಿಸೈನಿಂಗ್ ಪದವಿ ಪಡೆದವರು. `ಒಗ್ಗರಣೆ ಡಬ್ಬಿ' ಎಂಬ ಕಿರುತೆರೆ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು. ಈಗ ಅವರ ಆದ್ಯತೆ ಸಿನಿಮಾಕ್ಕೆ ಮಾತ್ರ.

`ಕ್ರೇಜಿ ಕುಟುಂಬ'ದಲ್ಲಿ ನಟಿಸುವಾಗಲೇ ತಮಿಳು ಚಿತ್ರವೊಂದರಿಂದ ಆಹ್ವಾನ ಬಂದಿತ್ತು. ಭಾಷೆಯ ತೊಡಕಿನ ಕಾರಣ ಒಪ್ಪಿಕೊಂಡಿರಲಿಲ್ಲ. ಈಗ ಮತ್ತೊಂದು ಅವಕಾಶ ಬಂದಿದೆ. ಅದನ್ನು  ಒಪ್ಪಿಕೊಂಡಿದ್ದಾರಂತೆ.

ಬಿಡುವಿನ ಅವಧಿಯಲ್ಲಿ ಸುಮ್ಮನೆ ಕೂರುವವರಲ್ಲ ಸನಾತನಿ. ಮನೆಯಲ್ಲಿ ಕುಳಿತು ಪೇಂಟಿಂಗ್ ಮಾಡುತ್ತಾರೆ. ಗಿಫ್ಟ್ ಸಾಮಗ್ರಿಗಳನ್ನು ತಯಾರಿಸುವುದು ಅವರಿಗೆ ತುಂಬಾ ಇಷ್ಟ. ಅವರು ಅಂಗಡಿಗೆ ಹೋಗಿ ಉಡುಗೊರೆಗಳನ್ನು ಕೊಳ್ಳುವುದಿಲ್ಲ.

ಬದಲಾಗಿ ತಾವೇ ಮನೆಯಲ್ಲಿ ತಯಾರಿಸಿ ಆಪ್ತರಿಗೆ ನೀಡುತ್ತಾರೆ. ಟೀಶರ್ಟ್, ಗಾಜು, ಬಟ್ಟೆಗಳ ಮೇಲೆ ಅವರ ಕಲಾ ಪ್ರತಿಭೆ ಅಚ್ಚೊತ್ತುತ್ತದೆ.

ಅಂದಹಾಗೆ, ಇವರು  ಭರತನಾಟ್ಯ ಪ್ರವೀಣೆಯೂ ಹೌದು. `ಹವ್ಯಾಸ ಏನೇ ಇದ್ದರೂ ನಟಿಯಾಗಿ ಬೆಳೆಯುವುದೇ ಮುಖ್ಯ ಗುರಿ. ಎಲ್ಲಾ ನಟರೊಂದಿಗೂ, ಹೆಸರಾಂತ ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಬೇಕು' ಎನ್ನುವ ಕನಸು ಸನಾತನಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.