ಕಥೆಗಳ ಆಯ್ಕೆಯಲ್ಲಿ ಲೆಕ್ಕಾಚಾರ. ಮಾತನ್ನೂ ಅಳೆದು ತೂಗುವ ವ್ಯಕ್ತಿತ್ವ ಅನುಷಾ ಅವರದು. ಸಿನಿಮಾ ಪ್ರೇಕ್ಷಕರಿಗೆ ಅವರು ಪರಿಚಿತರಲ್ಲ. `ಪುನರ್ ವಿವಾಹ'ದ `ಆರತಿ'ಯಾಗಿ ಧಾರಾವಾಹಿ ಪ್ರಿಯರಿಗೆ ಅವರದು ಪರಿಚಿತ ಮುಖ.
ಸಿನಿಮಾರಂಗದಲ್ಲಿ ಅವಕಾಶಗಳ ರಾಶಿಯೇ ಎದುರಿಗಿದ್ದರೂ ಎಲ್ಲದಕ್ಕೂ `ಒಲ್ಲೆ' ಎನ್ನುವುದು ಅನುಷಾ ಉತ್ತರ. ಬಣ್ಣದ ಲೋಕದಲ್ಲಿ ಅವರದು ಎಚ್ಚರಿಕೆಯ ಹೆಜ್ಜೆ. ಹುಟ್ಟಿ ಬೆಳೆದದ್ದು ಸಂಪ್ರದಾಯಸ್ಥ ಕುಟುಂಬದ ಕಟ್ಟುಪಾಡಿನಲ್ಲಿ. ತಾವು ನಿರ್ವಹಿಸುವ ಪಾತ್ರಗಳೂ ಹೀಗೆಯೇ ಇರಬೇಕೆಂಬ ನಿಯಮ ಅವರದು. ಹೀಗಾಗಿಯೇ ನಾಯಕಿಯಾಗುವ ಅನೇಕ ಅವಕಾಶಗಳನ್ನು ತಿರಸ್ಕರಿಸಿದ್ದಾರೆ. ತಮಗಾಗಿಯೇ ರೂಪಿಸಿದಂಥ ಬೆರಳೆಣಿಕೆಯ ಅವಕಾಶಗಳು ಬಂದಾಗ ಒಪ್ಪಿಕೊಂಡಿದ್ದಾರೆ.
ತೀರ್ಥಹಳ್ಳಿ ಮೂಲದವರಾದ ಅನುಷಾರಿಗೆ ಬಾಲ್ಯದಲ್ಲೇ ಹಿತವೆನ್ನಿಸಿದ್ದು ಸಂಗೀತದ ಸಂಗ. ತಂದೆ ನಾಗಭೂಷಣ್ ಸಂಗೀತ ವಾದಕ. ಸ್ವರ ಸಂಯೋಜನೆಯಲ್ಲಿಯೂ ಪರಿಣಿತರು. ಅನುಷಾ ತಂದೆಯಿಂದ ಕೀಬೋರ್ಡ್ ಮತ್ತು ರಿದಂ ಪ್ಯಾಡ್ ನುಡಿಸುವುದನ್ನು ಕಲಿತರು. 300ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಅನುಷಾ ರಿದಂ ಪ್ಯಾಡ್ ನುಡಿಸಿದ್ದಾರೆ. ರಿದಂ ಪ್ಯಾಡ್ ನುಡಿಸುವ ಕೆಲವೇ ಮಹಿಳೆಯರಲ್ಲಿ ತಾವೂ ಒಬ್ಬರು ಎಂಬ ಹೆಮ್ಮೆ ಅವರದು. ಹಾಡುಗಾರಿಕೆಯಲ್ಲಿಯೂ ಅವರ ಸಾಧನೆ ಸಣ್ಣದೇನಲ್ಲ. ಸತೀಶ್ ಹೆಗಡೆ ಮತ್ತು ಕಾಶಿನಾಥ ಪತ್ತಾರ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತಿದ್ದಾರೆ. ಹಲವು ಭಕ್ತಿಗೀತೆ ಧ್ವನಿಸುರುಳಿಗಳಲ್ಲಿ ಹಾಡಿದ್ದಾರೆ.
