ADVERTISEMENT

ಸುನಿಲ್ ಹಾಕಿ ಪ್ರೀತಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಸುನಿಲ್  ಹಾಕಿ ಪ್ರೀತಿ
ಸುನಿಲ್ ಹಾಕಿ ಪ್ರೀತಿ   

ಮೆತ್ತಗಿನ ಹಸಿರು ಹಾಸಿನ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿ ದಂತಕಥೆ ಧನರಾಜ್ ಪಿಳ್ಳೆ ಹಾಗೂ ಭರವಸೆ ಆಟಗಾರ ಅರ್ಜುನ್ ಹಾಲಪ್ಪ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ನಿಂತಿದ್ದ ಆ್ಯಕ್ಷನ್ ಹೀರೋ ಸುನಿಲ್ ಶೆಟ್ಟಿ ಹಾಕಿ ಆಟದ ಬಗೆಗೆ ತಮಗಿರುವ ಪ್ರೀತಿಯನ್ನು ಹೊರಗೆಡುವುತ್ತಿದ್ದರು. ಆಗ ಅವರ ಮುಖದ ಮೇಲೆ ಬೀಳುತ್ತಿದ್ದ ಹೈಮಾಸ್ ದೀಪದ ಬೆಳ್ಳನೆಯ ಬೆಳಕಿನ ಜತೆಗೆ ಕ್ಯಾಮೆರಾಗಳ ಫ್ಲಾಶ್‌ಲೈಟ್‌ಗಳು ಕೂಡ ಸೆಣೆಸುತ್ತಿದ್ದವು.

ಮಾತಿನ ನಡುನಡುವೆ ಅವರ ಬೆರಳುಗಳು ಕುರುಚಲು ಗಡ್ಡದ ಮೇಲೆ ಆಡುತ್ತಿದ್ದವು. ಅದರ ನಡುವೆ ಒಮ್ಮಮ್ಮೆ ಟೀಶರ್ಟ್‌ನ ತೋಳೇರಿಸಿ ಮಾಂಸಖಂಡವನ್ನು ಹುರಿಗೊಳಿಸಿಕೊಳ್ಳುತ್ತಿದ್ದರು. ಆಗ ಹುಡುಗಿಯರ ಕಂಗಳು ಅರಳುತ್ತಿದ್ದವು. ಆದರೆ, ಆತನ ಕಣ್ಣುಗಳಲ್ಲಿ ಮಾತ್ರ ನಿರ್ಲಿಪ್ತ ಭಾವ.

ಭಾರತೀಯ ಹಾಕಿ ತಂಡ ಒಲಂಪಿಕ್‌ಗೆ ಲಗ್ಗೆ ಇಟ್ಟಿರುವ ಬೆನ್ನಲ್ಲೇ  ವರ್ಲ್ಡ್ ಹಾಕಿ ಸೀರಿಸ್ (ಡಬ್ಲ್ಯೂಎಸ್‌ಎಚ್) ಕೂಡ ಸಂಚಲನ ಹುಟ್ಟಿಸಿದೆ. ಸುನಿಲ್ ಶೆಟ್ಟಿ ಹಾಕಿ ಜತೆ ಜತೆಗೆ ಕ್ರಿಕೆಟ್ ಬಗ್ಗೆ ಕೂಡ ಮಾತನಾಡುತ್ತಿದ್ದರು. ನನಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಅಂದರೆ ಪ್ರಾಣ. ಹಾಕಿ ಬಗ್ಗೆ ಒಲವಿದೆ. ಭಾರತ ಹಾಕಿ ತಂಡ ಒಲಿಂಪಿಕ್‌ಗೆ ಕಾಲಿಟ್ಟಿದೆ. ಇದು ದೇಶದ ಎಲ್ಲ ಜನತೆಗೆ, ಹಾಕಿ ಪ್ರಿಯರಿಗೆ ಸಂತಸದ ವಿಚಾರ. ಒಲಿಂಪಿಕ್‌ನಲ್ಲಿ ಆಡಬೇಕು ಎಂಬ ನಮ್ಮವರ ಬಹುದಿನದ ಕನಸು ಈಡೇರಿದೆ ಎಂದರು.

