ADVERTISEMENT

ಸಾಹಸವೇ `ಖಿಲಾಡಿ' ಜೀವನ!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST
ಸಾಹಸವೇ `ಖಿಲಾಡಿ' ಜೀವನ!
ಸಾಹಸವೇ `ಖಿಲಾಡಿ' ಜೀವನ!   

`ಸಾಹಸ ಪ್ರಧಾನ ಚಿತ್ರಗಳಿಗೆ ಮರಳಿರುವುದೇ ಸಂತಸ ತಂದಿದೆ. ಆ್ಯಕ್ಷನ್‌ನಿಂದಾಗಿಯೇ ನನ್ನ ಕೆರಿಯರ್ ಆರಂಭವಾಗಿದ್ದು, ಚಿತ್ರರಂಗದಲ್ಲಿ ನೆಲೆ ನಿಂತಿದ್ದು. ನಂತರ ಒಂದಷ್ಟು ದಿನ ಬ್ರೇಕ್ ತೆಗೆದುಕೊಂಡಿದ್ದೆ. ಆದರೀಗ ಮತ್ತೆ ಆ್ಯಕ್ಷನ್‌ಗೆ ಮರಳುತ್ತಿರುವುದು ಸಂತಸ ತಂದಿದೆ' ಎಂದು ಖಿಲಾಡಿಯೊಂಕೆ ಖಿಲಾಡಿ ಅಕ್ಷಯ್‌ಕುಮಾರ್ ಹೇಳಿದ್ದಾರೆ.
ರೌಡಿ ರೌಥೋಡ್ ಹಾಗೂ ಹೌಸ್‌ಫುಲ್ -2 ಎರಡೂ ನೂರುಕೋಟಿ ಕ್ಲಬ್ ಸೇರ್ಪಡೆಯಾದ ಸಂತಸವನ್ನು ಹಂಚಿಕೊಳ್ಳುತ್ತ ಅಕ್ಷಯ್ ಕುಮಾರ್ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ವ್ಯಕ್ತ ಪಡಿಸಿದ್ದಾರೆ.

`ಯಾವುದೇ ಸೂಪರ್ ಹಿಟ್ ಚಿತ್ರದ ಸಂತಸವನ್ನು ನಾನು ಸಂಪೂರ್ಣವಾಗಿ ಸ್ವೀಕರಿಸುವುದೇ ಇಲ್ಲ. ಕಾರಣ ಇನ್ನೊಂದು ಚಿತ್ರದಲ್ಲಿ ನಿರತನಾಗಿರುತ್ತೇನೆ. ಇಲ್ಲವೇ ಮುಂದಿನ ವಾರ ಮತ್ತೊಂದು ಬೆಳವಣಿಗೆಗೆ ಮನಸು ಸಜ್ಜಾಗಿರಬೇಕಾಗುತ್ತದೆ. ಈ ಗಳಿಕೆ ಹಾಗೂ ಯಶಸ್ಸು ಎರಡನ್ನೂ ನಾನು ಪರಿಗಣಿಸುವುದಿಲ್ಲ. ಕೆಲಸ ಮಾಡುವುದು ಹಾಗೂ ವೀಕ್ಷಕರನ್ನು ರಂಜಿಸುವುದು ಮಾತ್ರ ನನಗೆ ಗೊತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮನರಂಜನೆ ನೀಡುವುದೇ ನನ್ನ ಕೆಲಸ' ಎಂದು ಅಕ್ಕಿ ಹೇಳಿದ್ದಾರೆ.

2012ರ ಅಂತ್ಯದಲ್ಲಿ ಆ್ಯಕ್ಷನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಸಂತಸ ತಂದಿದೆಯಂತೆ. `ಆ್ಯಕ್ಷನ್ ಹೀರೊ' ಇಮೇಜ್ ನನಗೆ ಖುಷಿ ತಂದಿತ್ತು. ಆದರೆ ನನಗೆ ನನ್ನದೇ ಆದ ಬದುಕಿದೆ. ಮದುವೆಯಾದೆ. ಮಗ ಹುಟ್ಟಿದ. ಆಗ ಕೆಲದಿನಗಳ ಕಾಲ ಆ್ಯಕ್ಷನ್ ಹೊರತುಪಡಿಸಿ, ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದೆ. ಹಾಸ್ಯ, ರೋಮ್ಯಾಂಟಿಸಂ, ಪ್ರಣಯ, ಪ್ರೇಮ ಕತೆಗಳಲ್ಲೆಲ್ಲ ನಟಿಸಿದೆ. ಜನರ ಅಭಿಮಾನ ದೊಡ್ಡದು. ನನ್ನನ್ನು ಸ್ವೀಕರಿಸಿದರು. ಬದುಕಿನಲ್ಲೆಗ ಸೆಟ್ಲ್ ಆಗಿದ್ದೇನೆ. ಇನ್ನು ನನ್ನಿಷ್ಟದ ಆ್ಯಕ್ಷನ್ ಪಾತ್ರಗಳಿಗೆ ಮರಳಬೇಕು ಎನ್ನಿಸಿತು. ಅದನ್ನೇ ಮಾಡುತ್ತಿದ್ದೇನೆ' ಎಂದು ತಮ್ಮ ಚಿತ್ರರಂಗದ ದಿನಗಳ ಬಗ್ಗೆ ಮಾತನಾಡಿದ್ದಾರೆ.

