ADVERTISEMENT

ಹಂಬಲ್ ಪೊಲಿಟಿಷಿಯನ್‌ ಮತ್ತು ಒರಿಯೋ ಬಿಸ್ಕೆಟ್‌!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST
ವಿಜಯ್‌ ಚೆಂಡೂರ
ವಿಜಯ್‌ ಚೆಂಡೂರ   

‘ನಾನು ಈ ಗೆಟಪ್‌ನಲ್ಲಿ ಚೆನ್ನಾಗಿ ಕಾಣಿಸ್ತೇನಾ ಅಥವಾ ಸಿನಿ ಮಾದಲ್ಲಿನ ಗೆಪಟ್‌ನಲ್ಲಾ?’ ಆಗಷ್ಟೇ ಟ್ರೈಲರ್‌ ನೋಡಿ ಮುಗಿಸಿದ್ದ ಪ್ರೇಕ್ಷಕರನ್ನು ದಾನಿಶ್‌ ಸೇಠ್‌ ಕೇಳಿದರು. ಎದುರು ಕೂತಿದ್ದವರೆಲ್ಲ ‘ಸಿನಿಮಾ ಗೆಟಪ್‌’ ಎಂದು ಒಕ್ಕೊರಲಿಂದ ಕೂಗಿದರು. ಅಲ್ಲಿಗೆ ಟ್ರೈಲರ್‌ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಂಡು ಸಿನಿಮಾ ಬಗ್ಗೆ ವಿವರಣೆಗಿಳಿದರು.

ಮೈಸೂರು ಮೂಲದ ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಬಂದಿರುವ ದಾನಿಶ್‌ ಅವರ ಮೊದಲ ಸಿನಿಮಾ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ರಾಜಕೀಯ ವಿಡಂಬನೆಯ ಕಥೆಯನ್ನೇ ಒಳಗೊಂಡಿದೆಯಂತೆ.

‘ನಂಗೂ ವಯಸ್ಸು ಮೂವತ್ತಾಯ್ತು. ಇನ್ನಾದ್ರೂ ಬದುಕಿನಲ್ಲಿ ಏನಾದ್ರೂ ಸಾಧನೆ ಮಾಡೋಣ ಅಂತ ಪೊಲಿಟಿಕಲ್‌ ಸಿನಿಮಾ ಮಾಡಲು ನಿರ್ಧರಿಸಿದೆ. ಕಥೆ ಹೆಣೆಯುವಲ್ಲಿ ಸಾದ್‌ ಖಾನ್‌ ಸಹ ಜತೆಯಾದರು. ಇಬ್ಬರೂ ಚಿತ್ರಕಥೆ ಬರೆದುಕೊಂಡು ಕಾಫಿಡೇ ಒಂದಲ್ಲಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರನ್ನು ಭೇಟಿಯಾದೆವು. ಅಲ್ಲಿ ಅವರು ಟಿಶ್ಯೂ ಪೇಪರ್‌ ಮೇಲೆ ಬಜೆಟ್‌ ಬರೆದು ತೋರಿಸಿದ್ದು ಇನ್ನೂ ನೆನಪಿದೆ. ನಂತರ ಹೇಮಂತ್‌ ಮತ್ತು ರಕ್ಷಿತ್‌ ಶೆಟ್ಟಿ ಕೂಡ ನಿರ್ಮಾಪಕರಾಗಿ ಸೇರಿಕೊಂಡರು’ ಎಂದರು ದಾನಿಶ್‌.

ADVERTISEMENT

‘ಪುಷ್ಕರ್‌, ಹೇಮಂತ್‌ ಮತ್ತು ನಾನು ಸೇರಿ ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದು. ಇನ್ನು ಮುಂದೆಯೂ ಹಲವು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುವ ಉದ್ದೇಶ ಇದೆ. ನಾವು ನಾಗರಿಕರಾಗಿ ಯಾವ ರೀತಿ ತಪ್ಪುಗಳನ್ನು ಮಾಡುತ್ತಿದ್ದೇವೆ. ಹಾಗೆಯೇ ಕೆಲವು ರಾಜಕಾರಣಿಗಳು  ಎಂಥ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವ ಸಿನಿಮಾ’ ಎಂದರು ರಕ್ಷಿತ್‌ ಶೆಟ್ಟಿ.

