ADVERTISEMENT

ಹೊಸ ಆಯಾಮದ ಫಿನೀಸ್ ಅಂಡ್ ಫರ್ಬ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST
ಹೊಸ ಆಯಾಮದ ಫಿನೀಸ್ ಅಂಡ್ ಫರ್ಬ್
ಹೊಸ ಆಯಾಮದ ಫಿನೀಸ್ ಅಂಡ್ ಫರ್ಬ್   

ಮಕ್ಕಳ ಮನರಂಜನಾ ಜಗತ್ತಿಗೆ ಹೊಸ ಆಯಾಮ ನೀಡಿದ ಅನಿಮೇಷನ್ ಈಗ ಟೀವಿ ಚಾನೆಲ್ ಮತ್ತು ಬೆಳ್ಳಿ ಪರದೆಗಳಿಗೆ ಲಗ್ಗೆ ಇಟ್ಟಿದೆ. ಕಾರ್ಟೂನ್ ಲೋಕದ ದಿಕ್ಕನ್ನು ಬದಲಿಸಿದ ಅನಿಮೇಷನ್‌ಗೆ ಈಗ ಎಲ್ಲಿಲ್ಲದ ಬೇಡಿಕೆ. ಭಾರತದಲ್ಲೂ ಅನಿಮೇಷನ್‌ನಲ್ಲಿ ಹಲವು ಚಿತ್ರಗಳು ಬಂದಿವೆ. ಜನಪ್ರಿಯ ಕಥೆಗಳನ್ನೇ ಸರಕನ್ನಾಗಿಸಿಕೊಂಡು ಅದಕ್ಕೆ ಅನಿಮೇಷನ್ ಸ್ಪರ್ಶ ನೀಡುವ ಅನೇಕ ಪ್ರಯತ್ನಗಳು ನಡೆಯುತ್ತಿವೆ.

ಇದೇ ಹಾದಿಯಲ್ಲಿ ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗುವ ಜನಪ್ರಿಯ ಅನಿಮೇಷನ್ ಕಾರ್ಯಕ್ರಮ `ಫಿನೀಸ್ ಅಂಡ್ ಫರ್ಬ್~ ಚಲನಚಿತ್ರರೂಪ ಪಡೆದಿದೆ. ಮಕ್ಕಳನ್ನು ಮತ್ತಷ್ಟು ರಂಜಿಸುವ ನಿಟ್ಟಿನಲ್ಲಿ ಹೊಸ ವಿಸ್ಮಯ ಜಗತ್ತನ್ನು ಈ ಚಿತ್ರದಲ್ಲಿ ಸೃಷ್ಟಿಸಲಾಗಿದೆ. ಹಲವು ವರ್ಷಗಳಿಂದ ಡಿಸ್ನಿ ಚಾನೆಲ್‌ನಲ್ಲಿ ಧಾರಾವಾಹಿಯಾಗಿ ಪ್ರಸಾರವಾಗುತ್ತಿರುವ ಕಾರ್ಯಕ್ರಮವನ್ನು ಸಾಹಸ, ಹಾಸ್ಯ, ಸಂಗೀತ, ಅದ್ಭುತ ಕಾಲ್ಪನಿಕ ಲೋಕಗಳ ಸಮ್ಮಿಶ್ರಣದೊಂದಿಗೆ `ಫಿನೀಸ್ ಆಂಡ್ ಫರ್ಬ್: ಅಕ್ರಾಸ್ ದಿ ಸೆಕೆಂಡ್ ಡೈಮನ್ಷನ್~ ಎಂಬ ಚಿತ್ರವನ್ನು `ಫೀನಸ್ ಮತ್ತು ಫರ್ಬ್~ನ ಸೃಷ್ಟಿಕರ್ತರಾದ ಡ್ಯಾನ್ ಪೊವೆನ್‌ಮಿರ್ ಮತ್ತು ಜೆಫ್ ಮಾರ್ಷ್ ತಯಾರಿಸಿದ್ದಾರೆ.

