ADVERTISEMENT

3 ಗಂಟೆ 30 ದಿನ 30 ಸೆಕೆಂಡ್!

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಅರು ಗೌಡ
ಅರು ಗೌಡ   

ಪ್ರೀತಿ, ಪಯಣ, ಹಾಸ್ಯ, ಭಾವೋದ್ರೇಕ, ಆಕ್ಷನ್‌ನೊಟ್ಟಿಗೆ ಅನಿರೀಕ್ಷಿತ ತಿರುವು ಪಡೆಯುವ ಈ ಚಿತ್ರದ ಹೆಸರು ‘3 ಗಂಟೆ 30 ದಿನ 30 ಸೆಕೆಂಡ್’!

ಬೆಂಗಳೂರು, ರಾಮನಗರ, ಸಕಲೇಶಪುರದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಸಿನಿಮಾದ ಬಗ್ಗೆ ಹೇಳಲು ಸುದ್ದಿಗೋಷ್ಠಿಗೆ ಸಜ್ಜಾಗಿ ಬಂದಿತ್ತು.

ಮೊದಲಿಗೆ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ ಖ್ಯಾತಿಯ ಕೂದುವಳ್ಳಿ ಚಂದ್ರಶೇಖರ್‌ ಮಾತಿಗೆ ಇಳಿದರು. ‘ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳೇ ಸಿಗುತ್ತಿಲ್ಲ. ನನ್ನ ಎರಡು ಸಿನಿಮಾಗಳಲ್ಲಿ ಇದರ ಅನುಭವವಾಗಿದೆ’ ಎಂದು ವಾಸ್ತವದ ಮೇಲೆ ಬೆಳಕು ಚೆಲ್ಲಿದರು.

ADVERTISEMENT

(ಜಿ.ಕೆ. ಮಧುಸೂಧನ್)

ನಾನು ನಿರ್ದೇಶಿಸಿದ ‘ಕೆಂಪಮ್ಮನ ಕೋರ್ಟ್‌ ಕೇಸು’ ಚಿತ್ರದ ಪ್ರದರ್ಶನಕ್ಕೆ ಚಿತ್ರಮಂದಿರವೊಂದರಲ್ಲಿ ಸಮಯ ನಿಗದಿಪಡಿಸಲಾಗಿತ್ತು. ಆ ವೇಳೆಗೆ ಪ್ರೇಕ್ಷಕರು ಹೋದರೆ ಪ್ರದರ್ಶನವೇ ಇರಲಿಲ್ಲ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಬೇಕಿವೆ. ಆಗ ಮಾತ್ರ ಚಿತ್ರರಂಗ ಉಳಿಯಲಿದೆ ಎಂದ ಅವರ ಮಾತಿನಲ್ಲಿ ನೋವು ಇಣುಕಿತ್ತು.

ನಿರ್ದೇಶಕ ಜಿ.ಕೆ. ಮಧುಸೂಧನ್ ಅವರಿಗೆ ಇದು ಮೊದಲ ಚಿತ್ರ. ‘ಇದೊಂದು ನವೀರಾದ ಪ್ರೇಮ ಕಾವ್ಯ. ಪ್ರೇಕ್ಷಕರಿಗೆ ಮನರಂಜನೆ ನೀಡುವುದು ನಮ್ಮ ಗುರಿ. ಇದು ಟಿ.ವಿ. ಚಾನೆಲ್ ಮಾಲೀಕನ ಪುತ್ರಿ ಮತ್ತು ವಕೀಲನ ನಡುವೆ ನಡೆಯುವ ಕಥೆ. ಸಂಕಷ್ಟಕ್ಕೆ ಸಿಲುಕಿದ ಈ ಇಬ್ಬರು ಹೇಗೆ ಹೊರಬರುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ’ ಎಂದು ಕಥೆಯ ಗುಟ್ಟು ಬಿಚ್ಚಿಟ್ಟರು ಮಧುಸೂಧನ್.

‘ಜೀವನದಲ್ಲಿ ಪ್ರತಿ ಸನ್ನಿವೇಶವೂ ಒಮ್ಮೆಲೆ ಬರುವುದಿಲ್ಲ. ರ್‍ಯಾಂಡಮ್‌ ಆಗಿ ಬರುತ್ತವೆ. ಆಗ ಬದುಕಿನಲ್ಲಿ ಏನೋ ಸಂಭವಿಸುತ್ತದೆ. ಇದಕ್ಕೆ ವಿಧಿ ಎನ್ನುತ್ತೇವೆ. ಇವೆಲ್ಲವನ್ನೂ ಮೀರಿದ ವಿಶಿಷ್ಟ ಪ್ರೇಮ ಕಥೆ ಇದಾಗಿದೆ’ ಎಂದರು.

(ಶ್ರೀಧರ್‌ ವಿ. ಸಂಭ್ರಮ್)

ಸಂಗೀತ ನಿರ್ದೇಶಕ ಶ್ರೀಧರ್‌ ವಿ. ಸಂಭ್ರಮ್, ‘ಹಾಡುಗಳು ಕಥೆಗೆ ಪೂರಕವಾಗಿವೆ. ಒಟ್ಟು 5 ಹಾಡುಗಳಿವೆ. ಸಂಗೀತ ಸಂಯೋಜನೆ ವೇಳೆ ನಿರ್ದೇಶಕರೊಂದಿಗೆ ಸಂಘರ್ಷ ನಡೆಸಿದ್ದೂ ಉಂಟು’ ಎಂದರು.

ನಾಯಕ ನಟ ಅರು ಗೌಡ, ‘ನನ್ನದು ಚಿತ್ರದಲ್ಲಿ ಲಾಯರ್‌ ಪಾತ್ರ. ವೃತ್ತಿಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿರುವುದಿಲ್ಲ. ಆದರೆ, ಅದರಾಚೆಗೆ ವ್ಯಾಜ್ಯಗಳನ್ನು ಪರಿಹರಿಸುತ್ತೇನೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು.

ಭಾರತ ಮತ್ತು ಪಾಕ್‌ ಯುದ್ಧದಲ್ಲಿ ಕಣ್ಣು, ಕಿವಿ, ಮಾತನಾಡುವ ಸಾಮರ್ಥ್ಯ ಕಳೆದುಕೊಂಡಿರುವ ಸೈನ್ಯಾಧಿಕಾರಿಯ ಪಾತ್ರದಲ್ಲಿ ನಟ ದೇವರಾಜ್‌ ನಟಿಸಿದ್ದಾರೆ. ನಟಿ ಕಾವ್ಯಾ ಶೆಟ್ಟಿ, ಸುಧಾರಾಣಿ, ಸುಂದರ್, ಯಮುನಾ ಚಿತ್ರದಲ್ಲಿದ್ದಾರೆ. ಚಂದ್ರಶೇಖರ್‌ ಆರ್‌. ಪದ್ಮಶಾಲಿ ಬಂಡವಾಳ ಹೂಡಿದ್ದಾರೆ. ಮುಂದಿನ ತಿಂಗಳು ತೆರೆಗೆ ಬರಲು ಚಿತ್ರತಂಡ ಸಿದ್ಧತೆಯಲ್ಲಿ ತೊಡಗಿದೆ.

(ಚಂದ್ರಶೇಖರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.