ADVERTISEMENT

ಸುನಿ ‘ಸ್ಪೆಷಲ್ ಸ್ಟೋರಿ’

ಡಿ.ಎಂ.ಕುರ್ಕೆ ಪ್ರಶಾಂತ
Published 10 ಮಾರ್ಚ್ 2016, 19:45 IST
Last Updated 10 ಮಾರ್ಚ್ 2016, 19:45 IST
ಸುನಿ ‘ಸ್ಪೆಷಲ್ ಸ್ಟೋರಿ’
ಸುನಿ ‘ಸ್ಪೆಷಲ್ ಸ್ಟೋರಿ’   

‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಇಂದು (ಮಾ.11) ತೆರೆ ಕಾಣುತ್ತಿದೆ. ಈ ಚಿತ್ರದ ಮೂಲಕ ಯುವ ನಿರ್ದೇಶಕ ಸುನಿ ಮತ್ತೊಮ್ಮೆ ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಏಳುಬೀಳು ಕಂಡಿರುವ ಸುನಿ ಅವರಿಗೆ ‘ಲವ್ ಸ್ಟೋರಿ’ ಮೂಲಕ ಮತ್ತೆ ಗೆಲ್ಲುವ ಅಚಲ ವಿಶ್ವಾಸ.

‘‘ನಿರ್ಮಾಪಕನಾಗಿ ‘ಉಳಿದವರು ಕಂಡಂತೆ’, ನಿರ್ದೇಶಕನಾಗಿ ‘ಬಹುಪರಾಕ್’ ಚಿತ್ರದಲ್ಲಿ ಸೋಲು ಕಂಡಿದ್ದೇನೆ. ಗೆಲ್ಲಬೇಕು ಎನ್ನುವ ಛಲ–ಹಟವಿದೆ. ಸೋಲು ಬೆನ್ನಿಗಿರುವುದರಿಂದ ನಡುಕವೂ ಇದೆ. ಈ ಚಿತ್ರ ಗೆದ್ದರೆ ನನಗೆ ಪುಟಿಯುವ ಉತ್ಸಾಹ. ಸೋತರೆ ದೊಡ್ಡ ಪೆಟ್ಟು’– ಹೀಗೆ ಹೇಳುತ್ತ ನಕ್ಕರು ನಿರ್ದೇಶಕ ಸುನಿ.

ಸುನಿ ಮತ್ತೆ ಸರಳ ಪ್ರೇಮಕಥೆ ಹಿಡಿದು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ನಿರ್ದೇಶನದ ಮೂರನೇ ಚಿತ್ರ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಇಂದು (ಮಾ.11) ತೆರೆ ಕಾಣುತ್ತಿದೆ. ಈ ಹಿಂದಿನ ‘ಸಿಂಪಲ್ ಸ್ಟೋರಿ’ ಮೆಚ್ಚಿದವರು ಹೊಸ ಸ್ಟೋರಿಯನ್ನೂ ಒಪ್ಪುವರು ಎನ್ನುವ ವಿಶ್ವಾಸ ಅವರದು.

‘ಸಿಂಪಲ್ಲಾಗ್ ಒಂದ್ ಲವ್  ಸ್ಟೋರಿ ಇಷ್ಟವಾದವರಿಗೆ ಇನ್ನೊಂದ್ ಲವ್ ಸಹ ಇಷ್ಟವಾಗುವ ವಿಶ್ವಾಸವಿದೆ. ಬಾಕ್ಸಾಫೀಸ್ ಗಳಿಕೆ ನಮ್ಮ ಕೈ ಮೀರಿದ್ದು. ಆ ಕಾರಣಕ್ಕೆ ಭಯವೂ ಇದೆ. ನಿರ್ಮಾಪಕ ಅಶು ಬೇದ್ರೆ ಸಿನಿಮಾ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಬೇಕು ಎಂದರೆ ಅದು ಇಷ್ಟೇ ಸೈಜ್‌ ಇರಬೇಕು. ಹೀಗೆಯೇ ಇರಬೇಕು ಎನ್ನುವ ಸ್ಪಷ್ಟತೆ ನಿರ್ಮಾಪಕರಿಗೆ ಇತ್ತು. ಅವರ ಬೆಂಬಲವೂ ನನ್ನಲ್ಲಿ ವಿಶ್ವಾಸ ಮೂಡಿಸಿದೆ’ ಎನ್ನುತ್ತಾರೆ ಸುನಿ. 

