ADVERTISEMENT

‘ಸೈಕೋ ಶಂಕ್ರ’ನ ವೃತ್ತಾಂತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 13:07 IST
Last Updated 24 ಅಕ್ಟೋಬರ್ 2017, 13:07 IST
ನವರಸನ್, ರಿಷಿಕಾ ಶರ್ಮ
ನವರಸನ್, ರಿಷಿಕಾ ಶರ್ಮ   

‘ಸಮಾಜದಲ್ಲಿ ಸೈಕೋ ಶಂಕರ್‌ನಂತಹ ವ್ಯಕ್ತಿತ್ವದವರು ಸಾಕಷ್ಟು ಜನರಿದ್ದಾರೆ. ನಮ್ಮ ಸುತ್ತಮುತ್ತಲೇ ಇರುತ್ತಾರೆ. ಅಂಥವರಿಂದ ಹೇಗೆ ಸುರಕ್ಷಿತವಾಗಿರಬೇಕು ಎಂಬುದೇ ಸಿನಿಮಾದ ಸಾರಾಂಶ’ ಎಂದರು ‘ಸೈಕೋ ಶಂಕ್ರ’ನ ಪಾತ್ರಧಾರಿ ನವರಸನ್.

‘ವೈರ’ ಚಿತ್ರದ ಬಳಿಕ ಈ ಪಾತ್ರ ಅವರಿಗೆ ಖುಷಿ ಕೊಟ್ಟಿದೆಯಂತೆ. ಇದನ್ನು ಅವರೇ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು. ‘ವೈರ’ದಲ್ಲಿ ನಾನು ಕಾಲು ಭಾಗ ಮಾತ್ರ ಶ್ರಮವಹಿಸಿದ್ದೆ. ಸೈಕೋ ಶಂಕ್ರದಲ್ಲಿ ನನ್ನದು ಪರಿಪೂರ್ಣ ಶ್ರಮ’ ಎಂದರು.

ಚಿತ್ರದಲ್ಲಿ ಅವರಿಗೆ ಡೈಲಾಗ್‌ ಕಡಿಮೆ. ಅಭಿನಯಕ್ಕೆ ಹೆಚ್ಚು ಒತ್ತು ಸಿಕ್ಕಿದೆಯಂತೆ. ‘ಚಿತ್ರದ ಟೈಟಲ್ ನೋಡಿದ ತಕ್ಷಣ ಇದೊಂದು ನೆಗೆಟೀವ್ ಶೇಡ್‌ ಇರುವ ಚಿತ್ರ ಎನಿಸುತ್ತದೆ. ಆದರೆ, ಸಮಾಜಕ್ಕೆ ಉತ್ತರ ಸಂದೇಶ ನೀಡುವ ಚಿತ್ರ ಇದಾಗಿದೆ’ ಎಂದು ನವರಸನ್.

ADVERTISEMENT

‘ನನಗೆ ಮೊದಲು ಈ ಪಾತ್ರ ಒಪ್ಪಿಕೊಂಡಾಗ ಕೊಂಚ ಕಸಿವಿಸಿಗೊಂಡಿದ್ದೆ. ಸೈಕೋ ವ್ಯಕ್ತಿತ್ವದವರ ಬಗ್ಗೆ ಸರ್ಕಾರ, ‍ಪೊಲೀಸ್‌ ಇಲಾಖೆ ಯಾವ ಕ್ರಮಕೈಗೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂಥವರ ಬಗ್ಗೆ ಜನರು ಮುಂಜಾಗ್ರತೆ ವಹಿಸಬೇಕು. ಇದನ್ನೇ ಚಿತ್ರದಲ್ಲಿ ಹೇಳಿದ್ದೇವೆ. ಇದು ಕೌಟುಂಬಿಕ ಚಿತ್ರ’ ಎಂದು ಸರ್ಟಿಫಿಕೇಟ್‌ ನೀಡಿದರು.

ಪುನೀತ್‌ ಆರ್ಯ

‘ಸೈಕೋ ಶಂಕರ್‌ನ ಕೃತ್ಯ ಆಧರಿಸಿ ಕಥೆ ಹೆಣೆದಿಲ್ಲ. ಸಮಾಜದಲ್ಲಿರುವ ಅಂತಹ ವ್ಯಕ್ತಿತ್ವದವರ ಬಗ್ಗೆ ಚಿತ್ರ ಹೇಳುತ್ತದೆ’ ಎಂದರು ನಿರ್ದೇಶಕ ಪುನೀತ್‌ ಆರ್ಯ. ನಾಯಕಿ ರಿಷಿಕಾ ಶರ್ಮ, ‘ಚಿತ್ರದಲ್ಲಿ ಮಂಜಿ ಪಾತ್ರಧಾರಿಯಾಗಿ ನಟಿಸಿದ್ದೇನೆ’ ಎಂದಷ್ಟೇ ಹೇಳಿದರು.

ನಟ ಪ್ರಣಾಮ್, ‘ಚಿತ್ರದ ಹೆಸರು ಕೇಳಿದ ತಕ್ಷಣ ನೆಗೆಟಿವ್‌ ಅಂಶ ಇರುವ ಚಿತ್ರ ಎನಿಸುವುದು ಸಹಜ. ಚಿತ್ರದ ಮೂಲಕ ಧನ್ಯಾತ್ಮಕ ಅಂಶಗಳನ್ನು ಹೇಳುತ್ತಿದ್ದೇವೆ’ ಎಂದರು. ಶರತ್‌ ಲೋಹಿತಾಶ್ವ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವೇದಶ್ರೀ ನಾರಾಯಣ ಅವರದು ಕ್ರೈಂ ವರದಿಗಾರ್ತಿಯ ಪಾತ್ರ. ಇದೇ ವೇಳೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಯಿತು.

ವೇದಶ್ರೀ

ಎಸ್.ಪ್ರಭಾಕರ್‌ ಮತ್ತು ಪಿ. ಮಂಜುಳಾ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ನಿತಿನ್‌ ಛಾಯಾಗ್ರಹಣ ನೀಡಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.

ಪ್ರಣಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.