ನಾಲ್ಕನೇ ಸಿನಿಮಾ ಬಿಡುಗಡೆಯಾಗುವ ಹೊತ್ತಿಗಾಗಲೇ ಸೋನಾಕ್ಷಿ ಸಿನ್ಹ ಎಂಟು ಮೆಟ್ಟಿಲು ಮೇಲೇರಿ ಆಗಿದೆ ಎಂಬಂಥ ವಾತಾವರಣ. ದೀಪಾವಳಿಗೆ `ಸನ್ ಆಫ್ ಸರ್ದಾರ್~ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಚಾರದ ನಿಮಿತ್ತ ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲಾ ಅಭಿಮಾನಿಗಳ ಲಗ್ಗೆ. ಅದನ್ನು ನೋಡಿ ಸೋನಾಕ್ಷಿಗೆ ತಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದೆನಿಸಿದೆ.
`ಮೊದಲ ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆಗ ತುಂಬಾ ಕಷ್ಟಪಟ್ಟೆ. ಯಾಕೆಂದರೆ, ಹೊಸ ನಟಿಯೊಬ್ಬಳು ಅನುಭವಿ ನಟನ ಜೊತೆ ಇರುವಾಗ ಎಲ್ಲರ ಕಣ್ಣು ನಟನ ಕಡೆಗೇ ಹೋಗುತ್ತದೆ. ಜನ ನನ್ನ ಅಭಿನಯವನ್ನೂ ಗಮನಿಸುವಂತೆ ನಟಿಸಬೇಕು ಎಂದು ಮೊದಲಿನಿಂದಲೂ ಮನಸ್ಸಿನಲ್ಲಿಯೇ ಅಂದುಕೊಂಡು ಶ್ರದ್ಧೆಯಿಂದ ಕ್ಯಾಮೆರಾ ಎದುರಿಸಿದೆ.
ಎರಡನೇ ಚಿತ್ರ ರೌಡಿ ರಾಥೋರ್‌ನಲ್ಲಿ ಅಕ್ಷಯ್ ಕುಮಾರ್ ಜೊತೆ ಬಣ್ಣ ಹಚ್ಚುವ ಅವಕಾಶ. ನಿರಂತರವಾಗಿ ಕಲಿಯುತ್ತಲೇ ಇರಬೇಕು ಎಂದು ನನ್ನ ತಂದೆ ಮೊದಲೇ ಕಿವಿಮಾತು ಹೇಳಿದ್ದರು. ಅದು ನಿಧಾನವಾಗಿ ಫಲ ಕೊಟ್ಟಿದೆ~ ಎನ್ನುವ ಸೋನಾಕ್ಷಿ, ನಾಲ್ಕನೇ ಚಿತ್ರದಲ್ಲಿ ಅಜಯ್ ದೇವಗನ್ ಜೋಡಿಯಾಗಿದ್ದಾರೆ.
ಟೀವಿ ವಾಹಿನಿಗಳಲ್ಲಿ ಸೋನಾಕ್ಷಿ ನೃತ್ಯವಿರುವ ಹಾಡುಗಳು ವ್ಯಾಪಕವಾಗಿ ಪ್ರಸಾರವಾಗುತ್ತಿವೆ. ಜನ ಅವರನ್ನು ಮೆಚ್ಚಿಕೊಂಡಾಗಿದೆ. ಆ ಭಾವ ತಮಗೆ ಇದೆಯೇ ಎಂಬ ಪ್ರಶ್ನೆಗೆ ಸೋನಾಕ್ಷಿ ಹೇಳುವುದಿಷ್ಟು: `ಎಂದು ನಾನು ಆಕಾಶದಲ್ಲಿ ತೇಲಾಡುತ್ತಿದ್ದೇನೆ ಎಂದು ಭಾವಿಸುತ್ತೇನೋ ಅಂದೇ ನಟಿಯಾಗಿ ಅಧಃಪತನ ಶುರುವಾಗಿದೆ ಎಂದರ್ಥ.
ನಾವು ಸದಾ ಭೂಮಿ ಮೇಲೆ ಇರಬೇಕು. ಪ್ರತಿ ಚಿತ್ರ ಹೊಸ ಸವಾಲು. ಅದನ್ನು ಅರಿತು ಸನ್ನದ್ಧರಾಗಬೇಕು. ಅಭಿನಯ ಸುಲಭವಲ್ಲ. ಮುಖದಲ್ಲಿ ತರಹೇವಾರಿ ಭಾವ ಹೊಮ್ಮಿಸುವುದು, ಕಷ್ಟಕರ ನೃತ್ಯ ಮಾಡುವುದು, ಪಳಗಿದ ನಟರ ಸಮಕ್ಕೂ ಮಂಕಾಗದಂತೆ ನಟಿಸುವುದು ತಮಾಷೆಯಲ್ಲ~.
ಅನುಭವಿ ನಾಯಕರ ಜೊತೆಗೇ ಅಭಿನಯಿಸುವ ಅವಕಾಶ ತಮಗೆ ಒಲಿದುಬಂದದ್ದು ಭಾಗ್ಯವೆನ್ನುವ ಸೋನಾಕ್ಷಿ, ಹೊಸಬರಿಗೆ ಅದು ಕಲಿಯಲು ಒಳ್ಳೆಯ ಮಾರ್ಗ ಎಂದೂ ಭಾವಿಸಿದ್ದಾರೆ. `ನನ್ನಂಥ ಹೊಸಬರಿಗೆ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್, ಅಕ್ಷಯ್, ಅಜಯ್ ಅವರಿಂದ ಸೂಕ್ತ ಮಾರ್ಗದರ್ಶನ ಸಿಕ್ಕಿದೆ~ ಅಂತಾರೆ.
ತಂದೆ ಶತ್ರುಘ್ನ ಸಿನ್ಹ ತೋರಿದ ದಾರಿಯಲ್ಲಿ ಇಷ್ಟು ದಿನ ನಡೆದದ್ದು ಸೋನಾಕ್ಷಿಗೆ ಒಳ್ಳೆಯ ಫಲವನ್ನೇ ಕೊಟ್ಟಿದೆ. ಮುಂದೆ ಅವರು ಹೇಗೆ ಬಾಲಿವುಡ್‌ನಲ್ಲಿ ನೆಲೆಯೂರಲಿದ್ದಾರೆ ಎಂಬುದು ಉಳಿದಿರುವ ಕುತೂಹಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.