ಸುನಿ ಪ್ರಯೋಗಶೀಲತೆಯನ್ನು ನೆಚ್ಚಿಕೊಂಡವರು. ಇದಕ್ಕೆ ಅವರ ಹಿಂದಿನ ಚಿತ್ರಗಳೇ ಸಾಕ್ಷಿ. ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಹೊಸತನದ ಜೊತೆಗೆ ಪ್ರಯೋಗಶೀಲತೆಯೂ ಇದೆ’ಯಂತೆ. ‘ಮದುವೆ ಚಿತ್ರದ ಕೇಂದ್ರಬಿಂದು. ಹೆಣ್ಣು ನೋಡುವುದಕ್ಕೆ ಹೋಗುವ ಪ್ರಸಂಗ ಸಿನಿಮಾ ಆಗಿ ಬೆಳೆಯುತ್ತದೆ. ಆರಂಭದ ಹತ್ತು ನಿಮಿಷದಲ್ಲಿ ಎರಡು ಕುಟುಂಬಗಳ ಪಾತ್ರಗಳು ಬರುತ್ತವೆ. ನಂತರ ನಾಯಕ–ನಾಯಕಿ. ನಡುವೆ ಟ್ಯಾಬ್ ಮತ್ತು ಕಾರ್ ಎನ್ನುವ ಪಾತ್ರಗಳು. ಜರ್ನಿಯಲ್ಲಿ ನಡೆಯುವ ಕಥೆ.

ಸಿಂಪಲ್ಲಾಗ್ ಒಂದ್ ಲವ್‌ ಸ್ಟೋರಿಗೆ ಫ್ಲಾಶ್ ಬ್ಯಾಕ್ ಇತ್ತು. ಇಲ್ಲಿ ಕಲ್ಪನೆಗಳನ್ನು ಬಳಸಿದ್ದೇನೆ. ನೀನು ನನ್ನ ಜತೆ ಇದ್ದರೆ ಹೇಗೆ ಇರಬಹುದು, ನಾನು ನಿನ್ನ ಜತೆ ಇದ್ದರೆ ಹೇಗೆ ಇರಬಹುದು ಎನ್ನುವ ಕಲ್ಪನಾ ವಿಲಾಸ. ಕನ್ನಡಕ್ಕೆ ಇದು ಹೊಸತು ಎನಿಸುತ್ತದೆ. ಕಥೆ ನೈಜತೆಗೆ ಹತ್ತಿರ. ಈ ಕಲ್ಪನೆ ಮೂಲ ಸಿನಿಮಾಕ್ಕೂ ಕನೆಕ್ಟ್ ಆಗುತ್ತದೆ. ಕ್ಲೈಮ್ಯಾಕ್ಸ್‌ ಹೊಸದು.

ಒಂದು ಅಂತಿಮ ಷರಾ ಬರೆದು ಮುಗಿಸುವುದಲ್ಲ’ ಎನ್ನುವ ಸುನಿ ಮಾತಿನಲ್ಲಿ ಮೂರನೇ ಲವ್ ಸ್ಟೋರಿಯೂ ಇಣುಕುತ್ತದೆ. ಭವಿಷ್ಯದಲ್ಲಿ ಮೂರನೇ ಲವ್ ಸ್ಟೋರಿಗೂ ಕಥೆ ಹೊಂದಿಸುವಿರಾ? ಎಂದರೆ ಕೊಂಚವೂ ಯೋಚಿಸದೆ ‘ಖಂಡಿತಾ’ ಎನ್ನುತ್ತಾರೆ. ‘ಪ್ರೀತಿ ಎಂದರೆ ಪ್ರತಿಯೊಬ್ಬರಿಗೂ ಅವರದ್ದೇ ಅನುಭವಗಳು, ಭಾವಗಳು, ನೆನಪುಗಳು ಇರುತ್ತದೆ. ಅದನ್ನು ಇಲ್ಲಿ ಮತ್ತೆ ಕಾಣಬಹುದು. ಪರೀಕ್ಷೆ ಬರೆದವರು ರಂಜನೆ ತೆಗೆದುಕೊಳ್ಳಬಹುದು.

ಪರೀಕ್ಷೆ ಬರೆಯಬೇಕಾದವನೂ ಒತ್ತಡದಿಂದ ಮುಕ್ತವಾಗಲು ಸಿನಿಮಾ ನೋಡಿ ಮನರಂಜನೆ ಪಡೆಯಬಹುದು. ಪೂರ್ಣ ಪ್ರಯೋಗಾತ್ಮಕ ಯೋಚನೆಯಿಂದ ಕೈ ಸುಟ್ಟುಕೊಂಡಿದ್ದೇನೆ. ಪ್ರೀತಿ ಮತ್ತು ಕಾಮಿಡಿಯ ಕಥೆಗಳಿಗೆ ಅದರದ್ದೇ ಆದ ನೋಡುಗ ವರ್ಗವಿದೆ. ನನ್ನದು ಎನ್ನುವ ಪ್ರಯೋಗವನ್ನು ಜತೆಯಲ್ಲಿಟ್ಟುಕೊಂಡು ಭರಪೂರ ಮನರಂಜನೆಯನ್ನೂ ಸೇರಿಸಿಕೊಳ್ಳಲಾಗಿದೆ’ ಎಂದು ಇನ್ನೊಂದ್ ಸ್ಟೋರಿಯ ಭಿನ್ನತೆಗಳ ಬಗ್ಗೆ ಮಾಹಿತಿ ನೀಡುವರು.