ಸಾದ್‌ ಖಾನ್‌ ತುಂಬ ಕಷ್ಟಪಟ್ಟು ಕನ್ನಡದಲ್ಲಿಯೇ ಮಾತನಾಡಿ ಚಿತ್ರದ ಬಗ್ಗೆ ಹೇಳಿಕೊಂಡರು. ‘ಇದು ಇಷ್ಟಪಟ್ಟು ಹಾಗೆಯೇ ಕಷ್ಟಪಟ್ಟು ಮಾಡಿರುವ ಸಿನಿಮಾ’ ಎಂದು ಅವರು ಹೇಳಿಕೊಂಡರು.

‘ಇನ್ನೊಬ್ಬ ನಿರ್ಮಾಪಕ ಹೇಮಂತ್‌  ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌ ಪೂರ್ತಿ ಮನರಂಜನೆಯ ಸಿನಿಮಾ. ಆದರೆ ಈ ರೀತಿಯ ಸಿನಿಮಾ ಕನ್ನಡದಲ್ಲಿ ಇನ್ನೂ ಬಂದಿಲ್ಲ. ಇದನ್ನು ಪ್ರೇಕ್ಷಕರಿಗೆ ತೋರಿಸಲು ನಾವೂ ಕಾತರರಾಗಿದ್ದೇವೆ’ ಎಂದರು.

‘ನಾನು ಈ ಚಿತ್ರದಲ್ಲಿ ಬೇರೆಯದೇ ಥರದ ನಟನಾ ಅನುಭವ ಪಡೆದುಕೊಂಡಿದ್ದೇನೆ. ದಾನಿಶ್‌ ಅವರ ಹಿಂಬಾಲಕನಾಗಿ ಕಾಣಿಸಿಕೊಂಡಿದ್ದೇನೆ. ಬೆಳ್ಳಗಿರುವ ಅವರು ಮತ್ತು ಪಕ್ಕ ಕಪ್ಪಗಿರುವ ನಾನು ನಿಂತಾಗ ಫ್ರೇಮ್‌ ಒರಿಯೊ ಬಿಸ್ಕೆಟ್‌ ರೀತಿ ಕಾಣತ್ತೆ’ ಎಂದು ನಕ್ಕರು ವಿಜಯ್‌ ಚೆಂಡೂರು.

‘ಚಿತ್ರ ಬಹುತೇಕ ಪೂರ್ಣಗೊಂಡಿದೆ. ಅಕ್ಟೋಬರ್‌ ಕೊನೆ ಅಥವಾ ನವೆಂಬರ್‌ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ’ ಎಂದು ವಿವರಣೆ ನೀಡಿದರು ಪುಷ್ಕರ್‌ ಮಲ್ಲಿಕಾರ್ಜುನ. ದಾನಿಶ್‌ ಸೇಠ್‌, ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ರೋಜರ್‌ ನಾರಾಯಣ್‌, ಶ್ರುತಿ ಹರಿಹರನ್‌,  ಅವರೂ ಮುಖ್ಯಭೂಮಿಕೆಯಲ್ಲಿದ್ದಾರೆ.

ಇಡೀ ಪತ್ರಿಕಾಗೋಷ್ಠಿಯಲ್ಲಿ ಎಲ್ಲರ ಮಾತೂ ಇದೊಂದು ಕನ್ನಡದ ಪ್ರಯೋಗಾತ್ಮಕ ಚಿತ್ರ ಎಂಬುದನ್ನೇ ಬಿಂಬಿಸುತ್ತಿತ್ತಾದರೂ ವೇದಿಕೆಯ ಮೇಲಿದ್ದ ಚಿತ್ರದ ಪ್ರಾಯೋಜಿತ ಪೋಸ್ಟರ್‌ಗಳಲ್ಲಿ ಒಂದೂ ಕನ್ನಡದ ಅಕ್ಷರಗಳು ಇರಲಿಲ್ಲ!. ಈ ಬಗ್ಗೆ ಕೇಳಿದಾಗ ‘ಮುಂದಿನ ದಿನಗಳಲ್ಲಿ ಖಂಡಿತ ಪೊಸ್ಟರ್‌ಗಳಲ್ಲಿ ಕನ್ನಡ ತರುತ್ತೇವೆ’ ಎಂದು ಭರವಸೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.