ADVERTISEMENT

ಹೃದಯದ ನದಿಗೆ ಹೊಸ ನೀರು!

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST
ಎಸ್. ಮಹೇಂದರ್
ಎಸ್. ಮಹೇಂದರ್   

`ಹೃದಯ ಕೇವಲ ಪ್ರೀತಿ-ಪ್ರಣಯಕ್ಕೆ ಮಾತ್ರವೇ ಮಿಡಿಯುವುದಿಲ್ಲ, ಮಾನವೀಯತೆಗೂ ನೋವುಗಳಿಗೂ ಮಿಡಿಯುತ್ತದೆ'. ನಿರ್ದೇಶಕ ಎಸ್. ಮಹೇಂದರ್ ಹೃದಯ ಮಿಡಿಯುವ ಬಗೆಗಳನ್ನು ತೆರೆದಿಟ್ಟರು. ತುಸು ವಿರಾಮದ ನಂತರ `ಈ ಹೃದಯ' ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಸಜ್ಜಾಗಿರುವ ಮಹೇಂದರ್, ಕಣ್ಣೀರ ಕಥಾನಕಗಳಿಂದ ಹೊರಬಂದು ಹೊಸ ಕಥೆಗಳನ್ನು ಹೇಳುವ ಉತ್ಸಾಹದಲ್ಲಿದ್ದರು. 

ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ನಟಿಸುತ್ತಿರುವ `ಈ ಹೃದಯ' ನೈಜ ಘಟನೆ ಆಧಾರಿತ ಕಥೆ. ಶಿವರಾಂ ಅವರು ಅಧಿಕಾರಿ ಆಗಿದ್ದಾಗ ಅವರಿಂದ ನೆರವು ಪಡೆದ ಮುಸ್ಲಿಂ ಯುವತಿಯೊಬ್ಬಳ ಬದುಕಿನ ಒಂದು ಸನ್ನಿವೇಶವನ್ನು ಮಹೇಂದರ್ ಸಿನಿಮಾ ಕಥೆಯ ಚೌಕಟ್ಟಿಗೆ ತಂದಿದ್ದಾರಂತೆ.

ಚಿತ್ರದ ಶೀರ್ಷಿಕೆ `ಈ ಹೃದಯ' ಎಂದಿದ್ದರೂ ನಾಯಕನಿಗೆ ನಾಯಕಿಯ ಮೇಲೆ ಮೂಡುವುದು ಮಾನವೀಯತೆಯ ಅಂತಃಕರಣವೇ ಹೊರತು ಪ್ರೇಮವಲ್ಲ. ಹೃದಯವಂತಿಕೆ, ಮಾನವೀಯತೆಯೇ ಚಿತ್ರದ ಆಶಯವಂತೆ.

ಹದಿನೈದು ದಿನಗಳ ಒಳಗೆ ಯು.ಕೆ.ಗೆ ಪ್ರಯಾಣಿಸುವ ಅನಿವಾರ್ಯತೆಗೆ ಸಿಲುಕಿರುವ ಮುಸ್ಲಿಂ ಯುವತಿಯೊಬ್ಬಳು ಪಾಸ್‌ಫೋರ್ಟ್ ಪಡೆಯಲು ಎದುರಿಸುವ ಕಷ್ಟ, ಸಂಕಷ್ಟಗಳೇ ಚಿತ್ರದ ತಿರುಳು. ಅಂತಿಮವಾಗಿ ಹಿಂದೂ ಮುಸ್ಲಿಂ ಭಾವೈಕ್ಯವನ್ನು ಕಥೆ ಸಾರಲಿದೆ. `ತಮ್ಮ ಈವರೆಗಿನ 31 ಸಿನಿಮಾಗಳ ಕಥೆ ಒಂದು ಬಗೆಯದ್ದಾದರೆ, ಈ ಚಿತ್ರವೇ ಮತ್ತೊಂದು ಬಗೆಯದ್ದು. ಕಥೆ ಸರಳವಾದರೂ ಮನಕ್ಕೆ ಮುಟ್ಟುವಂತೆ ಚಿತ್ರಿಸಲಾಗುವುದು' ಎಂದು ಮಹೇಂದರ್ ಹೇಳಿದರು.

ದೀರ್ಘ ವಿರಾಮದ ನಂತರ ಮತ್ತೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಶಿವರಾಂ- `ಕಥೆ ತಮ್ಮ ವೃತ್ತಿ ಅನುಭವದ್ದು. ಜನರು ಕಥೆಯನ್ನು ಒಪ್ಪಿಕೊಳ್ಳುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ಅವರದು ವಾಣಿಜ್ಯೋದ್ಯಮಿಯ ಪಾತ್ರ.ದಿಲ್‌ಶಾದ್ `ಈ ಹೃದಯ'ದ ನಾಯಕಿ. ಬೆಳ್ಳಿತೆರೆಯ ಮೊದಲ ಅವಕಾಶದಲ್ಲೇ ಮುಸ್ಲಿಂ ಯುವತಿಯಯೊಬ್ಬಳ ತವಕ-ತಲ್ಲಣಗಳನ್ನು ಅಭಿವ್ಯಕ್ತಿಸುವ ಸವಾಲಿನ ಪಾತ್ರ ಅವರಿಗೆ ಸಿಕ್ಕಿದೆ.

`ಇಡೀ ಮುಸ್ಲಿಂ ಸಮುದಾಯದ ಯುವತಿಯರನ್ನು ಪ್ರತಿನಿಧಿಸುವ ಪಾತ್ರ ನನ್ನದು. ಕಥೆ ಭಾವನಾತ್ಮಕವಾಗಿದ್ದು ನನ್ನ ಪಾತ್ರವೂ ಭಾವ ಪ್ರಧಾನವಾಗಿದೆ' ಎಂದರು ದಿಲ್‌ಶಾದ್. 45 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸುವ ಉದ್ದೇಶ ಚಿತ್ರತಂಡದ್ದು.

ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಮಧು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿವೆ. ಸಂಗೀತ ನಿರ್ದೇಶನ ಮನೋಮೂರ್ತಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.