ಚಿತ್ರದ ನಾಯಕನ ಪಾತ್ರ ಉಡಾಫೆಯದು. ನಾಯಕಿ ಮೇಘನಾ ಗಾಂವ್ಕರ್ ಪಾತ್ರ ಏರಿಳಿತಗಳಿಂದ ಆರಂಭವಾಗಿ ಕೊನೆಮುಟ್ಟುತ್ತದೆ. ಇನ್ನು ‘ಟ್ಯೂಬ್’ ಪಾತ್ರ ಸಿನಿಮಾದ ಜರ್ನಿಯಲ್ಲಿ ಸೇರಿಕೊಳ್ಳುತ್ತದೆ, ಕೊನೆಯವರೆಗೂ ಕಾಮಿಡಿಯಾಗಿ ಸಾಗುತ್ತದೆ. ನೈಜತೆಗೆ ಒತ್ತು ಕೊಟ್ಟಿದ್ದೇನೆ ಎಂದು ಹೇಳಿದೆನಲ್ಲ ಅದನ್ನು ನಾನು ಸ್ವ ಅನುಭವಿಸಿ ಮಾಡಿದ್ದು ಎಂದು ಸುನಿ ಹೇಳುತ್ತಾರೆ.

ಪ್ರತಿ ವಾರ ಆರೇಳು ಸಿನಿಮಾಗಳು ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ತೆರೆ ಕಾಣುತ್ತಿದೆ. ‘ನಾವು ಮಾರ್ಚ್ 4ರಂದು ತೆರೆಗೆ ಬರಬೇಕು ಎಂದುಕೊಂಡಿದ್ದೆವು. ಕಿರಗೂರಿನ ಗಯ್ಯಾಳಿಗಳು ತೆರೆ ಕಾಣುತ್ತದೆ ಎಂದು ಸುಮ್ಮನಾದೆವು. ಆದರೆ ಈಗ ಇಬ್ಬರೂ ಒಟ್ಟಿಗೆ ಬರುತ್ತಿದ್ದೇವೆ. ಕೆಲವು ಚಿತ್ರಗಳು ಮುಂಚೆಯೇ ದಿನಾಂಕ ಘೋಷಿಸಿಕೊಂಡಿದ್ದರೆ, ಮತ್ತೊಂದಿಷ್ಟು ಹೊಸಬರ ಚಿತ್ರಗಳು ಏಕಾಏಕಿ ತೆರೆ ಕಾಣುತ್ತವೆ. ಇದರಿಂದ ಯಾರಿಗೂ ಒಳಿಗಾಗುವುದಿಲ್ಲ.

ಈ ಬಗ್ಗೆ ನಮ್ಮ ಸಿನಿಮಾ ರಂಗದ ಪ್ರಮುಖರು ಚರ್ಚಿಸಿ ಒಂದು ನೀತಿ ಅಳವಡಿಸಬೇಕು’ ಎನ್ನುತ್ತಾರೆ ಸುನಿ. ಹಿಂದಿನ ಸಿನಿಮಾ ಸೋಲುಗಳನ್ನು ನೆನಪಿಸಿಕೊಳ್ಳುತ್ತಲೇ ‘ಇನ್ನೊಂದ್ ಲವ್ ಸ್ಟೋರಿ’ ಕೈ ಹಿಡಿಯುವ ಖಚಿತ ವಿಶ್ವಾಸ ಸುನಿ ಅವರಿಗಿದೆ. ‘ನಾನು ರಸ್ತೆ ಬದಿಯಲ್ಲಿಯೂ, ಸ್ಟಾರ್ ಹೋಟೆಲ್‌ನಲ್ಲೂ ತಿಂದಿದ್ದೇನೆ. ಸೋಲು–ಗೆಲುವು ಸಮಾನ’ ಎನ್ನುತ್ತಾರೆ. ಅಂದಹಾಗೆ, ಮುಂದಿನ ದಿನಗಳಲ್ಲಿ ನಿರ್ದೇಶಕನಾಗಿ ಮಾತ್ರ ಸುನಿ ಕೆಲಸ ಮಾಡುತ್ತಾರಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.