‘ರಾಮ್ ಲಖನ್' ರೀಮೇಕ್ ತನ್ನ ಸೃಜನಶೀಲ ಪರೀದಿಯನ್ನು ದಾಟಿ, ಒಂದು ವ್ಯವಹಾರದ ರೂಪ ಪಡೆದಿದೆ ಎಂದು ಹಿರಿಯ ನಟ ಅನಿಲ್ ಕಪೂರ್ ಅಸಮಾಧಾನ ತೋರಿದ್ದಾರೆ. 1989ರಲ್ಲಿ ಬಿಡುಗಡೆ ಕಂಡ ರಾಮ್ ಲಖನ್ ಚಿತ್ರವನ್ನು ಸುಭಾಷ್ ಘಾಯ್ ನಿರ್ದೇಶಿದ್ದರು. ಅನಿಲ್ ಕಪೂರ್, ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್, ಡಿಂಪಲ್ ಕಪಾಡಿಯಾ ಹಾಗೂ ರಾಖಿ ತಾರಾಗಣದಲ್ಲಿದ್ದರು.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅನಿಲ್, ‘ರಾಮ್ ಲಖನ್’ ರೀಮೇಕ್ ಮಾಡುತ್ತಿರುವುದರಲ್ಲಿ ನನಗೆ ಸೃಜನಶೀಲ ಅಂಶಗಳಿಗಿಂತ ವ್ಯವಹಾರವೇ ಪ್ರಮುಖವಾಗಿ ಎದ್ದು ಕಾಣುತ್ತಿದೆ. ಆದರೆ ರೋಹಿತ್ ಶೆಟ್ಟಿ ಮತ್ತು ಕರಣ್ ಜೋಹರ್ ಮೇಲೆ ವಿಶ್ವಾಸವಿದೆ’ ಎಂದಿದ್ದಾರೆ. ಆದರೆ ಚಿತ್ರದ ರೀಮೇಕ್ ಸರಣಿಯಲ್ಲಿ ನಾಯಕನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದರ ಬಗ್ಗೆ ಅವರು ಮಾತನಾಡಿಲ್ಲ.
ತಮ್ಮ ಪಾತ್ರಕ್ಕೆ ಅರ್ಜುನ್ ಸರಿಹೊಂದುತ್ತಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ನನಗೆ ಗೊತ್ತಿಲ್ಲ. ಈ ವಿಷಯ ಚಿತ್ರ ನಿರ್ಮಿಸುವವರ ಮೇಲೆ ನಿಂತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ‘ದಿಲ್ ಧಡಕ್ನೆ ದೋ’ ಚಿತ್ರಕ್ಕೆ ದೊರೆತ ಮೆಚ್ಚುಗೆಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
‘ಈ ಚಿತ್ರ ಇಷ್ಟೊಂದು ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ನನಗೆ ಸಂತಸವಿದೆ. ಅಷ್ಟಕ್ಕೂ ಇದು ಒಂದು ಇಡೀ ಚಿತ್ರ ತಂಡದ ಒಟ್ಟು ಶ್ರಮದ ಫಲ. ಇಂತಹ ದೊಡ್ಡ ಚಿತ್ರದ ಒಂದು ಭಾಗವಾಗಲು ನನಗೆ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ನಾನು ಜೋಯಾ ಅವರಿಗೆ ಋಣಿಯಾಗಿದ್ದೇನೆ’ ಎಂದು ಮನಸ್ಸು ತುಂಬಿ ನುಡಿದಿದ್ದಾರೆ 58ರ ನಟ ಅನಿಲ್ ಕಪೂರ್. ‘ನಾನು ತಂದೆಯ, ಅಜ್ಜನ ಪಾತ್ರಗಳನ್ನು ನಿರ್ವಹಿಸಲೂ ಸಿದ್ಧನಿದ್ದೇನೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.