`ಖಿಲಾಡಿ 786' ಸಹ ಆ್ಯಕ್ಷನ್ ಚಿತ್ರವಾಗಿದ್ದು, ಆಶಿಷ್ ಆರ್. ಮೋಹನ್ ನಿರ್ದೇಶಿಸಿದ್ದಾರೆ. ಆಸಿನ್ ತೊಟ್ಟುಮಕಲ್ ಈ ಚಿತ್ರದಲ್ಲಿ ಅಕ್ಷಯ್‌ಗೆ ಜೋಡಿಯಾಗಿದ್ದಾರೆ.`ಇಷ್ಟಕ್ಕೂ ಸಮರ ಕಲೆಯೇ ನನ್ನ ಜೀವಾಳ. ನಾನು ನನ್ನವೇ ಆದ ಕೆಲವು ಟೂರ್ನಮೆಂಟ್‌ಗಳನ್ನು ಸಹ ಹಮ್ಮಿಕೊಳ್ಳುತ್ತೇನೆ. ನನ್ನವೇ ಆದ ಜಿಮ್‌ಗಳಿವೆ. ಆ್ಯಕ್ಷನ್ ಇಲ್ಲದೇ ಬದುಕುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ನಾನು ಸಾಹಸ ಮನೋಭಾವದವನಾಗಿದ್ದೇನೆ' ಎಂದೆಲ್ಲ ಅಕ್ಕಿ ಹೇಳಿಕೊಂಡಿದ್ದಾರೆ.

ಇದೀಗ ಅವರ ಮಗ ಆರವ್‌ಗೆ 10 ವರ್ಷವಾಗಿದೆ. ಮಗಳು ನಿತಾರಗೆ ಎರಡು ತಿಂಗಳು. ಬದುಕಿನಲ್ಲಿ ಸೆಟ್ಲ್ ಆಗಿರುವೆ ಎಂದು ಬಲವಾಗಿ ಅನಿಸಿರುವುದರಿಂದ ಮತ್ತೊಮ್ಮೆ ಆ್ಯಕ್ಷನ್‌ಗೆ ಮರಳಿರುವುದಾಗಿ ಹೇಳಿದ್ದಾರೆ ಅಕ್ಷಯ್.
`ಸಾಹಸ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮಗೆ ವಯಸ್ಸಾಗುತ್ತಿದೆ ಎನ್ನುವುದನ್ನೂ ಮರೆಯಬಹುದು' ಎನ್ನುವುದು ಅವರ ನಂಬಿಕೆಯಾಗಿದೆ.

`ಇದೀಗ ಕಾಲ ಬದಲಾಗಿದೆ. ಪ್ರೇಕ್ಷಕ ತನ್ನ ನೆಚ್ಚಿನ ಹೀರೊ ಜೊತೆಗೆ ಅಥವಾ ಬದಿಗೆ ಹಾಸ್ಯನಟ ಇರಲಿ ಎಂದು ಬಯಸುವುದಿಲ್ಲ. ಬದಲಿಗೆ ತಮ್ಮ ಹೀರೋನೇ ಹಾಸ್ಯವನ್ನೂ ಮಾಡಲಿ ಎಂದು ಬಯಸುತ್ತಾನೆ. ಕೇವಲ ಸಾಹಸದಿಂದ ಜನರನ್ನು ಸೆಳೆಯುವುದು ಸಾಧ್ಯವೇ ಇಲ್ಲ. ಹಾಸ್ಯ ಜನಪ್ರಿಯತೆಯನ್ನು ತಂದುಕೊಡುತ್ತದೆ.

`ಚೈನಾ ಟೌನ್' ಚಿತ್ರದಿಂದ ಇದು ಅನುಭವಕ್ಕೆ ಬಂದ ಸತ್ಯವಾಗಿದೆ. ಇದೀಗ ತಮ್ಮ ನೆಚ್ಚಿನ ಹೀರೋ ಎಲ್ಲವನ್ನೂ ನಿರ್ವಹಿಸಲಿ ಎಂದು ಬಯಸುವ ಪ್ರೇಕ್ಷಕ ಗಣವೇ ಹೆಚ್ಚಾಗಿದೆ. ಹೀರೋ ಹಾಸ್ಯ ಮಾಡುವಂತಿಲ್ಲ ಎಂಬ ದಿನಗಳೇ ಇಲ್ಲ. ಹಾಗಾಗಿ ಹಾಸ್ಯ ಮಿಶ್ರಿತ ಸಾಹಸ ಚಿತ್ರಗಳು ನನಗಿಷ್ಟ' ಎಂದು ತಮ್ಮ ಆಯ್ಕೆಯ ಬಗ್ಗೆ ವಿಶ್ಲೇಷಣೆ ನೀಡುತ್ತಾರೆ ಅಕ್ಷಯ್ ಕುಮಾರ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.