ಚಿತ್ರರಂಗಕ್ಕೆ ಅನಿರೀಕ್ಷಿತವಾಗಿ ಕಾಲಿಟ್ಟ ಅನುಷಾ ಮೊದಲು ಕ್ಯಾಮೆರಾ ಎದುರಿಸಿದ್ದು ಏಳನೇ ತರಗತಿಯಲ್ಲಿದ್ದಾಗ. ತೆಲುಗಿನ `ಶ್ರೀ ರಾಮದಾಸು' ಚಿತ್ರದಲ್ಲಿ ನಾಗಾರ್ಜುನ ಮತ್ತು ಸ್ನೇಹಾ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕುವ ಅವಕಾಶ ಅನಿರೀಕ್ಷಿತವಾಗಿ ಒದಗಿತ್ತು. ಬಳಿಕ ಓದು ಮತ್ತು ಸಂಗೀತದಲ್ಲಿ ಮುಳುಗಿದ್ದ ಅವರು ಸಿನಿಮಾಗಾಗಿ ಬಣ್ಣಹಚ್ಚಿದ್ದು `ಮತ್ತೆ ಮುಂಗಾರು' ಚಿತ್ರಕ್ಕೆ. ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ, ನಾಟಕಗಳಲ್ಲಿ ಸಕ್ರಿಯರಾಗಿದ್ದ ವ್ಯಕ್ತಿಯೊಬ್ಬರು ಅನುಷಾರನ್ನು ನಿರ್ದೇಶಕ ದ್ವಾರ್ಕಿ ರಾಘವ ಅವರಿಗೆ ಪರಿಚಯಿಸಿದರು. ನಾಯಕ ಶ್ರೀನಗರ ಕಿಟ್ಟಿಯ ಅಕ್ಕನ ಮಗಳ ಪಾತ್ರದ ಮೂಲಕ ಸಿನಿಮಾ ವೇದಿಕೆ ಅಲ್ಲಿಯೇ ಸಿದ್ಧವಾಯಿತು.
ಮೊದಲ ಪಿಯುಸಿಯಲ್ಲಿದ್ದಾಗ `ಅರಸಿ' ಧಾರಾವಾಹಿಯಲ್ಲಿ ನಟಿಸುವ ಆಹ್ವಾನ ಬಂದಿತು.
ಅದರಲ್ಲಿ ಅಂಧ ಯುವತಿಯಾಗಿ ಅನುಷಾ ಕಿರುತೆರೆ ಲೋಕದಲ್ಲಿ ಜನಪ್ರಿಯರಾದರು. ಗ್ಲಾಮರ್ ಹೆಸರಿನಲ್ಲಿ ತುಂಡುಡುಗೆ ಧರಿಸುವುದು ಇಷ್ಟವಿಲ್ಲದ ಅನುಷಾ ಸಿನಿಮಾಗಳಲ್ಲಿ ಬಂದ ಸಾಲು ಸಾಲು ಅವಕಾಶಗಳತ್ತ ಮನಸ್ಸು ಮಾಡಲಿಲ್ಲ. `ಮಿ. ಡೂಪ್ಲಿಕೇಟ್', `ಚಿರು' ಮುಂತಾದ ಚಿತ್ರಗಳನ್ನು ತಿರಸ್ಕರಿಸಿದ್ದು ಇದೇ ಕಾರಣಕ್ಕಾಗಿ. ಅವರ ನೀತಿಗೆ ಪೂರಕವಾದ ಪಾತ್ರ ಸಿಕ್ಕಿದ್ದು ತೆಲುಗಿನಲ್ಲಿ. ನಟ ಮಹೇಶ್‌ಬಾಬು ಸಂಬಂಧಿ ಕೃಷ್ಣ ಮಾಧವ್ ನಾಯಕರಾಗಿರುವ `ಹೃದಯಂ ಎಕ್ಕಡುನ್ನಡಿ' ಚಿತ್ರದ ಪಾತ್ರ ಅವರಿಗಾಗಿಯೇ ಹೆಣೆದಂತಿತ್ತು. ಆ ಸಿನಿಮಾ ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂಬ ಖುಷಿ ಅವರದು.
ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರಿಂದ ಓದನ್ನು ಮೊಟಕುಗಳಿಸುವ ಅನಿವಾರ್ಯತೆ. ಆದರೆ ಅಭಿನಯಕ್ಕಿಂತಲೂ ಓದಿನಲ್ಲಿ ಅವರಿಗೆ ಹೆಚ್ಚು ಆಸಕ್ತಿಯಂತೆ. ಬಿ.ಕಾಂ. ಮೊದಲ ವರ್ಷದಲ್ಲಿದ್ದಾಗ ನಟನೆಗಾಗಿ ಕಾಲೇಜು ಬಿಡುವಂತಾಯಿತು. ಈಗ ದೂರಶಿಕ್ಷಣದಲ್ಲಿ ಅಭ್ಯಾಸ ಮುಂದುವರಿದಿದೆ. `ಬೆಳ್ಳಿತೆರೆ ಸಂಗ, ಓದು ಭಂಗ' ಎನ್ನುವ ಮಾತನ್ನು ಅವರು ಒಪ್ಪುವುದಿಲ್ಲ.
ಪಠ್ಯೇತರ ಚಟುವಟಿಕೆಗಳಲ್ಲಿ ಅನುಷಾ ಸದಾ ಮುಂದೆ. ಶಾಲಾ ದಿನಗಳಲ್ಲಿ ಹೈಜಂಪ್ ಕ್ರೀಡಾಪಟು. ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಆಡಿದ ಅನುಭವ ಅವರದು. ಮೊದಲ ಪಿಯುಸಿಯಲ್ಲಿದ್ದಾಗ ಮತ್ತೊಂದು ಕಿರೀಟ ರಾಜ್‌ಪಥ್ ಪಥಸಂಚಲನದಲ್ಲಿ ಸಿಕ್ಕಿದ್ದು. ಪ್ರತಿ ಗಣರಾಜ್ಯೋತ್ಸವದಲ್ಲಿ ರಾಜಪಥ್‌ನಲ್ಲಿ ನಡೆವ ಪಥಸಂಚಲನದಲ್ಲಿ ಆಯ್ದ 144 ಎನ್‌ಸಿಸಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ. ಅದರಲ್ಲಿ ಸ್ಥಾನ ಪಡೆದವರಲ್ಲಿ ಅನುಷಾ ಕೂಡ ಒಬ್ಬರು. ಅಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನದಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನೂ ಪಡೆದರು.
ಸಿನಿಮಾಕ್ಕಿಂತ ಧಾರಾವಾಹಿಯಲ್ಲಿ ಕಲಿಯುವುದು ಸಾಕಷ್ಟಿದೆ. ಅಭಿನಯ ಮತ್ತು ಕಲಿಕೆ ಎರಡಕ್ಕೂ ಅಲ್ಲಿ ಅವಕಾಶವಿದೆ ಎನ್ನುವ ಅವರು, ತಮಗೆ ಅಭಿನಯ ಪಾಠ ಹೇಳಿಕೊಟ್ಟ ದ್ವಾರ್ಕಿ ರಾಘವ ಮತ್ತು ರಮೇಶ್ ಇಂದಿರಾ ಅವರನ್ನು ನೆನೆಯುತ್ತಾರೆ. `ಸಿನಿಮಾ ಇಷ್ಟವಿಲ್ಲ ಎಂದಲ್ಲ. ಆದರೆ ದೇಹಪ್ರದರ್ಶನ ಇಷ್ಟವಿಲ್ಲ ಎನ್ನುತ್ತಾರೆ' ಅನುಷಾ.
ದ್ವಾರ್ಕಿ ರಾಘವ ತಮಿಳಿನಲ್ಲಿ ನಿರ್ದೇಶಿಸಲಿರುವ ಹೊಸ ಚಿತ್ರ ಅನುಷಾ ಅವರ ಮುಂದಿನ ಆಯ್ಕೆ. ಬಣ್ಣದ ಲೋಕ ಸಾಕೆನಿಸಿದಾಗ ಸಂಗೀತಲೋಕ ಪ್ರವೇಶಿಸುವ ಇರಾದೆ ಅವರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.