ನಮ್ಮದಲ್ಲದ ಇನ್ನೊಂದು ಲೋಕ. ಅದು ಚಿತ್ರವಿಚಿತ್ರ ಬಣ್ಣಬಣ್ಣದ ಜಗತ್ತು. ಅಲ್ಲಿರುವುದು ನಮ್ಮದೇ ತದ್ರೂಪಿಗಳಾದ ಆದರೆ ಬೇರೆ ವ್ಯಕ್ತಿತ್ವದ ಜನ. ಆ ಲೋಕದೊಳಗೆ ಪ್ರವೇಶಿಸುವ ಫಿನೀಸ್ ಮತ್ತು ಫರ್ಬ್, ಕ್ಯಾಡೇಸ್, ಸೀಕ್ರೆಟ್ ಏಜೆಂಟ್ ಆಗಿರುವ ಪೆರ‌್ರಿ ಹೆಸರಿನ ತಮ್ಮ ಸಾಕುಪ್ರಾಣಿ ಪ್ಲಾಟಿಪಸ್ (ಬಾತುಕೋಳಿಯ ಕೊಕ್ಕಿನಂತಹ ಮೂತಿ ಹೊಂದಿರುವ ಪ್ರಾಣಿ) ಜೊತೆ ಸೇರಿ ಅಲ್ಲಿನ ತದ್ರೂಪಿ ಫಿನೀಸ್, ಫರ್ಬ್ ಮತ್ತು ಕ್ಯಾಡೇಸ್‌ರ ಸಹಾಯದೊಂದಿಗೆ ನಡೆಸುವ ಸಾಹಸದ ಕಥೆಯಿದು. ಬಲ್ಜೀತ್ ಎಂಬ ಭಾರತೀಯ ಹುಡುಗ, ಇಸಬೆಲ್ಲಾ, ಖಳನಾಯಕ ಡೂಫೆನ್ಶ್‌ಮಿರ್ಟ್ಜ್ ಹೀಗೆ ಧಾರಾವಾಹಿಯಲ್ಲಿನ ಪಾತ್ರಗಳೇ ಇಲ್ಲಿವೆ.

ಅಮೆರಿಕದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಅನಿಮೇಷನ್ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಫಿನೀಸ್ ಅಂಡ್ ಫರ್ಬ್~ನ ಒಂದೂವರೆ ಗಂಟೆಯ ಸಿನಿಮಾ ಅವತರಣಿಕೆ ಮೂಲಕ ನಿರ್ದೇಶಕ ಡ್ಯಾನ್ ಪೊವೆನ್‌ಮಿರ್ ಕ್ರಿಯಾಶೀಲತೆಯ ಮತ್ತೊಂದು ಮೆಟ್ಟಿಲು ಏರಿದ್ದಾರೆ. ಮಕ್ಕಳಿಗೆ ಮುದ ನೀಡುವ ಸಾಹಸ ಮತ್ತು ಹಾಸ್ಯ ಸನ್ನಿವೇಶ ಇಲ್ಲಿ ಪ್ರಧಾನವಾದರೂ ಗಮನ ಸೆಳೆಯುವುದು ವಿಜ್ಞಾನ ಮತ್ತು ತಂತ್ರಜ್ಞಾನದ ಭವಿಷ್ಯದಲ್ಲಿನ ಔನ್ನತ್ಯದ ಸಾಧ್ಯತೆಗಳು.

ಅನಿಮೇಷನ್‌ನಲ್ಲಿನ ಅದ್ಭುತ ಬರಹಕ್ಕಾಗಿ ಈ ಸರಣಿ 2010ರಲ್ಲಿ ಎಮ್ಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಲ್ಲದೆ, ಅದರ ಸಂಗೀತ ಮತ್ತು ಸಾಹಿತ್ಯವೂ ಪ್ರಶಸ್ತಿಗೆ ನಾಮಕರಣಗೊಂಡಿತ್ತು. ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರ ಡಿಸ್ನಿ ಚಾನೆಲ್‌ನ ಒರಿಜಿನಲ್ ಮೂವೀಯಲ್ಲಿ ಸೆ.15ರಂದು ಬೆಳಿಗ್ಗೆ 10ಗಂಟೆಗೆ ಪ್ರಸಾರವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.