ಡಬ್ಲ್ಯೂಎಸ್‌ಎಚ್‌ನಲ್ಲಿ ಕರ್ನಾಟಕ ಲಯನ್ಸ್ ಉತ್ತಮ ಪ್ರದರ್ಶನ ತೋರಲಿದ್ದಾರೆ. ಸ್ಟಾರ್ ಆಟಗಾರರಾದ ಧನರಾಜ್ ಪಿಳ್ಳೆ, ಅರ್ಜುನ್ ಹಾಲಪ್ಪ ಮತ್ತಿತರರು ತಂಡವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ತಂಡದ ಮುಖ್ಯ ಸಲಹೆಗಾರನಾಗಿ (ಮೆಂಟರ್) ನಾನು ಲಯನ್ಸ್ ಜತೆಗಿರುತ್ತೇನೆ. ಬಾಲಿವುಡ್ ಕೂಡ ತಂಡದ ಜತೆ ಕೈಜೋಡಿಸಲಿದೆ.

ಸ್ಯಾಂಡಲ್‌ವುಡ್ ಕೂಡ ನಮ್ಮಂದಿಗೆ ಕೂಡುವ ವಿಶ್ವಾಸವಿದೆ ಎಂದರು ಸುನಿಲ್ ಶೆಟ್ಟಿ.
ಕ್ರಿಕೆಟ್ ಕೂಡ ವಹಿವಾಟಿನ ವಿಚಾರವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದು ಐಪಿಎಲ್. ಅದು ಈ ಪರಿ ಜನಪ್ರಿಯತೆಗಳಿಸುತ್ತದೆ ಎಂಬುದು ಸ್ವತಃ ಅದರ ರೂವಾರಿಗಳಿಗೂ ಕೂಡ ಅರಿವಿರಲಿಲ್ಲ. ಮುಂದೆ ಐಪಿಎಲ್ ಹಣದ ಹೊಳೆಯನ್ನೇ ಹರಿಸಿತು.
ಆನಂತರದಲ್ಲಿ ಅದೇ ಮಾದರಿಯಲ್ಲಿ ಸಿಸಿಎಲ್ ಕೂಡ ಜನಪ್ರಿಯತೆ ಪಡೆದುಕೊಂಡಿತು. ಡಬ್ಲ್ಯೂಎಸ್‌ಎಚ್ ಕೂಡ ಜನಪ್ರಿಯತೆ ಗಳಿಸಲಿದೆ. ಹಾಕಿ ಆಟಕ್ಕೆ ಈ ಸರಣಿ ಒಂದು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡಲಿದೆ ಎಂಬ ಆಶಾವಾದ ಅವರದ್ದು.

ಪ್ರತಿ ಪಂದ್ಯದಲ್ಲೂ ಗೇಮ್ ಪ್ಲಾನ್ ಬೇರೆ ಬೇರೆ ಇರುತ್ತದೆ. ತಂಡದ ಆಟಗಾರ ಸದೃಢತೆ ಕಾಯ್ದುಕೊಳ್ಳಲು ಹೆಚ್ಚಿನ ಪ್ರಾಮುಖ್ಯ ನೀಡಲಾಗುವುದು. ತಂಡಕ್ಕೆ ಸ್ಟಾರ್ ಆಟಗಾರ ಅರ್ಜುನ್ ಹಾಲಪ್ಪ ಅವರ ಸಾರಥ್ಯವಿದೆ. ತಂಡವನ್ನು ತರಬೇತುಗೊಳಿಸುವ ಜವಾಬ್ದಾರಿಯನ್ನು ಭಾರತ ಹಾಕಿ ತಂಡದ ಮಾಜಿ ನಾಯಕ ಜುಡೆ ಫೆಲಿಕ್ಸ್ ಹೊತ್ತುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಏಳು ಪಂದ್ಯಗಳು ನಡೆಯಲಿವೆ. ಕರ್ನಾಟಕ ಲಯನ್ಸ್ ಡಬ್ಲ್ಯೂಎಸ್‌ಎಚ್‌ನಲ್ಲಿ ಎದುರಾಳಿ ತಂಡದ ಮೇಲೆ ಮುನ್ನುಗ್ಗಲು ರೆಡಿಯಾಗಿದೆ. ಸಿಂಹಗಳ ಬೇಟೆಯಲ್ಲಿ ನಾನು ಕೂಡ ಮುಂಚೂಣಿಯಲ್ಲಿರುವುದು ಖುಷಿ ತಂದಿದೆ. `ಐ ಆಮ್ ಆಲ್ವೇಸ್ ಪ್ಯಾಶನೇಟ್ ಅಬೌಟ್ ಸ್ಪೋರ್ಟ್ಸ್~ ಎಂದು ಹಾಕಿ ಸ್ಟಿಕ್ ಕೈಯಲ್ಲಿಡಿದುಕೊಂಡು ನಕ್ಕರು ಸುನಿಲ್ ಶೆಟ್ಟಿ.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.