ADVERTISEMENT

‘ಕರೋಡ್‌ಪತಿ’ ಸುಖದುಃಖ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಚಿತ್ರದ ಹೆಸರೇನೋ ‘ಕರೋಡ್‌ಪತಿ’. ಆದರೆ ಚಿತ್ರೀಕರಣದ ಹಂತದಲ್ಲಿ ಎದುರಿಸಿದ್ದು ಬಡತನವನ್ನು (ಆರ್ಥಿಕ ಅಡಚಣೆ). ಇದು ನಟ ಕೋಮಲ್ ಅಭಿನಯದ ‘ಕರೋಡ್‌ಪತಿ’ ಚಿತ್ರದ ಹಿಂದಿನ ಕಥೆ.

ಸಿನಿಮಾ ಇಂದು  (ಮಾ.14) ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ರೂಪುಗೊಳ್ಳುವಲ್ಲಿ ತಾನು ಎದುರಿಸಿದ ಕಷ್ಟಗಳನ್ನು ಹೇಳಿಕೊಂಡಿತು. ಆದರೆ ಕುಂಟುತ್ತ, ತೆವಳುತ್ತ ರೂಪುಗೊಂಡ ಸಿನಿಮಾದ ಹಾಡುಗಳಿಗೆ ಸಿಕ್ಕ ಯಶಸ್ಸು, ಹಿಂದಿನ ಕಹಿಗಳಿಗೆಗಳನ್ನು ಮರೆಸಿದೆ ಎನ್ನುವ ಸಂತಸ ನಿರ್ಮಾಪಕರಲ್ಲಿತ್ತು. ಹಾಡುಗಳು ಗುನುಗಿಕೊಳ್ಳುವ ಗುಣ ಪಡೆದಿರುವುದೇ ನಿರ್ಮಾಪಕರಿಗೆ ಯಶಸ್ಸು ಸಿಕ್ಕಂತಾಗಿದೆಯಂತೆ.     

‘ಚಿತ್ರಕ್ಕೆ ಒಳ್ಳೆಯ ವೆನ್ಯೂ ಸಿಕ್ಕಿದೆ. ಇನ್ನು ರೆವಿನ್ಯೂ ಸಿಗಬೇಕು’ ಎನ್ನುವುದು ನಟ ಕೋಮಲ್‌ ಅನಿಸಿಕೆ. ‘ಎರಡು ಮೂರು ಕಡೆಗಳಲ್ಲಿ ಚಿತ್ರದ ಕಥೆಯನ್ನು ಬದಲಿಸಿ ಮರು ಚಿತ್ರೀಕರಣ ಮಾಡಲಾಯಿತು. ಇದರಿಂದ ನಿರ್ಮಾಪಕರಿಗೆ ಹೊರೆಯಾಯಿತು. ನಿರ್ಮಾಪಕರು ‘ಕರೋಡ್‌ಪತಿ’ಗೆ ಪೂರ್ವ ಸಿದ್ಧತೆ ಮಾಡಿಕೊಂಡೇ ನಿರ್ಮಾಣಕ್ಕೆ ಮುಂದಾಗಿದ್ದರು.

ಆದರೆ ಕಾರಣಾಂತರಗಳಿಂದ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ.  ಹೊಸದಾಗಿ ಯಾರಾದರೂ ಚಿತ್ರ ನಿರ್ಮಿಸಬೇಕು ಎಂದುಕೊಂಡಿದ್ದರೆ ನಿರ್ಮಾಪಕ ಸುರೇಶ್‌ ಅವರನ್ನು ಭೇಟಿ ಮಾಡಿ ಸಲಹೆ–ಸೂಚನೆ ಪಡೆಯಬಹುದು’ ಎಂದು ಕೋಮಲ್ ಮಾರ್ಮಿಕವಾಗಿ ಹೇಳಿದರು.

‘ಯೂಟ್ಯೂಬಿನಲ್ಲಿ ಎಂಟೂವರೆ ಲಕ್ಷ ಮಂದಿ ಹಾಡುಗಳನ್ನು ಮೆಚ್ಚಿದ್ದಾರೆ. ಚಿತ್ರದ ಹಾಡುಗಳೇ ಮುಖ್ಯ ಹೈಲೈಟ್‌’ ಎಂದು ತಮ್ಮ ಚಿತ್ರವನ್ನು ಕೋಮಲ್ ಬಣ್ಣಿಸಿದರು.

ಕೋಮಲ್ ಚಿತ್ರಗಳೆಂದರೆ ಅಲ್ಲಿ ಭರಪೂರ ನಗೆ. ಇಲ್ಲಿಯೂ ನಗೆಯ ಹಾದಿಯೇ ಇದ್ದು ಶೇ 90ರಷ್ಟು ಪ್ರೇಕ್ಷಕ ನಗುತ್ತಾನೆ. ಆದರೆ ಕ್ಲೈಮ್ಯಾಕ್ಸ್‌ನ ದೃಶ್ಯ ಪ್ರೇಕ್ಷಕನ ಮನವನ್ನು ಕಲಕಿ ಕಣ್ಣೀರು ತರಿಸುತ್ತದೆ. ಕೋಮಲ್ ಅವರನ್ನು ‘ನಗಿಸುವ ನಟ’ ಬ್ರಾಂಡ್‌ನಿಂದ ಹೊರತಾಗಿ ಈ ಚಿತ್ರದಲ್ಲಿ ನೋಡಬಹುದು ಎಂದು ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಹೇಳಿದರು.

ನಿರ್ದೇಶಕ ರಮೇಶ್‌ ಮಾತು ಚುಟುಕಾಗಿತ್ತು. ನಿರ್ಮಾಪಕ ಸುರೇಶ್ ಸಿನಿಮಾ ರೂಪುಗೊಂಡ ಸಂಕಷ್ಟಗಳನ್ನು ನೆನಪಿಸಿಕೊಂಡರು. ನಟಿ ಮೀರಾ ಚಿತ್ರ ತಂಡದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.