ADVERTISEMENT

‘ಕ್ಯೂ...’ ನಿಂದ ಹೊರಬಂದ ನೋವು...

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST

‘ಆಪ್ತ’ ಚಿತ್ರ ತೆರೆಗೆ ತರುವ ಸಂದರ್ಭ. ನಿರ್ಮಾಪರು ಮತ್ತು ನಿರ್ದೇಶಕರು ಗಾಂಧಿನಗರದಲ್ಲಿ ಪ್ರಮುಖ ಚಿತ್ರಮಂದಿರವನ್ನು ಒಂದು ತಿಂಗಳಿಗೆ ಮುನ್ನವೇ ಬುಕ್‌ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಫೋನ್ ಬಂದಿತು. ನಾನು, ನಿರ್ದೇಶಕ ಮತ್ತು ನಿರ್ಮಾಪಕರು ಅಲ್ಲಿಗೆ ಹೋದೆವು. ಅಲ್ಲಿ ಒಬ್ಬ ದೊಡ್ಡ ನಿರ್ಮಾಪಕರು, ನಿರ್ದೇಶಕರು ಇದ್ದರು.

‘ನಿಮ್ಮ ಚಿತ್ರ ಬಿಡುಗಡೆಯ ದಿನವೇ ಕನ್ನಡದಲ್ಲಿ ಐದು ಚಿತ್ರಗಳ ಬಿಡುಗಡೆ ಇದೆ. ಅದರಲ್ಲಿ ಒಬ್ಬ ಸ್ಟಾರ್ ನಟನ ಚಿತ್ರವಿದೆ. ನೀವು ಪಡೆದಿರುವ ಚಿತ್ರಮಂದಿರವನ್ನು ಆ ಸ್ಟಾರ್‌ ನಟನ ಚಿತ್ರಕ್ಕೆ ಬಿಟ್ಟುಕೊಡಬೇಕು. ನೀವು ಇನ್ನು ಬೆಳೆಯುತ್ತಿರುವವರು’ ಎಂದು ಹೇಳಿದರು. ಅವರ ಮಾತುಗಳಲ್ಲಿ ಮಾಫಿಯಾ ರೀತಿಯ ಎಚ್ಚರವಿತ್ತು. ನಮ್ಮ ಮಾತು ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರವಿತ್ತು. ಆಗಲೇ ಕನ್ನಡ ಚಿತ್ರರಂಗದ ಕೆಲವು ಬೆಳವಣಿಗೆಗಳ ಕುರಿತು ನನಗೆ ಸ್ಪಷ್ಟವಾಗಿ ಅರಿವಾಗಿದ್ದು...

ನಟ ನೀರಜ್ ಶ್ಯಾಮ್‌ ಅವರ ಮಾತುಗಳಿವು. ಕಳೆದ ನಾಲ್ಕು ವರ್ಷಗಳಿಂದ ಅವರು ಬಚ್ಚಿಟ್ಟುಕೊಂಡಿದ್ದ ಮಾತುಗಳಿವು.

ಎದೆಯಲ್ಲಿ ಅವಿತಿದ್ದ ನೋವನ್ನು ಶ್ಯಾಮ್‌ ಅವರು ಹೊರಹಾಕಿದ್ದು ‘ಕ್ಯೂ...’– ‘ಪ್ರೀತಿಗೂ, ಸಾವಿಗೂ’ ಚಿತ್ರದ ಸುದ್ದಿಗೋಷ್ಠಿಯಲ್ಲಿ. ‘ಕ್ಯೂ...’ ಮಾರ್ಚ್ 13ರಂದು ತೆರೆಗೆ ಬರುತ್ತಿದೆ. ನಾಲ್ಕು ವರ್ಷಷಗಳ ಹಿಂದೆ, ಅಂದರೆ ‘ಆಪ್ತ’ ಚಿತ್ರ ತೆರೆಗೆ ಬರುವ ಸಂದರ್ಭದಲ್ಲಿ ನೀರಜ್ ಅನುಭವಿಸಿದ ವೇದನೆ ಅವರ ಮನದಲ್ಲಿ ಇಂದಿಗೂ ಅಳಿದಿಲ್ಲ. ನೀರಜ್ ಮಾತುಗಳನ್ನು ಅನುಮೋದಿಸಿದರು ನಿರ್ದೇಶಕ ಸಂಜೀವ್ ಮೆಗೋಟಿ. ‘ಆ ನೋವನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ’ ಎಂದವರು ತಮ್ಮ ಚಿತ್ರಕ್ಕೆ ಸಹಕಾರ ಕೋರಿದರು.

‘ಕ್ಯೂ’ ಒಂದು ಹಾರರ್ ಕಾಮಿಡಿ ಚಿತ್ರವಂತೆ. ರಾಜ್ಯದ ಮೂವತ್ತು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಸಂಜೀವ್ ಮೆಗೋಟಿ, ನೀರಜ್ ಅವರ ‘ಆಪ್ತ’ ಮತ್ತು ‘ದಂಡು’ ಸಿನಿಮಾಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿ ನೇಹಾ ಸಕ್ಸೇನಾ, ಛಾಯಾಗ್ರಹಕ ಹರೀಶ್ ಸೊಂಡೆಕೊಪ್ಪ, ಸಂಭಾಷಣೆಕಾರ ವೆಂಕಟೇಶ್ ಸಂಡೂರು, ಚಿತ್ರದ ಕಾಮಿಡಿ ಪೀಸುಗಳಾದ ಕುರಿ ಸುನೀಲ್, ಹರೀಶ್ ಸಿನಿಮಾ–ಪಾತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.